ಬಂಗಾಳದಲ್ಲಿ ಕಮಲ ಅರಳಿರುವುದನ್ನು ಸಂಭ್ರಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಜನರ ಶಕ್ತಿ ಮೇಲುಗೈ ಸಾಧಿಸಿದೆ ಮತ್ತು ಅಭಿವೃದ್ಧಿ ರಾಜಕಾರಣಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, 2026ರ ಈ ಚುನಾವಣೆಯು ಭಾರತದ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ಮತ್ತು ಘನತೆಯನ್ನು ಒದಗಿಸುವ ಉತ್ತಮ ಆಡಳಿತದ ಭರವಸೆಯನ್ನು ನೀಡಿದ ಮೋದಿ, ಈ ಗೆಲುವು ತಲೆಮಾರುಗಳಿಂದ ಶ್ರಮಿಸಿದ ಪಕ್ಷದ ಕಾರ್ಯಕರ್ತರ ತ್ಯಾಗದ ಫಲವಾಗಿದೆ ಎಂದು ಬಣ್ಣಿಸಿದ್ದಾರೆ. ಬಂಗಾಳದ ಜನರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.