ಕಷ್ಟದ ಕಾಲದಲ್ಲಿ ಓಡಿಹೋಗಲು ನಾವೇನು ಇಲಿಗಳಲ್ಲ!.. ದೀದಿ ಬೆಂಬಲಕ್ಕೆ ನಿಂತ ಸಂಸದ ಕೀರ್ತಿ ಆಜಾದ್; ರೆಬೆಲ್ಸ್ ವಿರುದ್ಧ ಆಕ್ರೋಶ | Kirti Azad

Kirti Azad | ಟಿಎಂಸಿ ಸಂಸದ ಕೀರ್ತಿ ಆಜಾದ್
Kirti Azad | ಟಿಎಂಸಿ ಸಂಸದ ಕೀರ್ತಿ ಆಜಾದ್
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣಾ ಸೋಲಿನ ನಂತರ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ಅವರಿಗೆ ಪಕ್ಷದ ಹಿರಿಯ ನಾಯಕರು ಹಾಗೂ ಸಂಸದರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಟಿಎಂಸಿ ಸಂಸದ ಕೀರ್ತಿ ಆಜಾದ್ ಗುರುವಾರ ದೀದಿ ಪರವಾಗಿ ದೃಢವಾಗಿ ನಿಂತಿದ್ದು, ಕಷ್ಟದ ಸಮಯದಲ್ಲಿ ಪಕ್ಷ ಬಿಟ್ಟು ಓಡಿಹೋಗಲು ನಾವೇನು ಇಲಿಗಳಲ್ಲ ಎಂದು ಬಂಡಾಯಗಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಮೇಲಿರುವ ರಾಜಕೀಯ ಒತ್ತಡಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಕೀರ್ತಿ ಆಜಾದ್, ಈಗ ನನ್ನ ಮೇಲೂ ಭಾರಿ ಒತ್ತಡ ಹೇರಲಾಗುತ್ತಿದೆ. ಕೊನೆಗೆ ನನ್ನ ಭದ್ರತೆಯನ್ನೂ ಸಹ ಹಿಂಪಡೆದಿದ್ದಾರೆ. ಭದ್ರತೆ ಹಿಂಪಡೆದರೆ ಹೋಗಲಿ ಬಿಡಿ, ನಾವು ಧೃತಿಗೆಡದೆ ಹೋರಾಡುತ್ತೇವೆ. ನಾವು ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಿಲ್ಲುವವರೇ ಹೊರತು, ಬಿಕ್ಕಟ್ಟು ಎದುರಾದಾಗ ಬೆನ್ನು ತೋರಿಸಿ ಓಡುವ ಇಲಿಗಳಲ್ಲ ಎಂದು ಗುಡುಗಿದ್ದಾರೆ.
ಮುಂದುವರಿದು ಮಾತನಾಡಿದ ಅಜಾದ್​​, ದೀದಿ ನಮಗಾಗಿ ಎಷ್ಟೋ ಮಾಡಿದ್ದಾರೆ, ಈ ಕಷ್ಟದ ಸಮಯದಲ್ಲಿ ಅವರಿಗೆ ದ್ರೋಹ ಬಗೆಯಲು ಸಾಧ್ಯವೇ ಇಲ್ಲ. 30-40 ವರ್ಷಗಳ ಕಾಲ ಪಕ್ಷದಲ್ಲಿದ್ದುಕೊಂಡು, ಹತ್ತಾರು ಬಾರಿ ಸಂಸದರಾದವರು ಇಂದು ಪಕ್ಷ ತೊರೆಯುತ್ತಿದ್ದಾರೆ. ಇದು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ, ಅವರ ಈ ನಡವಳಿಕೆ ನನಗಂತೂ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆಪರೇಷನ್ ಕಮಲ ಹಾಗೂ ಅಮಿತ್ ಷಾ ವಿರುದ್ಧ ವಾಗ್ದಾಳಿ

ಬಿಜೆಪಿಯ ಆಪರೇಷನ್ ಕಮಲದ ಕುರಿತು ಲೇವಡಿ ಮಾಡಿದ ಆಜಾದ್, ಅವರ ಬಳಿ ನಿಜವಾಗಿಯೂ ಸಂಖ್ಯಾಬಲ ಇದ್ದಿದ್ದರೆ, ಅಮಿತ್ ಷಾ ಅವರು ಆರಂಭಿಸಿರುವ ಆಪರೇಷನ್ ಕಮಲದ ಸಂಸದರ ಪಟ್ಟಿ ಇಷ್ಟೊತ್ತಿಗಾಗಲೇ ಹೊರಬೀಳಬೇಕಿತ್ತು. ಜೂನ್ 6 ರಿಂದಲೇ ಅವರ ಬಳಿ 20 ಸದಸ್ಯರಿದ್ದಾರೆ, ಅವರು ಸಭಾಧ್ಯಕ್ಷರನ್ನು ಭೇಟಿಯಾಗಿ ಪಟ್ಟಿ ನೀಡಲಿದ್ದಾರೆ ಎಂಬ ಕಥೆ ಕೇಳುತ್ತಿದ್ದೇವೆ. ಆದರೆ ಎಲ್ಲಿದೆ ಆ ಪಟ್ಟಿ..? ಇವರೆಲ್ಲಾ ಭ್ರಷ್ಟಾಚಾರದ ನೆಪ ಒಡ್ಡಿ ಪಕ್ಷಾಂತರ ಮಾಡುತ್ತಿದ್ದಾರೆ. ಕ್ಯಾಮೆರಾದಲ್ಲಿ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಾ ಸಿಕ್ಕಿಬಿದ್ದ ಕಾಕೋಲಿ ಘೋಷ್ ದಸ್ತಿದಾರ್ ಇದಕ್ಕೆ ಪ್ರಮುಖ ಉದಾಹರಣೆ ಎಂದು ಗಂಭೀರ ಆರೋಪ ಮಾಡಿದರು.

ದೀದಿ ಪರವಾಗಿ ನಿಂತ ಶತ್ರುಘ್ನ ಸಿನ್ಹಾ!

ಕೀರ್ತಿ ಆಜಾದ್ ಅವರ ಹೇಳಿಕೆಗೂ ಮುನ್ನ, ಟಿಎಂಸಿ ಸಂಸದ ಹಾಗೂ ಖ್ಯಾತ ಹಿರಿಯ ನಟ ಶತ್ರುಘ್ನ ಸಿನ್ಹಾ ಸಹ ಮಮತಾ ಬ್ಯಾನರ್ಜಿ ಅವರಿಗೆ ತಮಗಿರುವ ಬೆಂಬಲವನ್ನು ಪ್ರಕಟಿಸಿದ್ದರು. ನನ್ನ ರಾಜಕೀಯ ಜೀವನದ ಅತ್ಯಂತ ಕಠಿಣ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ನನ್ನ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ಅಂತಹ ನಾಯಕಿಯನ್ನು ಈ ಕಷ್ಟದ ಸಮಯದಲ್ಲಿ ನಾನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಸಿನ್ಹಾ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net