ಇರಾನ್ ತಂತ್ರಜ್ಞಾನಕ್ಕೆ ಅಮೆರಿಕದ ರಿವರ್ಸ್ ಪಂಚ್! ದೊಡ್ಡಣ್ಣನ ಹೊಸ ಕಿಲ್ಲರ್ ಡ್ರೋನ್ ಕಂಡು ಬೆಚ್ಚಿಬಿದ್ದ ಜಗತ್ತು! Lucas Drone

 ಇರಾನ್ ತಂತ್ರಜ್ಞಾನಕ್ಕೆ ಅಮೆರಿಕದ ರಿವರ್ಸ್ ಪಂಚ್! ದೊಡ್ಡಣ್ಣನ ಹೊಸ ಕಿಲ್ಲರ್ ಡ್ರೋನ್ ಕಂಡು ಬೆಚ್ಚಿಬಿದ್ದ ಜಗತ್ತು!
ಇರಾನ್ ತಂತ್ರಜ್ಞಾನಕ್ಕೆ ಅಮೆರಿಕದ ರಿವರ್ಸ್ ಪಂಚ್! ದೊಡ್ಡಣ್ಣನ ಹೊಸ ಕಿಲ್ಲರ್ ಡ್ರೋನ್ ಕಂಡು ಬೆಚ್ಚಿಬಿದ್ದ ಜಗತ್ತು!
Published on
ವಾಷಿಂಗ್ಟನ್: ಆಧುನಿಕ ಯುದ್ಧಭೂಮಿಯಲ್ಲಿ ಅಬ್ಬರಿಸುತ್ತಿರುವ ಕ್ಷಿಪಣಿಗಳು ಮತ್ತು ಅತ್ಯಾಧುನಿಕ ಯುದ್ಧವಿಮಾನಗಳ ನಡುವೆ, ಈಗ 'ಕಡಿಮೆ ವೆಚ್ಚದ ಡ್ರೋನ್​ಗಳು ಹೊಸ ಕ್ರಾಂತಿ ಸೃಷ್ಟಿಸಿವೆ. ಅಚ್ಚರಿಯ ವಿಷಯವೆಂದರೆ, ಜಗತ್ತಿನ ನಂಬರ್ 1 ಸೈನ್ಯ ಎನಿಸಿಕೊಂಡಿರುವ ಅಮೆರಿಕ, ಇರಾನ್ ವಿರುದ್ಧ ಹೋರಾಡಲು ಅದೇ ಇರಾನ್‌ನ ತಂತ್ರಜ್ಞಾನದಿಂದ ಸ್ಫೂರ್ತಿ ಪಡೆದ ಲ್ಯೂಕಾಸ್ (Lucas Drone) ಎಂಬ ಹೊಸ ಡ್ರೋನ್ ಅನ್ನು ಅಖಾಡಕ್ಕಿಳಿಸಿದೆ.
ಸಿಲಿಕಾನ್ ವ್ಯಾಲಿಯ ಬಿಲಿಯನ್ ಡಾಲರ್ ಕಂಪನಿಗಳಲ್ಲದ, ಅಮೆರಿಕದ ರಕ್ಷಣಾ ಇಲಾಖೆಯ ಇಂಜಿನಿಯರ್‌ಗಳೇ ಸ್ವತಃ ಅಭಿವೃದ್ಧಿಪಡಿಸಿದ ಈ ಡ್ರೋನ್ ಈಗ ರಕ್ಷಣಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಏನಿದು ಲ್ಯೂಕಾಸ್ ಡ್ರೋನ್..? ಇರಾನ್‌ನೊಂದಿಗಿನ ನಂಟೇನು?

ಸಾಮಾನ್ಯವಾಗಿ ಅಮೆರಿಕದ ಶಸ್ತ್ರಾಸ್ತ್ರಗಳೆಂದರೆ ಅವು ಅತ್ಯಂತ ದುಬಾರಿ ಮತ್ತು ಸಂಕೀರ್ಣ ತಂತ್ರಜ್ಞಾನದಿಂದ ಕೂಡಿರುತ್ತವೆ. ಆದರೆ ಲ್ಯೂಕಾಸ್ ಡ್ರೋನ್ ಕಥೆಯೇ ಬೇರೆಯಾಗಿದ್ದು. ಇರಾನ್ ಅಭಿವೃದ್ಧಿಪಡಿಸಿದ್ದ ಶಾಹೆದ್ ಡ್ರೋನ್‌ಗಳನ್ನು ಅಮೆರಿಕದ ಇಂಜಿನಿಯರ್‌ಗಳು ಆಳವಾಗಿ ಅಧ್ಯಯನ ಮಾಡಿ, ಅದರ ಸರಳೀಕೃತ ಮತ್ತು ಹೆಚ್ಚು ಪರಿಣಾಮಕಾರಿ ಆವೃತ್ತಿಯನ್ನು ಸಿದ್ಧಪಡಿಸಿದ್ದಾರೆ.
ರಕ್ಷಣಾ ವಿಶ್ಲೇಷಕರು ಈ ಡ್ರೋನ್ ಅನ್ನು ಶಸ್ತ್ರಾಸ್ತ್ರ ಲೋಕದ 'ಟೊಯೋಟಾ ಕೊರೊಲ್ಲಾ ಎಂದು ಕರೆಯುತ್ತಿದ್ದಾರೆ. ಅಂದರೆ, ಇದು ಐಷಾರಾಮಿ ಅಲ್ಲದಿದ್ದರೂ ಅತ್ಯಂತ ವಿಶ್ವಾಸಾರ್ಹ ಮತ್ತು ಸಾಮಾನ್ಯ ಜನರಿಗೂ ಕೈಗೆಟುಕುವ ಬೆಲೆಯಲ್ಲಿದೆ.

ತಾಂತ್ರಿಕ ಸಾಮರ್ಥ್ಯ ಮತ್ತು ಬೆಲೆ

ಲ್ಯೂಕಾಸ್ ಡ್ರೋನ್‌ನ ವಿಶೇಷತೆಗಳು ಯುದ್ಧತಂತ್ರವನ್ನೇ ಬದಲಿಸುವಂತಿವೆ.
ಕಡಿಮೆ ವೆಚ್ಚ: ಒಂದು ಅಮೆರಿಕನ್ ಮಿಸೈಲ್ ಕೋಟ್ಯಂತರ ರೂಪಾಯಿ ವೆಚ್ಚವಾದರೆ, ಒಂದು ಲ್ಯೂಕಾಸ್ ಡ್ರೋನ್ ಬೆಲೆ ಕೇವಲ $10,000 ರಿಂದ $55,000 (ಸುಮಾರು 8 ರಿಂದ 45 ಲಕ್ಷ ರೂಪಾಯಿಗಳು). ಇದು ಇರಾನ್‌ನ ಶಾಹೆದ್ ಡ್ರೋನ್‌ಗಳ ಬೆಲೆಗೆ ಸಮಾನವಾಗಿದೆ.
ದೂರಗಾಮಿ ಸಾಮರ್ಥ್ಯ: ಇದು ಸತತ 6 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು ಮತ್ತು ಸುಮಾರು 800 ಕಿ.ಮೀ ಗೂ ಹೆಚ್ಚು ದೂರ ಕ್ರಮಿಸಿ ಗುರಿಯನ್ನು ಧ್ವಂಸಗೊಳಿಸಬಲ್ಲದು.
ಸ್ವಯಂಚಾಲಿತ ಕಾರ್ಯಾಚರಣೆ: ಇದು ಮಾನವ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಗುರಿಯನ್ನು ಗುರುತಿಸಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

ಯುದ್ಧತಂತ್ರದಲ್ಲಿ ಬದಲಾವಣೆ ಏಕೆ..?

ಈವರೆಗೆ ಅಮೆರಿಕದ 400ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಡ್ರೋನ್ ತಂತ್ರಜ್ಞಾನಕ್ಕಾಗಿ ಹೂಡಿಕೆ ಮಾಡಿದ್ದವು. ಆದರೆ ಯುದ್ಧಭೂಮಿಯಲ್ಲಿ ಆ ದುಬಾರಿ ಡ್ರೋನ್‌ಗಳಿಗಿಂತ ಸರಳವಾದ ಲ್ಯೂಕಾಸ್ ಹೆಚ್ಚು ಯಶಸ್ವಿಯಾಗಿದೆ. ಕಡಿಮೆ ವೆಚ್ಚದ ಡ್ರೋನ್‌ಗಳನ್ನು ನೂರಾರು ಸಂಖ್ಯೆಯಲ್ಲಿ ಏಕಕಾಲಕ್ಕೆ ಪ್ರಯೋಗಿಸುವ ಮೂಲಕ ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಯನ್ನು ದಾರಿ ತಪ್ಪಿಸಲು ಇದು ಸಹಕಾರಿಯಾಗಲಿದೆ.
ದುಬಾರಿ ಕ್ಷಿಪಣಿಗಳನ್ನು ಬಳಸಿ ಸಣ್ಣ ಸಣ್ಣ ಗುರಿಗಳನ್ನು ಹೊಡೆಯುವುದು ಆರ್ಥಿಕವಾಗಿ ನಷ್ಟ. ಅದಕ್ಕೆ ಲ್ಯೂಕಾಸ್‌ನಂತಹ ಕಡಿಮೆ ವೆಚ್ಚದ ಡ್ರೋನ್‌ಗಳೇ ಅತ್ಯುತ್ತಮ ಉತ್ತರ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಸವಾಲುಗಳೇನು..?

ಆದರೆ, ಲ್ಯೂಕಾಸ್ ಡ್ರೋನ್ ಸಂಪೂರ್ಣವಾಗಿ ಅಜೇಯವೇನಲ್ಲ. ಈ ಡ್ರೋನ್‌ಗಳು ಇಲೆಕ್ಟ್ರಾನಿಕ್ ವಾರ್‌ಫೇರ್ ಅಥವಾ ಜಿಪಿಎಸ್ ಜಾಮಿಂಗ್ ತಂತ್ರಜ್ಞಾನವಿರುವ ಪ್ರದೇಶಗಳಲ್ಲಿ ವಿಫಲವಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ರಷ್ಯಾ ಮತ್ತು ಇರಾನ್‌ನಂತಹ ದೇಶಗಳು ಸುಧಾರಿತ ಜಾಮಿಂಗ್ ತಂತ್ರಜ್ಞಾನ ಹೊಂದಿದ್ದು, ಲ್ಯೂಕಾಸ್‌ನ ಹಾರಾಟವನ್ನು ಅವು ಅಸ್ತವ್ಯಸ್ತಗೊಳಿಸಬಹುದು.
ಅಮೆರಿಕವು ತನ್ನ ಶತ್ರುವಿನ ತಂತ್ರಜ್ಞಾನವನ್ನೇ ಬಳಸಿ ಅವರಿಗೆ ಪ್ರತ್ಯುತ್ತರ ನೀಡುತ್ತಿರುವುದು ಜಾಗತಿಕ ರಕ್ಷಣಾ ನೀತಿಯಲ್ಲಿ ಮಹತ್ವದ ತಿರುವಾಗಿದ್ದು. ಇರಾನ್ ಬೆಂಬಲಿತ ಮಿಲಿಟರಿ ಗುಂಪುಗಳ ವಿರುದ್ಧ ಈ ಲ್ಯೂಕಾಸ್ ಈಗಾಗಲೇ ತನ್ನ ಪ್ರತಾಪ ತೋರಿಸಲು ಆರಂಭಿಸಿದೆ. ಯುದ್ಧ ಎಂದರೆ ಕೇವಲ ದುಬಾರಿ ಶಸ್ತ್ರಾಸ್ತ್ರಗಳಲ್ಲ, ಅದು ಸಮಯೋಚಿತ ಬುದ್ಧಿವಂತಿಕೆಯೂ ಹೌದು ಎಂಬುದನ್ನು 'ಲ್ಯೂಕಾಸ್' ಸಾಬೀತುಪಡಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net