48 ಗಂಟೆಗಳಲ್ಲಿ ಹಾರ್ಮುಜ್ ತೆರೆಯದಿದ್ದರೆ ಇರಾನ್​ನ ವಿದ್ಯುತ್ ಸ್ಥಾವರಗಳು ಸರ್ವನಾಶ... ಇರಾನ್​ಗೆ ಟ್ರಂಪ್​ ಎಚ್ಚರಿಕೆ! | Donald Trump

Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​: ವಿಶ್ವದ ಅತಿ ದೊಡ್ಡ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಬಂದ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಮುಂದಿನ 48 ಗಂಟೆಗಳ ಒಳಗೆ ಈ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ, ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ಕ್ಷಿಪಣಿ ದಾಳಿಯ ಮೂಲಕ ಸರ್ವನಾಶ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟ್ರಂಪ್​, ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗು ಸಂಚಾರಕ್ಕೆ ಯಾವುದೇ ಬೆದರಿಕೆ ಇರಬಾರದು ಮತ್ತು ಅದು ಸಂಪೂರ್ಣವಾಗಿ ಮುಕ್ತವಾಗಿರಬೇಕು ಎಂದು ಆಗ್ರಹಿಸಿದ್ದು, ಒಂದು ವೇಳೆ ಟೆಹ್ರಾನ್ ಈ ಗಡುವನ್ನು ಮೀರಿದರೆ, ಅಮೆರಿಕ ಮಿಲಿಟರಿಯು ಇರಾನಿನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿ ನಾಶಪಡಿಸುತ್ತದೆ, ಇದು ಅಲ್ಲಿನ ಅತಿದೊಡ್ಡ ವಿದ್ಯುತ್ ಸ್ಥಾವರದಿಂದ ಆರಂಭವಾಗುತ್ತದೆ ಎಂದಿದ್ದಾರೆ.
ಜಾಗತಿಕವಾಗಿ ತೈಲ ಬೆಲೆಗಳು ಗಗನಕ್ಕೇರುತ್ತಿರುವುದು ಮತ್ತು ಅಮೆರಿಕದ ಒಳಗಿನಿಂದ ಬರುತ್ತಿರುವ ಒತ್ತಡವು ಟ್ರಂಪ್‌ರನ್ನು ಇಂತಹ ಆಕ್ರಮಣಕಾರಿ ನಿರ್ಧಾರಕ್ಕೆ ಪ್ರೇರೇಪಿಸಿದೆ ಎಂದು ಅನೇಕರು ವಿಶ್ಲೇಷಿಸುತ್ತಿದ್ದಾರೆ.

ಹಾರ್ಮುಜ್ ಜಲಸಂಧಿ.. ಜಾಗತಿಕ ಆರ್ಥಿಕತೆಯ ನಾಡಿಮಿಡಿತ

ಇರಾನ್ ಮತ್ತು ಓಮನ್ ನಡುವಿನ ಕೇವಲ 55 ಕಿಲೋಮೀಟರ್ ಅಗಲದ ಈ ಕಿರಿದಾದ ಜಲಮಾರ್ಗವು ವಿಶ್ವದ ಅತ್ಯಂತ ಕಾರ್ಯತಂತ್ರದ ಹಡಗು ಮಾರ್ಗವಾಗಿದೆ. ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರದಿಂದ ಬೇರ್ಪಡಿಸುವ ಈ ಮಾರ್ಗವು ಜಾಗತಿಕ ಇಂಧನ ಕ್ಷೇತ್ರದ ರಿಯಲ್ ಎಸ್ಟೇಟ್​ನ ಒಂದು ಪ್ರಮುಖ ಭಾಗವಾಗಿದೆ. ಈ ಮಾರ್ಗವನ್ನು ಇರಾನ್ ಬಂದ್ ಮಾಡಿರುವುದು ವಿಶ್ವದಾದ್ಯಂತ ಇಂಧನ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಈಗ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದು, ಹಿಂದೆಂದೂ ಕಾಣದಷ್ಟು ಅಪಾಯಕಾರಿ ಹಂತವನ್ನು ತಲುಪಿದೆ. ಇಷ್ಟು ದಿನ ಕೇವಲ ಗಡಿಯೊಳಗೆ ಸೀಮಿತವಾಗಿದ್ದ ಯುದ್ಧ, ಈಗ ಖಂಡಾಂತರ ಕ್ಷಿಪಣಿಗಳ ಬಳಕೆಯಿಂದಾಗಿ ಜಾಗತಿಕ ವಿನಾಶದ ಮುನ್ಸೂಚನೆ ನೀಡುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ, ಇರಾನ್ ಮೊದಲ ಬಾರಿಗೆ ತನ್ನ ಬತ್ತಳಿಕೆಯಲ್ಲಿದ್ದ ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಹೊರತೆಗೆದಿದೆ.

ಡಿಯಾಗೋ ಗಾರ್ಸಿಯಾ ಮೇಲೆ ಇರಾನ್ ದಾಳಿ

ಇಸ್ರೇಲ್ ಮಿಲಿಟರಿ ಮುಖ್ಯಸ್ಥ ಇಯಾಲ್ ಜಮೀರ್ ನೀಡಿರುವ ಮಾಹಿತಿಯ ಪ್ರಕಾರ, ಇರಾನ್ ಪಡೆಯು ಹಿಂದೂ ಮಹಾಸಾಗರದಲ್ಲಿರುವ ಅಮೆರಿಕ ಮತ್ತು ಬ್ರಿಟನ್‌ನ ಜಂಟಿ ಸೇನಾ ನೆಲೆಯಾದ ಡಿಯಾಗೋ ಗಾರ್ಸಿಯಾ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಸುಮಾರು 4,000 ಕಿಲೋಮೀಟರ್ ವ್ಯಾಪ್ತಿಯ ಈ ಕ್ಷಿಪಣಿಗಳು ಅತ್ಯಂತ ನಿಖರವಾಗಿ ಗುರಿಯತ್ತ ನುಗ್ಗಿವೆ ಎಂದು ವರದಿಯಾಗಿದೆ. ಈ ದಾಳಿಯು ಕೇವಲ ಅಮೆರಿಕಕ್ಕೆ ಎಚ್ಚರಿಕೆಯಲ್ಲ, ಬದಲಾಗಿ ಇರಾನ್‌ನ ಮಿಲಿಟರಿ ಶಕ್ತಿಯ ಪ್ರದರ್ಶನವೂ ಹೌದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕ್ಷಿಪಣಿಗಳು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡಿಲ್ಲ. ಇವುಗಳ ವ್ಯಾಪ್ತಿ ಎಷ್ಟು ದೊಡ್ಡದಿದೆ ಎಂದರೆ, ಬರ್ಲಿನ್, ಪ್ಯಾರಿಸ್ ಮತ್ತು ರೋಮ್‌ನಂತಹ ಯುರೋಪಿಯನ್ ರಾಜಧಾನಿಗಳು ಈಗ ಇರಾನ್‌ನ ನೇರ ಬೆದರಿಕೆ ವ್ಯಾಪ್ತಿಗೆ ಬಂದಿವೆ ಎಂದು ಜಮೀರ್ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net