ಎಲ್‌ಡಿಎಫ್ ಸರ್ಕಾರದ ವಿವಾದಿತ ‘ಕೆ-ರೈಲ್’ ಯೋಜನೆ ರದ್ದುಗೊಳಿಸಿದ ನೂತನ ಸಿಎಂ ಸತೀಶನ್ | K-Rail project

K-Rail project | ಕೇರಳ ನೂತನ ಮುಖ್ಯಮಂತ್ರಿ ವಿ ಡಿ ಸತೀಶನ್
K-Rail project | ಕೇರಳ ನೂತನ ಮುಖ್ಯಮಂತ್ರಿ ವಿ ಡಿ ಸತೀಶನ್
Published on
ತಿರುವನಂತಪುರಂ: ಹಿಂದಿನ ಎಡರಂಗ (LDF) ಸರ್ಕಾರ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಉಪಕ್ರಮವಾದ ತಿರುವನಂತಪುರಂ - ಕಾಸರಗೋಡು ಸಿಲ್ವರ್‌ ಲೈನ್ ರೈಲು ಕಾರಿಡಾರ್ (K-Rail project) ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ನೂತನ ಮುಖ್ಯಮಂತ್ರಿ ವಿ ಡಿ ಸತೀಶನ್ ಬುಧವಾರ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಎಂ ಸತೀಶನ್, ಭೂಮಿ ಗುರುತಿಸುವಿಕೆ ಮತ್ತು ಗಡಿ ನಿರ್ಣಯಕ್ಕಾಗಿ ರಾಜ್ಯಾದ್ಯಂತ ಅಳವಡಿಸಲಾಗಿದ್ದ ಎಲ್ಲಾ ಸರ್ವೆ ಕಲ್ಲುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಕಂದಾಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಇದರೊಂದಿಗೆ, ಈ ಯೋಜನೆಗಾಗಿ ಇದುವರೆಗೆ ಆರಂಭಿಸಲಾಗಿದ್ದ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆಗಳು ಅಧಿಕೃತವಾಗಿ ರದ್ದಾಗಲಿವೆ ಎಂದು ಸ್ಪಷ್ಟಪಡಿಸಿದರು.

ಯೋಜನೆಯ ಹಿನ್ನೆಲೆ

2019ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಪ್ರಸ್ತಾಪಿಸಿದ್ದ ಈ 530 ಕಿಲೋಮೀಟರ್ ಉದ್ದದ ಅರೆ-ವೇಗದ (semi-high-speed) ರೈಲ್ವೆ ಕಾರಿಡಾರ್, ಕೇರಳದ ದಕ್ಷಿಣದ ರಾಜಧಾನಿ ತಿರುವನಂತಪುರಂನಿಂದ ಉತ್ತರದ ಅತ್ಯಂತ ಕೊನೆಯ ಜಿಲ್ಲೆಯಾದ ಕಾಸರಗೋಡನ್ನು ಸಂಪರ್ಕಿಸುವ ಗುರಿಯನ್ನು ಹೊಂದಿತ್ತು. ಆದರೆ, ಈ ಯೋಜನೆಯ ಜಾರಿಯಿಂದ ಎದುರಾಗಬಹುದಾದ ಬೃಹತ್ ಪ್ರಮಾಣದ ಭೂಸ್ವಾಧೀನ ಮತ್ತು ಜನರ ಸ್ಥಳಾಂತರದ ಭೀತಿಯಿಂದಾಗಿ ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಜೊತೆಗೆ ತೀವ್ರ ರಾಜಕೀಯ ವಿರೋಧ ಕೂಡ ಎದುರಾಗಿತ್ತು. ಈ ಹಿಂದೆ ನಡೆದಿದ್ದ ಸಾರ್ವಜನಿಕ ಹೋರಾಟದಲ್ಲಿ ಸ್ವತಃ ಕಾಂಗ್ರೆಸ್ ಪಕ್ಷವೇ ಮುಂಚೂಣಿಯಲ್ಲಿದ್ದರಿಂದ ಈ ಕ್ರಮ ಸರ್ಕಾರಕ್ಕೂ ಅನಿವಾರ್ಯವಾಗಿತ್ತು.

ಪ್ರತಿಭಟನಾಕಾರರ ಮೇಲಿನ ಮೊಕದ್ದಮೆಗಳು ವಾಪಸ್

ಈ ಪ್ರಮುಖ ನಿರ್ಧಾರದ ಜೊತೆಗೆ, ರಾಜ್ಯಾದ್ಯಂತ ಸಿಲ್ವರ್ ಲೈನ್ ಯೋಜನೆಯ ವಿರುದ್ಧ ನಡೆದಿದ್ದ ವಿವಿಧ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಮೊಕದ್ದಮೆಗಳ ಸ್ವರೂಪವನ್ನು ಸರ್ಕಾರ ಪೂರ್ಣವಾಗಿ ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು. ಇಂತಹ ಪ್ರಕರಣಗಳನ್ನು ಹಿಂಪಡೆಯಲು ನ್ಯಾಯಾಲಯಗಳಿಗೆ ಅಗತ್ಯ ಪ್ರಮಾಣಪತ್ರಗಳನ್ನು ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಇದೇ ವೇಳೆ ಮಾಧ್ಯಮಗಳಿಗೆ ತಿಳಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net