

ಟರ್ಕಿಯಲ್ಲಿ ನಡೆದ ಶೃಂಗಸಭೆಯ ಬಳಿಕ ತಮಗೆ ಎದುರಾದ ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಏರ್ ಫೋರ್ಸ್ ಒನ್ ವಿಮಾನದ ಬದಲಿಗೆ ಮತ್ತೊಂದು ಮಿಲಿಟರಿ ವಿಮಾನಕ್ಕೆ ರಹಸ್ಯವಾಗಿ ಸ್ಥಳಾಂತರಗೊಂಡಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ತಮ್ಮ ಭದ್ರತೆಗೆ ಸಂಬಂಧಿಸಿದ ಇಂತಹ ನಿರ್ಣಾಯಕ ನಿರ್ಧಾರಗಳಲ್ಲಿ ತಾವು ಸದಾ ಸೀಕ್ರೆಟ್ ಸರ್ವಿಸ್ ಮತ್ತು ಅಮೆರಿಕ ಮಿಲಿಟರಿ ನೀಡುವ ಸಲಹೆ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ತಮಗೆ ಎದುರಾಗಿರುವ ಭದ್ರತಾ ಅಪಾಯಗಳ ಕುರಿತು ಮಾತನಾಡಿದ ಟ್ರಂಪ್, ನನಗೆ ನಿರಂತರವಾಗಿ ಅನೇಕ ಬೆದರಿಕೆಗಳು ಬರುತ್ತಿರುತ್ತವೆ. ಹೀಗಾಗಿ ಅಲ್ಲಿಯೂ ಭದ್ರತಾ ಬೆದರಿಕೆ ಇತ್ತು ಎಂದು ಭಾವಿಸುತ್ತೇನೆ ಎಂದಿದ್ದಾರೆ. ವರದಿಗಳ ಪ್ರಕಾರ, ಇರಾನ್‌ನಿಂದ ಎದುರಾದ ಬೆದರಿಕೆಯ ಹಿನ್ನೆಲೆಯಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಅತ್ಯಂತ ಜಾಗರೂಕತೆಯಿಂದ ಈ ಕಾರ್ಯಾಚರಣೆ ನಡೆಸಿದ್ದು, ವಿಮಾನ ನಿಲ್ದಾಣದ ಕೇಟರಿಂಗ್ ವಾಹನವನ್ನು ಬಳಸಿ ಟ್ರಂಪ್ ಅವರನ್ನು ರಹಸ್ಯವಾಗಿ ಸಿ-32ಎ ಮಿಲಿಟರಿ ವಿಮಾನಕ್ಕೆ ಸ್ಥಳಾಂತರಿಸಲಾಗಿತ್ತು. ಮಾಧ್ಯಮಗಳು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಅತ್ಯಂತ ಗೌಪ್ಯವಾಗಿ ನಡೆಸಲಾಗಿದ್ದ ಈ ಕಾರ್ಯಾಚರಣೆಯ ವಿವರಗಳು ಇದೀಗ ಬಹಿರಂಗಗೊಂಡಿವೆ.