ಡಿ.25, 'ಮಾರ್ಕ್'​, '45'! ಒಂದೇ ಚಿತ್ರದಲ್ಲಿ ತ್ರಿಮೂರ್ತಿಗಳ ಸಂಗಮ; ಸ್ಯಾಂಡಲ್​ವುಡ್​ ಚಿತ್ರಗಳ ಮೇಲೆ ನಿರೀಕ್ಷೆ ದುಪ್ಪಟ್ಟು

ಮಾರ್ಕ್​, 45 ಸಿನಿಮಾ ಪೋಸ್ಟರ್​
ಮಾರ್ಕ್​, 45 ಸಿನಿಮಾ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಒಂದೇ ದಿನ ಎರಡು ಕನ್ನಡದ ಬಹುನಿರೀಕ್ಷಿತ ಚಿತ್ರಗಳು ರಿಲೀಸ್​
  • ಕಿಚ್ಚನ 'ಮಾರ್ಕ್​', ತ್ರಿಮೂರ್ತಿಗಳ '45' ಏಕಕಾಲಕ್ಕೆ ತೆರೆಕಾಣಲು ಸಿದ್ಧ
  • ಬಾಕ್ಸ್ ಆಫೀಸ್​ನಲ್ಲಿ ಕನ್ನಡ ಚಿತ್ರಗಳದ್ದೇ ಪೈಪೋಟಿ
ಬೆಂಗಳೂರು: ವರ್ಷದ ಕೊನೆಯ ಘಟ್ಟವನ್ನು ತಲುಪಿರುವ ಜನರು, ಹೊಸ ವರ್ಷ, ಹೊಸ ಹರ್ಷಕ್ಕೆ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಒಂದೆಡೆ, 2025ರಲ್ಲಿ ಏನೇನಾಯಿತು? ಎಂಬುದನ್ನು ಮೆಲುಕು ಹಾಕುತ್ತ ಕುಳಿತಿರುವ ಜನತೆ, ತಾವು ನೋಡಿದ ನೆಚ್ಚಿನ ಸಿನಿಮಾಗಳು ಮತ್ತು ಆ ಚಿತ್ರದ ಸ್ಟಾರ್​ಗಳನ್ನು ಸಂಭ್ರಮಿಸುತ್ತಿದ್ದಾರೆ. ಹೀಗಿರುವಾಗಲೇ, ಅವರ ಮುಂಬರುವ ಚಿತ್ರಗಳು ಯಾವುದು? ಡಿಸೆಂಬರ್​ನಲ್ಲಿ ರಿಲೀಸ್​ ಸಾಧ್ಯತೆಗಳಿವೆಯೇ? ಎಂದು ಚೆಕ್​ ಮಾಡುತ್ತಿದ್ದಾರೆ. ಅಷ್ಟಕ್ಕೂ, ಕನ್ನಡ ಸಿನಿಪ್ರಿಯರಿಗೆ ವರ್ಷದ ಕೊನೆ ತಿಂಗಳಲ್ಲಿ ಭರ್ಜರಿ ಮನರಂಜನೆ, ಆ್ಯಕ್ಷನ್​ ಪ್ಯಾಕ್ಡ್​ ಖಂಡಿತ ಸಿಗಲಿದೆ ಎಂಬುದಕ್ಕೆ ಈ ಎರಡು ಬಹುನಿರೀಕ್ಷಿತ ಸಿನಿಮಾಗಳೇ ಕಾರಣ ಎನ್ನಬಹುದು.
ಇತ್ತೀಚೆಗಷ್ಟೇ, ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಡೆವಿಲ್​' ಸಿನಿಮಾ ತೆರೆಕಂಡು, ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್​ ಸುಲ್ತಾನನ ಚಿತ್ರವನ್ನು ಅವರ ಉಪಸ್ಥಿತಿ ಇಲ್ಲದೆ, ಚಿತ್ರಮಂದಿರಗಳಲ್ಲಿ ನೋಡಿದ್ದು ಕೆಲ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದರೆ, ಹಲವರು ಥಿಯೇಟರ್​ಗಳ ಮುಂದೆ ದರ್ಶನ್​ ಹೆಸರು ಹೇಳಿಕೊಂಡು ಹುಚ್ಚೆದ್ದು ಕುಣಿದಿದ್ದಾರೆ. ಚಿತ್ರಕ್ಕೆ ಸದ್ಯ ಮಿಶ್ರ ಪ್ರತಿಕ್ರಿಯೆಗಳು ಲಭಿಸಿದ್ದು, ಕಲೆಕ್ಷನ್​ ವಿಚಾರದಲ್ಲಿ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು.

ಮೂರರಲ್ಲಿ 1 ರಿಲೀಸ್​, 2 ಬಾಕಿ

ಈ ತಿಂಗಳು ಮೂರು ಸಿನಿಮಾಗಳು ಚಿತ್ರರಸಿಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿವೆ. ಆ ಪೈಕಿ 'ಡೆವಿಲ್'​ ಈಗಾಗಲೇ ತೆರೆಕಂಡಿದೆ. ಇನ್ನೂ ಬಾಕಿ ಉಳಿದಿರುವುದು ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಮತ್ತು ಶಿವರಾಜ್​ಕುಮಾರ್​, ರಾಜ್​ ಬಿ.ಶೆಟ್ಟಿ ಮತ್ತು ಉಪೇಂದ್ರ ನಟಿಸಿರುವ '45' ಸಿನಿಮಾಗಳು. ಈ ಎರಡು ಚಿತ್ರಗಳು ಸದ್ಯ ಸಖತ್​ ಹೈಪ್​ ಮೂಡಿಸಿದ್ದು, ಟ್ರೇಲರ್​ನಿಂದಲೇ ನೋಡುಗರ ನಿರೀಕ್ಷೆಗಳನ್ನು ಡಬಲ್ ಮಾಡಿವೆ.

ಕಿಚ್ಚನ 'ಮಾರ್ಕ್​'

ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್'​ ಚಿತ್ರವು ಇದೇ ಡಿಸೆಂಬರ್​ 25ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಈಗಾಗಲೇ ಟ್ರೇಲರ್​ನಿಂದ ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸಿರುವ ಮಾರ್ಕ್​, ಕಳೆದ ವರ್ಷ 'ಮ್ಯಾಕ್ಸ್​' ತೆರೆಕಂಡ ದಿನದಂದೇ ರಿಲೀಸ್​ಗೆ ಎದುರುನೋಡುತ್ತಿದೆ. ಇದು ಸುದೀಪ್ ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ. 2024ರ ಡಿ.25ರಂದು ಬಿಡುಗಡೆಯಾಗಿದ್ದ ಮ್ಯಾಕ್ಸ್​, ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಹಾಗೂ ಒಳ್ಳೆಯ ಪ್ರತಿಕ್ರಿಯೆಗಳಿಂದ ಹಿಟ್​ ಸಾಲಿಗೆ ಸೇರಿತು. ಈಗ 'ಮಾರ್ಕ್​' ಎಂಟ್ರಿಯೂ ಅದೇ ದಿನ ಇರುವುದು ಸದ್ಯ ಗಮನಾರ್ಹ. ಇದು ಕನ್ನಡದ '45' ಚಿತ್ರದೊಂದಿಗೆ ಬಾಕ್ಸ್ ಆಫೀಸ್​ನಲ್ಲಿ ಪೈಪೋಟಿಗಿಳಿಯಲಿದ್ದು, ಹೇಗೆ ಕಮಾಲ್​ ಮಾಡಲಿದೆ ಎಂದು ಕಾದು ನೋಡಬೇಕಿದೆ.

'45' ತ್ರಿಮೂರ್ತಿಗಳ ಸಂಗಮ

ಇನ್ನು ನಿನ್ನೆ (ಡಿ.15) ಟ್ರೇಲರ್​ ಬಿಡುಗಡೆಗೊಳಿಸಿರುವ 45 ಚಿತ್ರವು, ಶಿವರಾಜ್​ಕುಮಾರ್​, ರಾಜ್​ ಬಿ.ಶೆಟ್ಟಿ ಮತ್ತು ಉಪೇಂದ್ರ ಅವರ ಸಂಗಮಕ್ಕೆ ಸಾಕ್ಷಿಯಾಗಿದೆ. ಸ್ಯಾಂಡಲ್​ವುಡ್​ನ ಸ್ಟಾರ್ ನಟರ ಕಾಂಬೊ ಮೇಲೆ ಸದ್ಯ ಚಿತ್ರಪ್ರೇಮಿಗಳ ಕಣ್ಣು ಬಿದ್ದಿದ್ದು, ಚೊಚ್ಚಲ ಚಿತ್ರದ ಮೂಲಕ ಮ್ಯಾಜಿಕಲ್​ ಮ್ಯೂಸಿಕ್ ಕಂಪೋಸರ್ ಅರ್ಜುನ್​ ಜನ್ಯ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹೊರಬಿದ್ದಿರುವ ಟ್ರೇಲರ್​ ಹಲವು ವಿಶೇಷತೆಗಳಿಂದ ಕೂಡಿದ್ದು, ವಿಎಫ್​ಎಕ್ಸ್​ ಕೆಲಸಗಳಿಂದ ನೋಡುಗರ ಗಮನವನ್ನು ಸೆಳೆದಿದೆ. ​ ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net