ಫ್ರೀ ಪ್ಯಾಲೆಸ್ಟೈನ್ ಸ್ಟಿಕ್ಕರ್ ಅಂಟಿಸುತ್ತಿದ್ದ ಇಬ್ಬರು ಬ್ರಿಟಿಷ್ ಪ್ರವಾಸಿಗರಿಗೆ ಭಾರತದಿಂದ ಹೊರಡುವಂತೆ ನೋಟಿಸ್ | British tourists

ಬ್ರಿಟಿಷ್ ಪ್ರವಾಸಿ ದಂಪತಿ
ಬ್ರಿಟಿಷ್ ಪ್ರವಾಸಿ ದಂಪತಿ
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಸ್ಥಳಗಳಲ್ಲಿ ಫ್ರೀ ಪ್ಯಾಲೆಸ್ಟೈನ್ ಸ್ಟಿಕ್ಕರ್ ಅಂಟಿಸಿದ ಆರೋಪ
  • ಇಬ್ಬರು ಬ್ರಿಟಿಷ್ ಪ್ರವಾಸಿಗರಿಗೆ ದೇಶ ಬಿಟ್ಟು ತೊಲಗುವಂತೆ ನೋಟಿಸ್
  • ಪ್ರವಾಸಿ ವೀಸಾ ಷರತ್ತು ಉಲ್ಲಂಘನೆ ಹಿನ್ನೆಲೆ ಪೊಲೀಸರಿಂದ ನೋಟಿಸ್
ಅಜ್ಮೀರ್: ರಾಜಸ್ಥಾನದ ಅಜ್ಮೀರ್​ನಲ್ಲಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಫ್ರೀ ಪ್ಯಾಲೆಸ್ಟೈನ್ ಬೆಂಬಲಿಸುವ ಸ್ಟಿಕ್ಕರ್ ಅಂಟಿಸಿದ ಆರೋಪದ ಮೇಲೆ ಇಬ್ಬರು ಬ್ರಿಟಿಷ್ ಪ್ರವಾಸಿ(British tourists) ದಂಪತಿಗೆ ಭಾರತದಿಂದ ಹೊರಡುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಬುಧವಾರ(ಫೆ. 04) ವರದಿಯಾಗಿದೆ.
ಫ್ರೀ ಪ್ಯಾಲೆಸ್ಟೈನ್' ಸ್ಟಿಕ್ಕರ್‌ ಅಂಟಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಗುಪ್ತಚರ ಇಲಾಖೆ (ಸಿಐಡಿ/ಐಬಿ) ಅಜ್ಮೀರ್ ಜಿಲ್ಲಾ ಪೊಲೀಸರಿಗೆ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಭಾರತದ ಪ್ರವಾಸದಲ್ಲಿದ್ದ ಲೆವಿಸ್ ಗೇಬ್ರಿಯಲ್ ಡಿ ಮತ್ತು ಆತನ ಗೆಳತಿ ಅನುಷಿ ಎಮ್ಮಾ ಕ್ರಿಸ್ಟೀನ್​ ಅನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಿಸಿಟಿವಿ ಪರಿಶೀಲನೆ ಮತ್ತು ಸ್ಥಳೀಯ ಇನ್‌ಪುಟ್ ಅನ್ನು ಪರಿಶೀಲಿಸಿದಾಗ ಇಬ್ಬರು ಸ್ಟಿಕ್ಕರ್ ಅಂಟಿಸಿದ್ದು ದೃಢಪಟ್ಟಿದೆ. ಪ್ರವಾಸಿ ವೀಸಾದಲ್ಲಿದ್ದು ರಾಜಕೀಯ ಚಟುವಟಿಕೆಯಲ್ಲಿ ತೋಡಗಿದ್ದು ಸಾಬೀತಾದ ಹಿನ್ನೆಲೆ, ವಲಸೆ ಮತ್ತು ವಿದೇಶಿಯರ ಕಾಯ್ದೆಯಡಿಯಲ್ಲಿ ಇಬ್ಬರ ವಿರುದ್ಧ ಕ್ರಮಕೈಗೊಳ್ಳಲಾಗಿದ್ದು, ಪ್ರವಾಸಿ ವೀಸಾ ಷರತ್ತು ಉಲ್ಲಂಘನೆ ಆರೋಪದ ಮೇಲೆ ಇಬ್ಬರಿಗೂ ದೇಶ ತೊರೆಯುವಂತೆ ನಿರ್ದೇಶಿಸಲಾಗಿದೆ.
ಲೆವಿಸ್ ಗೇಬ್ರಿಯಲ್ ಡಿ ಮತ್ತು ಅನುಷಿ ಎಮ್ಮಾ ಕ್ರಿಸ್ಟೀನ್ ಇಬ್ಬರು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ಪುಷ್ಕರ್‌ನಲ್ಲಿ ತಂಗಿದ್ದರು ಎನ್ನಲಾಗಿದೆ. ಜ. 21ರಂದು ಈ ದಂಪತಿಗಳು ಸ್ಟಿಕ್ಕರ್ ಅಂಟಿಸುವಲ್ಲಿ ಭಾಗಿಯಾಗಿದ್ದಾರೆಂದು ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಇಬ್ಬರನ್ನು ಸಿಐಟಿ ಎಸಿಪಿ ರಾಜೇಶ್ ಮೀನಾ ನೇತೃತ್ವದ ತಂಡ ವಿಚಾರಣೆ ನಡೆಸಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಪ್ರವಾಸಿ ವೀಸಾದಲ್ಲಿ ದೇಶದಲ್ಲಿರುವಾಗ ಯಾವುದೇ ರೀತಿಯ ರಾಜಕೀಯ, ಪ್ರತಿಭಟನೆ ಅಥವಾ ಸೈದ್ಧಾಂತಿಕ ಚಟುವಟಿಕೆಗಳನ್ನ ನಡೆಸಲು ಅನುಮತಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಭಾಗಿಯಾದ ವಿದೇಶಿ ಪ್ರಜೆಗಳು ಬಂಧನ ಮತ್ತು ಗಡಿಪಾರು ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net