US-Iran Talks: ಟ್ರಂಪ್ ಶಾಂತಿ ಒಪ್ಪಂದ ಘೋಷಣೆ; ಆದರೆ ಇನ್ನೂ ಅಂತಿಮ ನಿರ್ಧಾರ ಇಲ್ಲ ಎಂದ ಇರಾನ್!

US-Iran Talks
US-Iran Talks
Published on
ಟೆಹ್ರಾನ್​​: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ(US-Iran Talks) ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇರಾನ್ ನಾಯಕತ್ವವು ಶಾಂತಿ ಒಪ್ಪಂದದ ಕರಡು ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವ ಕಾರಣ, ಇರಾನ್ ವಿರುದ್ಧ ನಡೆಸಲು ಯೋಜಿಸಲಾಗಿದ್ದ ವೈಮಾನಿಕ ದಾಳಿ ಮತ್ತು ಬಾಂಬ್ ದಾಳಿಗಳನ್ನು ರದ್ದುಪಡಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ವೈಟ್ ಹೌಸ್‌ನ ಓವಲ್ ಕಚೇರಿಯಲ್ಲಿ ಮಾಧ್ಯಮ ಶುಕ್ರವಾರ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ಇರಾನ್‌ನ ಉನ್ನತ ನಾಯಕ ಮೊಜ್ತಬಾ ಖಮೆನೇಯಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ತಮಗೆ ಲಭಿಸಿದೆ ಎಂದು ತಿಳಿಸಿದರು.
ಅಲ್ಲದೆ, ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದದ ಬಹುತೇಕ ಅಂಶಗಳಿಗೆ ಸಂಬಂಧಪಟ್ಟ ಎಲ್ಲ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದು ಟ್ರಂಪ್ ಹೇಳಿದ್ದಾರೆ. ಈ ಪ್ರಕ್ರಿಯೆಯಲ್ಲಿ ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಕತಾರ್, ಟರ್ಕಿ, ಪಾಕಿಸ್ತಾನ, ಬಹ್ರೇನ್, ಕುವೈತ್, ಜೋರ್ಡನ್ ಹಾಗೂ ಈಜಿಪ್ಟ್ ದೇಶಗಳೂ ಭಾಗಿಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಆದರೆ ಟ್ರಂಪ್ ಹೇಳಿಕೆಗೆ ಇರಾನ್ ಕಡೆಯಿಂದ ಸಂಪೂರ್ಣ ಬೆಂಬಲ ಸಿಕ್ಕಿಲ್ಲ. ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ, ಅಮೆರಿಕದೊಂದಿಗೆ ಯಾವುದೇ ಪ್ರಾಥಮಿಕ ಒಪ್ಪಂದದ ಕರಡು ಪಠ್ಯಕ್ಕೆ ಇನ್ನೂ ಅಂತಿಮ ಅನುಮೋದನೆ ನೀಡಿಲ್ಲ ಎಂದು ವರದಿ ಮಾಡಿದೆ. ಮಾತುಕತೆ ತಂಡದ ಸಮೀಪದ ಮೂಲಗಳ ಪ್ರಕಾರ, ಒಪ್ಪಂದದ ಬಗ್ಗೆ ಚರ್ಚೆ ಮುಂದುವರಿದಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.
ಇರಾನ್‌ನ ಮತ್ತೊಂದು ಪ್ರಮುಖ ಸುದ್ದಿ ಸಂಸ್ಥೆಯಾದ ತಸ್ನೀಮ್, ಟ್ರಂಪ್ ಈ ಹಿಂದೆ ಕೂಡ ಇಂತಹ ಘೋಷಣೆಗಳನ್ನು ಮಾಡಿದ್ದರು. ಆದ್ದರಿಂದ ಇರಾನ್ ಸರ್ಕಾರ ಅಧಿಕೃತವಾಗಿ ಪ್ರಕಟಿಸುವವರೆಗೂ ಇಂತಹ ಹೇಳಿಕೆಗಳನ್ನು ಎಚ್ಚರಿಕೆಯಿಂದ ನೋಡಬೇಕು ಎಂದು ಹೇಳಿದೆ.
ಇದೇ ವೇಳೆ, ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಒಪ್ಪಂದದ ಬಹುತೇಕ ಅಂಶಗಳ ಬಗ್ಗೆ ಚರ್ಚೆ ಪೂರ್ಣಗೊಂಡಿದ್ದರೂ, ಅಮೆರಿಕ ಪದೇ ಪದೇ ತನ್ನ ನಿಲುವು ಬದಲಾಯಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
"ಇರಾನ್ ತನ್ನ ಪ್ರಮುಖ ಹಿತಾಸಕ್ತಿಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇನ್ನೂ ಒಪ್ಪಂದದ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಶಾಂತಿ ಪ್ರಕ್ರಿಯೆಯ ಪ್ರಮುಖ ಉದ್ದೇಶ ಹೋರ್ಮುಜ್ ಜಲಸಂಧಿಯನ್ನು ಪುನಃ ಸಂಪೂರ್ಣವಾಗಿ ತೆರೆಯುವುದು ಮತ್ತು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಎನ್ನಲಾಗಿದೆ. ಜೊತೆಗೆ ಇರಾನ್‌ನ ಅಣು ಕಾರ್ಯಕ್ರಮ ಹಾಗೂ ಅಮೆರಿಕದ ನಿರ್ಬಂಧಗಳ ಬಗ್ಗೆ ಮುಂದಿನ 60 ದಿನಗಳ ಕಾಲ ಹೆಚ್ಚಿನ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಫೆಬ್ರವರಿ 28ರಂದು ಆರಂಭವಾದ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಏಪ್ರಿಲ್ 8ರಿಂದ ಕದನ ವಿರಾಮ ಜಾರಿಯಲ್ಲಿದ್ದರೂ, ಇತ್ತೀಚಿನ ದಿನಗಳಲ್ಲಿ ಎರಡೂ ಕಡೆಯಿಂದ ಸಣ್ಣ ಮಟ್ಟಿನ ದಾಳಿಗಳು ನಡೆದಿವೆ. ಈಗ ನಡೆಯುತ್ತಿರುವ ಮಾತುಕತೆಗಳು ಯಶಸ್ವಿಯಾದರೆ, ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಹೊಸ ದಾರಿ ತೆರೆದುಕೊಳ್ಳುವ ನಿರೀಕ್ಷೆ ಮೂಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net