ಡಿಎಂಕೆಗೆ ಬಿಗ್​ ಶಾಕ್!..ಪಕ್ಷ ಸೇರ್ಪಡೆಯಾದ 6 ತಿಂಗಳಲ್ಲೇ ಗುಡ್‌ಬೈ ಹೇಳಲು ಸಿದ್ಧರಾದ್ರಾ ಪನ್ನೀರ್‌ಸೆಲ್ವಂ..? | OP Panneerselvam

OP Panneerselvam | ಡಿಎಂಕೆಗೆ ಬಿಗ್​ ಶಾಕ್!..ಪಕ್ಷ ಸೇರ್ಪಡೆಯಾದ 6 ತಿಂಗಳಲ್ಲೇ ಗುಡ್‌ಬೈ ಹೇಳಲು ಸಿದ್ಧರಾದ್ರಾ ಪನ್ನೀರ್‌ಸೆಲ್ವಂ..?
OP Panneerselvam | ಡಿಎಂಕೆಗೆ ಬಿಗ್​ ಶಾಕ್!..ಪಕ್ಷ ಸೇರ್ಪಡೆಯಾದ 6 ತಿಂಗಳಲ್ಲೇ ಗುಡ್‌ಬೈ ಹೇಳಲು ಸಿದ್ಧರಾದ್ರಾ ಪನ್ನೀರ್‌ಸೆಲ್ವಂ..?
Published on
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮತ್ತೊಮ್ಮೆ ತಲ್ಲಣ ಸೃಷ್ಟಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ (OP Panneerselvam), ಡಿಎಂಕೆ ತೊರೆಯಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ. ಕೆಲವೇ ವಾರಗಳ ಹಿಂದೆ ತಾವು ಪಕ್ಷ ಬಿಡುವ ಸುದ್ದಿಗಳನ್ನು ಓಪಿಎಸ್ ತಳ್ಳಿಹಾಕಿದ್ದರು. ಇದೀಗ ಅವರ ಆಪ್ತ ವಲಯದಿಂದ ಹೊರಬಿದ್ದಿರುವ ಮಾಹಿತಿ ಬೇರೆಯದೇ ಕಥೆ ಹೇಳುತ್ತಿದೆ. ಡಿಎಂಕೆ ಸೇರಿ ಆರು ತಿಂಗಳು ಕಳೆದರೂ ತಮಗಾಗಲಿ ಅಥವಾ ತಮ್ಮ ಮಗ ಒ.ಪಿ. ರವೀಂದ್ರನಾಥ್ ಅವರಿಗಾಗಲಿ ಯಾವುದೇ ಪ್ರಮುಖ ಜವಾಬ್ದಾರಿ ನೀಡದಿರುವ ಬಗ್ಗೆ ಓಪಿಎಸ್ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಡಿಎಂಕೆ ಶಾಸಕರಾಗಿರುವ ಓ. ಪನ್ನೀರ್‌ಸೆಲ್ವಂಗೆ ತೇಣಿ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಪ್ರಮುಖ ಜವಾಬ್ದಾರಿ ನೀಡಿಲ್ಲ. ಅಲ್ಲಿ ಹಾಲಿ ಡಿಎಂಕೆ ಸಂಸದ ತಂಗ ತಮಿಳುಸೆಲ್ವನ್ ಅವರದ್ದೇ ಪೂರ್ಣ ಪ್ರಮಾಣದ ಪ್ರಾಬಲ್ಯ ಮುಂದುವರಿದಿದ್ದು, ಓಪಿಎಸ್ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಭಾವನೆ ಅವರ ಬೆಂಬಲಿಗರಲ್ಲಿದೆ. ಈ ನಿರ್ಲಕ್ಷ್ಯದಿಂದ ಬೇಸತ್ತಿರುವ ಓಪಿಎಸ್ ಮತ್ತು ಅವರ ಪುತ್ರ ರವೀಂದ್ರನಾಥ್, ಇದೀಗ ಡಿಎಂಕೆ ತೊರೆದು ಆಡಳಿತರೂಢ ಟಿವಿಕೆ ಪಕ್ಷವನ್ನು ಸೇರಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ತಿಂಗಳ ಆರಂಭದಲ್ಲಷ್ಟೇ ತಮ್ಮ ಪಕ್ಷಾಂತರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳನ್ನು ಖಂಡಿಸಿದ್ದ ಓಪಿಎಸ್, ಇವೆಲ್ಲವೂ ರಾಜಕೀಯ ವಿರೋಧಿಗಳು ಹರಡುತ್ತಿರುವ ವದಂತಿಗಳು ಎಂದು ಹೇಳಿದ್ದರು. ಡಿಎಂಕೆ ಪಕ್ಷವನ್ನು ತಮಿಳುನಾಡಿನ ದ್ರಾವಿಡ ರಾಜಕೀಯ ಚಳವಳಿಯ ತಾಯಿ ಪಕ್ಷ ಮತ್ತು ಮೂಲ ಸೆಲೆ ಎಂದು ಬಣ್ಣಿಸಿದ್ದ ಅವರು, ತಾವು ದ್ರಾವಿಡ ಸಿದ್ಧಾಂತಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದರು. ನಾಯಕರು ಪಕ್ಷ ಬದಲಾಯಿಸುವ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಜನರ ನಂಬಿಕೆಗೆ ಬಗೆಯುವ ದ್ರೋಹ ಎಂದು ಕರೆದಿದ್ದ ಅವರು, ಇಂತಹ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದು ಎಂದು ಮನವಿ ಮಾಡಿದ್ದರು.
ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಓ. ಪನ್ನೀರ್‌ಸೆಲ್ವಂ ಅವರನ್ನು 2022ರಲ್ಲಿ ಎಐಎಡಿಎಂಕೆಯಿಂದ ಉಚ್ಚಾಟಿಸಲಾಗಿತ್ತು. ತದನಂತರ ಅವರು 2026ರ ಫೆಬ್ರವರಿ 27 ರಂದು ಅಂದಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸಮ್ಮುಖದಲ್ಲಿ ಅಧಿಕೃತವಾಗಿ ಡಿಎಂಕೆ ಸೇರ್ಪಡೆಯಾಗಿದ್ದರು. ಆದರೆ ಇದೀಗ ಅರ್ಧ ವರ್ಷ ಕಳೆದರೂ ಪಕ್ಷದಲ್ಲಿ ನಿರೀಕ್ಷಿತ ಸ್ಥಾನಮಾನ ಸಿಗದ ಕಾರಣ, ಅವರು ಟಿವಿಕೆ ಕಡೆ ಮುಖ ಮಾಡಿದ್ದಾರೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net