ಎಂಬಿಬಿಎಸ್ ಸೀಟಿಗಾಗಿ ಸ್ವಂತ ಕಾಲನ್ನೇ ಕತ್ತರಿಸಿಕೊಂಡ ಉತ್ತರ ಪ್ರದೇಶದ ಭೂಪ..! Suraj Bhaskar

ಎಂಬಿಬಿಎಸ್ ಸೀಟಿಗಾಗಿ ಸ್ವಂತ ಕಾಲನ್ನೇ ಕತ್ತರಿಸಿಕೊಂಡ ಉತ್ತರ ಪ್ರದೇಶದ ಭೂಪ..!
ಎಂಬಿಬಿಎಸ್ ಸೀಟಿಗಾಗಿ ಸ್ವಂತ ಕಾಲನ್ನೇ ಕತ್ತರಿಸಿಕೊಂಡ ಉತ್ತರ ಪ್ರದೇಶದ ಭೂಪ..!
Published on
ಲಖನೌ: ವೈದ್ಯಕೀಯ ಸೀಟು ಪಡೆಯಬೇಕೆಂಬ ಹಪಾಹಪಿಗೆ ಬಿದ್ದ ಯುವಕನೊಬ್ಬ ಮಾಡಿಕೊಂಡ ಎಡವಟ್ಟು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಎಂಬಿಬಿಎಸ್ (MBBS) ಪ್ರವೇಶಾತಿಯಲ್ಲಿ ಅಂಗವಿಕಲರ ಕೋಟಾದಡಿ ಸೀಟು ಗಿಟ್ಟಿಸಿಕೊಳ್ಳಲು 24 ವರ್ಷದ ಸೂರಜ್ ಭಾಸ್ಕರ್(Suraj Bhaskar) ಎಂಬ ಯುವಕ ತನ್ನ ಸ್ವಂತ ಕಾಲನ್ನೇ ಕತ್ತರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ.

ಪೊಲೀಸರ ದಿಕ್ಕು ತಪ್ಪಿಸುವ ಯತ್ನ

ಆರಂಭದಲ್ಲಿ ಸೂರಜ್ ಭಾಸ್ಕರ್ ಪೊಲೀಸರಿಗೆ ದೂರು ನೀಡಿ, ತನ್ನ ಮೇಲೆ ಅಪರಿಚಿತರು ಹಲ್ಲೆ ನಡೆಸಿ, ಬಲವಂತವಾಗಿ ಕಾಲನ್ನು ಕತ್ತರಿಸಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾರೆ. ಈ ಘಟನೆಯ ಕ್ರೌರ್ಯ ಕಂಡು ಸ್ಥಳೀಯರು ಆತಂಕಗೊಂಡಿದ್ದರು ಮತ್ತು ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದರು.

ತನಿಖೆಯಲ್ಲಿ ಬಯಲಾದ ಅಸಲಿ ಸತ್ಯ

ಜೌನ್ಪುರ ಪೊಲೀಸರು ಪ್ರಕರಣದ ಆಳಕ್ಕೆ ಇಳಿದಾಗ ಸೂರಜ್ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ವಿಧಿವಿಜ್ಞಾನ ತಂಡವು ಗಾಯವನ್ನು ಪರಿಶೀಲಿಸಿದಾಗ, ಇದು ಯಾರೋ ಹಲ್ಲೆ ಮಾಡಿದ ಗಾಯವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ತಾನೇ ಮಾಡಿಕೊಂಡಿರುವ ಗಾಯ ಎಂದು ತಿಳಿದುಬಂದಿದೆ.
ಪೊಲೀಸರ ತೀವ್ರ ವಿಚಾರಣೆಯ ನಂತರ ಸತ್ಯಾಂಶ ಹೊರಬಿದ್ದಿದೆ. ನೀಟ್ ಪರೀಕ್ಷೆಯಲ್ಲಿ ಅಂಗವಿಕಲರಿಗೆ ಸಿಗುವ ರಿಯಾಯಿತಿ ಮತ್ತು ಕಡಿಮೆ ಅಂಕಗಳಿಗೆ ಸಿಗುವ ಸೀಟನ್ನು ಪಡೆಯಲು ತನಗೆ ಅಂಗವಿಕಲ ಪ್ರಮಾಣಪತ್ರ ಬೇಕಿತ್ತು. ಇದಕ್ಕಾಗಿಯೇ ಆತ ಈ ಭೀಕರ ಕೃತ್ಯ ಎಸಗಿದ್ದಾನೆ.

ಹೀಗೇಕೆ ಮಾಡಿದ ಈ ಭೂಪ

ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಸೀಟು ಪಡೆಯುವುದು ಅತ್ಯಂತ ಕಠಿಣ ಸ್ಪರ್ಧೆಯಾಗಿದೆ. ಅಂಗವಿಕಲ ಕೋಟಾದಲ್ಲಿ ಕೆಲವು ಪ್ರಮುಖ ಲಾಭಗಳಿರುತ್ತವೆ ಎಂದಿದ್ದಾನೆ. ಅಲ್ಲದೆ, ಸಾಮಾನ್ಯ ವರ್ಗಕ್ಕಿಂತ ಕಡಿಮೆ ಅಂಕ ಬಂದರೂ ಸೀಟು ಸಿಗುವ ಸಾಧ್ಯತೆ ಇರುತ್ತದೆ. ಪ್ರತಿ ಕಾಲೇಜಿನಲ್ಲಿಯೂ ಅಂಗವಿಕಲರಿಗೆಂದೇ ನಿರ್ದಿಷ್ಟ ಸೀಟುಗಳು ಮೀಸಲಿರುತ್ತವೆ.

ಕಾನೂನು ಕ್ರಮ ಮತ್ತು ದುರಂತ ಅಂತ್ಯ

ಸದ್ಯ ಪೊಲೀಸರು ಸೂರಜ್ ಭಾಸ್ಕರ್ ವಿರುದ್ಧ ಸುಳ್ಳು ದೂರು ನೀಡಿ ದಾರಿ ತಪ್ಪಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯನಾಗಬೇಕೆಂಬ ಹಠದಿಂದ ತನ್ನ ಭವಿಷ್ಯವನ್ನೇ ಆತ ಹಾಳು ಮಾಡಿಕೊಂಡಿದ್ದಾನೆ. ಈಗ ಆತ ಕಾಯಂ ಅಂಗವಿಕಲನಾಗಿದ್ದರೂ, ಇಂತಹ ವಂಚನೆಯ ದಾರಿಯಿಂದಾಗಿ ಆತನಿಗೆ ವೈದ್ಯಕೀಯ ವೃತ್ತಿ ಸೇರುವುದು ಅಸಾಧ್ಯ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯು ಇಂದಿನ ಯುವಜನತೆಯ ಮೇಲೆ ಇರುವ ಶೈಕ್ಷಣಿಕ ಒತ್ತಡ ಮತ್ತು ಅಡ್ಡದಾರಿಯಲ್ಲಿ ಯಶಸ್ಸು ಪಡೆಯುವ ಅಪಾಯಕಾರಿ ಮನಸ್ಥಿತಿಗೆ ಕನ್ನಡಿ ಹಿಡಿದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net