ಲೋಕಸಭೆಯಲ್ಲೇ ನನಗೆ ನಿಂದನೆ, ಆತ ಮಹಿಳಾ ವಿರೋಧಿ!...ಸ್ವಪಕ್ಷೀಯ ನಾಯಕನ ವಿರುದ್ಧವೇ ಗುಡುಗಿದ ಟಿಎಂಸಿ ಸಂಸದೆ ಕಾಕೋಲಿ ಘೋಷ್! | Kakoli Dastidar

Kakoli Dastidar | ಸ್ವಪಕ್ಷೀಯ ನಾಯಕನ ವಿರುದ್ಧವೇ ಗುಡುಗಿದ ಟಿಎಂಸಿ ಸಂಸದೆ ಕಾಕೋಲಿ ಘೋಷ್!
Kakoli Dastidar | ಸ್ವಪಕ್ಷೀಯ ನಾಯಕನ ವಿರುದ್ಧವೇ ಗುಡುಗಿದ ಟಿಎಂಸಿ ಸಂಸದೆ ಕಾಕೋಲಿ ಘೋಷ್!
Published on
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ (Kakoli Dastidar) ತಮ್ಮದೇ ಪಕ್ಷದ ಸಹೋದ್ಯೋಗಿ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಮೌಖಿಕ ನಿಂದನೆ ಮತ್ತು ಮಹಿಳಾ ವಿರೋಧಿ ನಡವಳಿಕೆಯ ಗಂಭೀರ ಆರೋಪ ಮಾಡಿದ್ದು, ಈ ಕುರಿತು ಗುರುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.
ವಿಶೇಷವೆಂದರೆ, ಟಿಎಂಸಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ ಮರುದಿನವೇ ಈ ಆರೋಪ ಮಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಲೋಕಸಭೆಯ ಒಳಗಡೆ ನನ್ನನ್ನು ಪದೇ ಪದೇ ನಿಂದಿಸಿರುವ ಟಿಎಂಸಿ ಲೋಕಸಭಾ ಸದಸ್ಯ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಔಪಚಾರಿಕ ದೂರು ದಾಖಲಿಸಲು ನನಗೆ ಅನುಮತಿ ನೀಡಬೇಕು, ಈ ರೀತಿಯ ನಡವಳಿಕೆಯು ಅನೇಕ ಮಹಿಳಾ ಸದಸ್ಯರ ವಿರುದ್ಧವೂ ನಡೆದಿದ್ದು, ಇದಕ್ಕೆ ಸೂಕ್ತ ಶಿಕ್ಷೆಯಾಗಬೇಕಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ

ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ಸೇರಿದಂತೆ ತೃಣಮೂಲ ಕಾಂಗ್ರೆಸ್‌ನ ಎಲ್ಲಾ ಸಾಂಸ್ಥಿಕ ಹುದ್ದೆಗಳಿಗೆ ಕಾಕೋಲಿ ಘೋಷ್ ದಸ್ತಿದಾರ್ ಬುಧವಾರವಷ್ಟೇ ರಾಜೀನಾಮೆ ನೀಡಿದ್ದರು. ಪಕ್ಷದ ನಾಯಕತ್ವದೊಂದಿಗೆ ಉಂಟಾದ ಭಿನ್ನಾಭಿಪ್ರಾಯ ಮತ್ತು ತೀವ್ರ ಆಂತರಿಕ ಮನಸ್ತಾಪದ ನಂತರ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದರು. ಆದರೆ, ತಾವು ಸಂಸದೆಯಾಗಿ ಮತ್ತು ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಬಾರಾಸತ್ ಕ್ಷೇತ್ರದ ಸಂಸದೆಯಾಗಿರುವ ಕಾಕೋಲಿ ಘೋಷ್ ಇತ್ತೀಚೆಗೆ ಪಕ್ಷದ ಪ್ರಮುಖ ಕಾರ್ಯಕ್ರಮಗಳಿಂದ ದೂರು ಉಳಿದಿದ್ದರು ಮತ್ತು ಪಕ್ಷದ ಆಂತರಿಕ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಟಿಎಂಸಿ ನಾಯಕರ ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ನಡೆದ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಿದ್ದರು.

ಪಕ್ಷದ ಸಂಸದನಿಂದ ಅಸಭ್ಯ ನಡವಳಿಕೆ

ರಾಜೀನಾಮೆ ನೀಡುವ ಸಂದರ್ಭದಲ್ಲಿ ಕಲ್ಯಾಣ್ ಬ್ಯಾನರ್ಜಿ ಹೆಸರನ್ನು ನೇರವಾಗಿ ಉಲ್ಲೇಖಿಸದ ದಸ್ತಿದಾರ್, ಮಹಿಳಾ ಸಂಸದೆಯ ವಿರುದ್ಧ ಮತ್ತೊಬ್ಬ ಅನಕ್ಷರಸ್ಥ ಮತ್ತು ಉದ್ಧಟ ಸಂಸದ ನಡೆದುಕೊಳ್ಳುವ ಅಸಭ್ಯ ನಡವಳಿಕೆಯನ್ನು ತಡೆಯಲು ಸಾಧ್ಯವಾಗದ ಅಥವಾ ಹಿರಿಯ ನಾಯಕತ್ವದ ಸಹಕಾರ ಮತ್ತು ಸಹಾನುಭೂತಿ ಸಿಗದ ಇಂತಹ ಹುದ್ದೆಯಲ್ಲಿ ಮುಂದುವರಿಯುವುದು ಯೋಗ್ಯವಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೂ ಮುನ್ನ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದಸ್ತಿದಾರ್, ಪಕ್ಷದ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ್ದರು. ತಮ್ಮನ್ನು ಟಿಎಂಸಿಯ ಲೋಕಸಭೆಯ ಚೀಫ್ ವಿಪ್ ಹುದ್ದೆಯಿಂದ ತೆಗೆದುಹಾಕಿದ ಕ್ರಮವನ್ನು ಅವರು ಸರ್ವಾಧಿಕಾರಿ ಧೋರಣೆ ಎಂದು ಕರೆಯುತ್ತಾ, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇದನ್ನು ನನಗೆ ಮುಂಚಿತವಾಗಿಯೇ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು, ಸರ್ವಾಧಿಕಾರಿಯಾಗುವ ಬದಲು ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಹೇಳಿದ್ದರು.

ಸೋಲಿಗೆ ಭ್ರಷ್ಟಾಚಾರವೇ ಕಾರಣ

ಟಿಎಂಸಿ ಚುನಾವಣೆಯಲ್ಲಿ ಸೋಲಲು ಭ್ರಷ್ಟಾಚಾರವೇ ಪ್ರಮುಖ ಕಾರಣ ಎಂಬುದರಲ್ಲಿ ಸಂದೇಹವಿಲ್ಲ. ಭ್ರಷ್ಟಾಚಾರವು ಅತ್ಯಂತ ಪ್ರಸ್ತುತವಾದ ವಿಷಯವಾಗಿದೆ. ಪಂಚಾಯತ್ ಅಥವಾ ಪುರಸಭೆ ಮಟ್ಟದ ಕೆಳಹಂತದ ಚುನಾಯಿತ ಜನಪ್ರತಿನಿಧಿಗಳು ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಮತ್ತು ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಒಪ್ಪಿಕೊಳ್ಳಲೇಬೇಕಿರುವ ಸತ್ಯ ಎಂದು ಸಂಸದೆ ದಸ್ತಿದಾರ್ ಕಿಡಿಕಾರಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net