ಮಧ್ಯಪ್ರಾಚ್ಯದಲ್ಲಿ ರಕ್ತಪಾತಕ್ಕೆ ಟ್ರಂಪ್ ಕಾರಣ: ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಗೆ ರಷ್ಯಾದಿಂದ ಡೆಡ್ಲಿ ವಾರ್ನಿಂಗ್​ | Russia

ಮಧ್ಯಪ್ರಾಚ್ಯದಲ್ಲಿ ರಕ್ತಪಾತಕ್ಕೆ ಟ್ರಂಪ್ ಕಾರಣ: ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಗೆ ರಷ್ಯಾದಿಂದ ಡೆಡ್ಲಿ ವಾರ್ನಿಂಗ್
ಮಧ್ಯಪ್ರಾಚ್ಯದಲ್ಲಿ ರಕ್ತಪಾತಕ್ಕೆ ಟ್ರಂಪ್ ಕಾರಣ: ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಗೆ ರಷ್ಯಾದಿಂದ ಡೆಡ್ಲಿ ವಾರ್ನಿಂಗ್
Published on
ಮಾಸ್ಕೋ: ಇಡೀ ಜಗತ್ತು ಸ್ತಬ್ಧವಾಗುವಂತಹ ಸುದ್ದಿ ಹೊರಬಿದ್ದಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ ಮೇಲೆ ಆಪರೇಷನ್ ಎಪಿಕ್ ಫ್ಯೂರಿ ಹೆಸರಿನಲ್ಲಿ ಭೀಕರ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್‌ನ ಪರಮಾಪ್ತ ಮಿತ್ರ ರಾಷ್ಟ್ರ ರಷ್ಯಾ (Russia) ಅಧಿಕೃತವಾಗಿ ಈ ಯುದ್ಧಕ್ಕೆ ಎಂಟ್ರಿ ಕೊಟ್ಟಿದೆ. ರಷ್ಯಾದ ಈ ನಡೆ ಅಮೆರಿಕಕ್ಕೆ ದೀರ್ಘ ಮತ್ತು ಕರಾಳ ರಾತ್ರಿಯ ಮುನ್ಸೂಚನೆ ನೀಡಿದೆ.

ರಷ್ಯಾದ ಪ್ರತಿಘಾತ: ಅಮೆರಿಕಕ್ಕೆ ಎಚ್ಚರಿಕೆ

ಇರಾನ್ ಮೇಲಿನ ದಾಳಿಯನ್ನು ಕಟುವಾಗಿ ಖಂಡಿಸಿರುವ ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್, ಅಮೆರಿಕದ ಶಾಂತಿ ಸ್ಥಾಪಕ ಮುಖವಾಡ ಕಳಚಿಬಿದ್ದಿದೆ. ಈ ದಾಳಿಗೆ ಅಮೆರಿಕ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದ್ದಾರೆ. ರಷ್ಯಾದ ನೌಕಾಪಡೆ ಮತ್ತು ಕ್ಷಿಪಣಿ ವ್ಯವಸ್ಥೆಗಳು ಪರ್ಷಿಯನ್ ಗಲ್ಫ್‌ನಲ್ಲಿರುವ ಅಮೆರಿಕದ ನೆಲೆಗಳತ್ತ ಗುರಿ ಇಟ್ಟಿವೆ ಎಂಬ ವರದಿಗಳು ಬಂದಿವೆ. ರಷ್ಯಾ ತನ್ನ ನಾಗರಿಕರಿಗೆ ಕೂಡಲೇ ಇರಾನ್ ತೊರೆಯುವಂತೆ ಸೂಚಿಸಿದ್ದು, ಇರಾನ್‌ಗೆ ಬೇಕಾದ ಎಲ್ಲಾ ಮಿಲಿಟರಿ ಸಹಾಯವನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಪರ್ಸಿಯನ್ ಸಾಮ್ರಾಜ್ಯದ ಇತಿಹಾಸದ ನೆನಪು

ಅಮೆರಿಕದ ಇತಿಹಾಸವನ್ನು ಪರ್ಸಿಯನ್ ಸಾಮ್ರಾಜ್ಯಕ್ಕೆ ಹೋಲಿಸಿದ ಡಿಮೆಟ್ರಿ, ಅಮೆರಿಕಕ್ಕೆ ಕೇವಲ 249 ವರ್ಷಗಳ ಇತಿಹಾಸವಿದೆ. ಆದರೆ ಪರ್ಸಿಯನ್ ಸಾಮ್ರಾಜ್ಯವು 2,500 ವರ್ಷಗಳಿಗಿಂತಲೂ ಹಳೆಯದು. ಯಾರಲ್ಲಿ ಹೆಚ್ಚು ತಾಳ್ಮೆ ಇದೆ ಮತ್ತು ಶತ್ರುವಿನ ಅಂತ್ಯಕ್ಕಾಗಿ ಯಾರು ಕಾಯಬಲ್ಲರು ಎಂಬುದನ್ನು ಕಾದು ನೋಡೋಣ. ಮುಂದಿನ 100 ವರ್ಷಗಳಲ್ಲಿ ಏನಾಗಲಿದೆ ಎಂಬುದು ತಿಳಿಯಲಿದೆ ಎಂದು ಎಚ್ಚರಿಸಿದ್ದಾರೆ.

ಟ್ರಂಪ್ ಯುದ್ಧ ಘೋಷಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಿಂದ ಅಧಿಕೃತವಾಗಿ ಇರಾನ್ ವಿರುದ್ಧ ಬೃಹತ್ ಯುದ್ಧ ಕಾರ್ಯಾಚರಣೆ ಆರಂಭವಾಗಿದೆ ಎಂದು ಘೋಷಿಸಿದ್ದಾರೆ. ಇರಾನ್‌ನ ಅಣುಶಕ್ತಿ ಕೇಂದ್ರಗಳು ಮತ್ತು ಕ್ಷಿಪಣಿ ನೆಲೆಗಳನ್ನು ಧ್ವಂಸಗೊಳಿಸುವುದೇ ನಮ್ಮ ಗುರಿಯಾಗಿದೆ. ಇರಾನ್ ಜನರೇ, ನಿಮ್ಮ ಸ್ವಾತಂತ್ರ್ಯದ ಸಮಯ ಬಂದಿದೆ, ನಿಮ್ಮ ಸರ್ಕಾರವನ್ನು ನೀವೇ ವಹಿಸಿಕೊಳ್ಳಿ ಎಂದು ಟ್ರಂಪ್​ ಕರೆ ನೀಡಿದ್ದಾರೆ. ಇಸ್ರೇಲ್‌ನ ಯುದ್ಧ ವಿಮಾನಗಳು ಟೆಹ್ರಾನ್‌ನಾದ್ಯಂತ ಬಾಂಬ್ ಮಳೆಗರೆದಿದ್ದು, ಸುಪ್ರೀಂ ಲೀಡರ್ ಖಮೇನಿಯವರ ಕಚೇರಿ ಬಳಿಯೂ ಸ್ಫೋಟಗಳು ಸಂಭವಿಸಿವೆ.

ಜಾಗತಿಕ ತಲ್ಲಣ ಮತ್ತು ಭಾರತದ ಸ್ಥಿತಿ

ಈ ಮಹಾ ಸಂಘರ್ಷದಿಂದಾಗಿ ಇಡೀ ಮಧ್ಯಪ್ರಾಚ್ಯವು ಬೆಂಕಿಯ ಉಂಡೆಯಂತಾಗಿದೆ. ದುಬೈ, ದೋಹಾ ಮತ್ತು ಅಬುಧಾಬಿಯಲ್ಲಿ ಸ್ಫೋಟದ ಸದ್ದುಗಳು ಕೇಳಿಬಂದಿದ್ದು, ಇರಾನ್‌ನ ಕ್ಷಿಪಣಿಗಳು ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ.
ವಿಮಾನಯಾನ ಸ್ಥಗಿತ: ಏರ್ ಇಂಡಿಯಾ ಸೇರಿದಂತೆ ವಿಶ್ವದ ಪ್ರಮುಖ ಏರ್‌ಲೈನ್ಸ್‌ಗಳು ಇರಾನ್ ಮತ್ತು ಇಸ್ರೇಲ್ ಮಾರ್ಗಗಳನ್ನು ಬಂದ್ ಮಾಡಿವೆ.
ತೈಲ ಬೆಲೆ ಏರಿಕೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದು, ಜಾಗತಿಕ ಆರ್ಥಿಕ ಕುಸಿತದ ಭೀತಿ ಎದುರಾಗಿದೆ.

ಮಹಾಯುದ್ಧದ ಭೀತಿ

ರಷ್ಯಾ ಈ ಸಂಘರ್ಷದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿರುವುದು ಕೇವಲ ಪ್ರಾದೇಶಿಕ ಯುದ್ಧವಾಗಿ ಉಳಿಯದೆ. ವಿಶ್ವಸಂಸ್ಥೆಯ ನಿಯಮಗಳನ್ನು ಮೀರಿ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಪರಮಾಣು ಶಕ್ತಿ ರಾಷ್ಟ್ರಗಳ ನಡುವಿನ ಈ ನೇರ ಸಂಘರ್ಷವು ಭೂಮಿಯ ವಿನಾಶಕ್ಕೆ ಕಾರಣವಾಗಬಹುದು ಎಂದು ರಾಜತಾಂತ್ರಿಕರು ಎಚ್ಚರಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net