ನಾವೆಲ್ಲ 2026ರಲ್ಲಿದ್ರೆ ಈ ಒಂದು ದೇಶ ಮಾತ್ರ ಇನ್ನೂ 2018ರಲ್ಲೇ ಇದೆ... ಇಲ್ಲಿದೆ ನೋಡಿ ಅಚ್ಚರಿಯ ಕಾರಣ! Unknown Facts

ಗೀಜ್ ಕ್ಯಾಲೆಂಡರ್
ಗೀಜ್ ಕ್ಯಾಲೆಂಡರ್
Published on

ಪ್ರಮುಖ ಮುಖ್ಯಾಂಶಗಳು

  • ಈ ಜಗತ್ತಿನ ಎಲ್ಲಾ ದೇಶಗಳು 2026ನೇ ಹೊಸ ವರ್ಷಕ್ಕೆ ಪ್ರವೇಶಿಸಿವೆ
  • 2025ಕ್ಕೆ ಆತ್ಮೀಯ ವಿದಾಯ ಹೇಳಿ, ಕನಸುಗಳೊಂದಿಗೆ 2026ನೇ ವರ್ಷಕ್ಕೆ ಜನರು ಕಾಲಿಟ್ಟಿದ್ದಾರೆ
  • ಆದರೆ, ಜಗತ್ತಿನ ಒಂದು ದೇಶ ಮಾತ್ರ ಇನ್ನೂ 2018ನೇ ವರ್ಷದಲ್ಲೇ ಇದೆ
Unknown Facts : ಈ ಜಗತ್ತಿನ ಎಲ್ಲಾ ದೇಶಗಳು 2026ನೇ ಹೊಸ ವರ್ಷಕ್ಕೆ ಪ್ರವೇಶಿಸಿವೆ. 2025ಕ್ಕೆ ಆತ್ಮೀಯ ವಿದಾಯ ಹೇಳಿ, ಸಾಕಷ್ಟು ಕನಸುಗಳನ್ನು ಹೊತ್ತು 2026ನೇ ವರ್ಷಕ್ಕೆ ಜನರು ಕಾಲಿಟ್ಟಿದ್ದಾರೆ. ಕೇಕ್​ ಕತ್ತರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಪ್ರಪಂಚದಾದ್ಯಂತ ಜನರು ಹೊಸ ವರ್ಷವನ್ನು ಬಹಳ ಅದ್ಧೂರಿಯಾಗಿ ಬರಮಾಡಿಕೊಂಡರು. ಆದರೆ, ಜಗತ್ತಿನ ಒಂದು ದೇಶ ಮಾತ್ರ ಇನ್ನೂ 2018ನೇ ವರ್ಷದಲ್ಲೇ ಇದೆ. ಈ ಮಾತು ಕೇಳಿ ನಿಮಗೆ ಅಚ್ಚರಿ ಏನಿಸಬಹುದು. ಆದರೆ, ಇದೇ ಸತ್ಯ. ಅದುವೇ ಆಫ್ರಿಕಾದ ದೇಶ ಇಥಿಯೋಪಿಯಾ.
ಇಥಿಯೋಪಿಯಾದ ಜನರು ಪ್ರಸ್ತುತ 2018ನೇ ಇಸವಿಯಲ್ಲಿದ್ದಾರೆ. ಇದು ಹೇಗೆ ಸಾಧ್ಯ? ಅವರೇನು ಬೇರೆ ಗ್ರಹದಲ್ಲಿದ್ದಾರಾ? ಭೂಮಿ ಮೇಲೆ ತಾನೇ ಅವರಿರೋದು? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಇದಕ್ಕೆಲ್ಲ ಉತ್ತರ ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ.
ಇಥಿಯೋಪಿಯಾದ ಜನರು ಇನ್ನೂ 2018ರಲ್ಲೇ ಇರುವುದಕ್ಕೆ ಒಂದು ಪ್ರಮುಖ ಕಾರಣವಿದೆ. ಅದೇನೆಂದರೆ, ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ, ಇಥಿಯೋಪಿಯಾ ಮಾತ್ರ ಶತಮಾನಗಳಷ್ಟು ಹಳೆಯದಾದ ಸೌರ ಕ್ಯಾಲೆಂಡರ್ 'Ge'ez' ಅನ್ನು ಅನುಸರಿಸುತ್ತದೆ. ಇದನ್ನು ಗೀಜ್ ಕ್ಯಾಲೆಂಡರ್ ಎಂದು ಕರೆಯಲಾಗುತ್ತದೆ. ಇದು ಗ್ರೆಗೋರಿಯನ್ ಕ್ಯಾಲೆಂಡರ್​ಗಿಂತ ಏಳರಿಂದ ಎಂಟು ವರ್ಷಗಳಷ್ಟು ಹಿಂದಿದೆ.
ಅಚ್ಚರಿಯ ಸಂಗತಿ ಏನೆಂದರೆ, ಆ ದೇಶದಲ್ಲಿ ಹೊಸ ವರ್ಷ ಸೆಪ್ಟೆಂಬರ್ 11 ರಂದು ಪ್ರಾರಂಭವಾಗುತ್ತದೆ. ಈ ಲೆಕ್ಕಾಚಾರದ ಆಧಾರದ ಮೇಲೆ, 2025, ಸೆಪ್ಟೆಂಬರ್ 11ರಲ್ಲಿ ಇಥಿಯೋಪಿಯಾ, 2018ರ ಹೊಸ ವರ್ಷಕ್ಕೆ ಪ್ರವೇಶ ಪಡೆದಿದೆ.
ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ, ಇಥಿಯೋಪಿಯಾದಲ್ಲಿ ವರ್ಷಕ್ಕೆ 13 ತಿಂಗಳುಗಳಿವೆ. ಆದರೆ, ನಮ್ಮಲ್ಲಿ 12 ತಿಂಗಳುಗಳಿವೆ. ಇಥಿಯೋಪಿಯಾದಲ್ಲಿ, ವರ್ಷದ 12 ತಿಂಗಳುಗಳಲ್ಲಿ ಪ್ರತಿಯೊಂದು ತಿಂಗಳು 30 ದಿನಗಳನ್ನು ಹೊಂದಿರುತ್ತವೆ. ಆದರೆ, 13ನೇ ತಿಂಗಳು ಕೇವಲ ಐದು ಅಥವಾ ಆರು ದಿನಗಳನ್ನು ಮಾತ್ರ ಹೊಂದಿರುತ್ತದೆ. ಇದು ಅಧಿಕ ವರ್ಷವನ್ನು ಅವಲಂಬಿಸಿರುತ್ತದೆ. ಇನ್ನು ಇಥಿಯೋಪಿಯನ್ನರು ಸಮಯವನ್ನು ಸಹ ವಿಭಿನ್ನವಾಗಿ ಎಣಿಸುತ್ತಾರೆ. ಬೆಳಗ್ಗೆ ಆರು ಗಂಟೆಗೆ ಪ್ರಾರಂಭಿಸಿ, ಅವರು ದಿನವನ್ನು ಎರಡು 12 ಗಂಟೆಗಳ ಅವಧಿಗಳಾಗಿ ವಿಂಗಡಿಸುತ್ತಾರೆ.
ಅಂದಹಾಗೆ, ಗ್ರೆಗೋರಿಯನ್ ಕ್ಯಾಲೆಂಡರ್ ಮತ್ತು ಗೀಜ್ (ಎಥಿಯೋಪಿಯನ್) ಕ್ಯಾಲೆಂಡರ್‌ಗಳ ನಡುವಿನ ಮುಖ್ಯ ವ್ಯತ್ಯಾಸವು ಯೇಸುಕ್ರಿಸ್ತನ ಜನನದ ವರ್ಷದ ಲೆಕ್ಕಾಚಾರದಲ್ಲಿದೆ. ಪಾಶ್ಚಿಮಾತ್ಯ ಕ್ರೈಸ್ತ ಧರ್ಮದಲ್ಲಿ 6ನೇ ಶತಮಾನದಲ್ಲಿ ಡಯೋನಿಸಿಯಸ್ ಎಕ್ಸಿಗ್ವಸ್ ಎಂಬ ಸನ್ಯಾಸಿ ರೂಪಿಸಿದ ಲೆಕ್ಕಾಚಾರದ ಪ್ರಕಾರ ಯೇಸುವಿನ ಜನನವನ್ನು ಸುಮಾರು ಕ್ರಿ.ಪೂ. 1ರಲ್ಲಿ ನಿಗದಿಪಡಿಸಲಾಗಿದೆ. ಆದರೆ ಇಥಿಯೋಪಿಯನ್ ಆರ್ಥೊಡಾಕ್ಸ್ ಚರ್ಚ್ ಸಂಪ್ರದಾಯದಲ್ಲಿ, ಯೇಸುವಿನ ಜನನದ ದಿನಾಂಕವನ್ನು ಭಿನ್ನವಾಗಿ ಲೆಕ್ಕ ಹಾಕಿ, ಅದನ್ನು ಸುಮಾರು 7 ರಿಂದ 8 ವರ್ಷಗಳ ನಂತರ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಗೀಜ್ ಕ್ಯಾಲೆಂಡರ್ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ 7ರಿಂದ 8 ವರ್ಷಗಳ ಹಿಂದೆ ಇರುತ್ತದೆ. ಪ್ರಸ್ತುತ, ದೇಶವು ಗೀಜ್ ಕ್ಯಾಲೆಂಡರ್ ಅನ್ನು ಅನುಸರಿಸುತ್ತಿದೆ, ಆದ್ದರಿಂದ ಅದು 2018 ರಲ್ಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net