ನೆನಪಿನಲ್ಲಿ ಮದೀನಾ, ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ!: ಟಿಎಂಸಿ ರೆಬೆಲ್ಸ್ ವಿರುದ್ಧ ಓವೈಸಿ ವಾಗ್ದಾಳಿ! Asaduddin Owaisi

ನೆನಪಿನಲ್ಲಿ ಮದೀನಾ, ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ!: ಟಿಎಂಸಿ ರೆಬೆಲ್ಸ್ ವಿರುದ್ಧ ಓವೈಸಿ ವಾಗ್ದಾಳಿ!
ನೆನಪಿನಲ್ಲಿ ಮದೀನಾ, ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ!: ಟಿಎಂಸಿ ರೆಬೆಲ್ಸ್ ವಿರುದ್ಧ ಓವೈಸಿ ವಾಗ್ದಾಳಿ!
Published on
ಲಖನೌ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಬಂಡಾಯದ ಕಿಡಿ ಈಗ ಉತ್ತರ ಪ್ರದೇಶದ ಚುನಾವಣಾ ರಂಗಕ್ಕೂ ವ್ಯಾಪಿಸಿದೆ. ಟಿಎಂಸಿ ರೆಬೆಲ್ ಸಂಸದರು ದೆಹಲಿಯಲ್ಲಿ ಎನ್‌ಡಿಎ ಕೂಟಕ್ಕೆ ಬೆಂಬಲ ಘೋಷಿಸಿರುವುದನ್ನು ತೀವ್ರವಾಗಿ ಖಂಡಿಸಿರುವ AIMIM ಅಧ್ಯಕ್ಷ ಅಸದುದ್ದೀನ್ ಓವೈಸಿ(Asaduddin Owaisi), ಬಂಡಾಯಗಾರರ ವಿರುದ್ಧ ಅತ್ಯಂತ ತೀಕ್ಷ್ಣ ಪದಗಳಿಂದ ವಾಗ್ದಾಳಿ ನಡೆಸಿದ್ದಾರೆ. ಯಾರು ಚುನಾವಣೆ ಮುನ್ನ ನೆನಪಿನಲ್ಲಿ ಮದೀನಾ, ಕಣ್ಣಿನಲ್ಲಿ ಕಾಬಾ ಎನ್ನುತ್ತಿದ್ದರೋ, ಅವರೆಲ್ಲರೂ ಈಗ ಬಿಜೆಪಿ ನಾಯಕರು ಜೊತೆ ಕುಳಿತು ಆರಾಮವಾಗಿ ಚಹಾ ಕುಡಿಯುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಓವೈಸಿ, ಟಿಎಂಸಿ ಬಂಡಾಯಗಾರರ ಜೊತೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧವೂ ಭೀಕರ ದಾಳಿ ನಡೆಸಿದ್ದಾರೆ.

"ಅವರೆಲ್ಲರೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೈಗೊಂಬೆಗಳು"

ಟಿಎಂಸಿ ರೆಬೆಲ್ಸ್ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ ಓವೈಸಿ, ನೀವು ನಾಚಿಕೆಯ ಎಲ್ಲಾ ಗೆರೆಗಳನ್ನು ದಾಟಿದ್ದೀರಿ. ಬಂಗಾಳಕ್ಕೆ ಹೋದಾಗ ಇವರದೇ ನಾಯಕರೊಬ್ಬರು ಬಂಗಾಳವನ್ನು ಕಾಬಾ ಭೂಮಿ ಮಾಡಲು ಬಿಡುವುದಿಲ್ಲ ಎಂದಿದ್ದರು. ಆದರೆ, ನೆನಪಿನಲ್ಲಿ ಮದೀನಾ, ಕಣ್ಣಿನಲ್ಲಿ ಕಾಬಾ ಎಂದು ಜಪಿಸುತ್ತಿದ್ದ ಇದೇ ನಾಯಕರು ಇಂದು ದೆಹಲಿಯಲ್ಲಿ ಬಾಬಾ ಜೊತೆ ಮುಖಾಮುಖಿ ಕುಳಿತು ಚಹಾ ಕುಡಿಯುತ್ತಿದ್ದಾರೆ. ಅಲ್ಲಿ ಕುಳಿತು ಅವರು ಯಾರನ್ನು ಬೈಯುತ್ತಿದ್ದಾರೆ ಗೊತ್ತಾ, ಇದೇ ಓವೈಸಿಯನ್ನು ಎಂದು ಗುಡುಗಿದ್ದಾರೆ.
ಈ ಎಲ್ಲಾ ನಾಯಕರು ಬಿಜೆಪಿ ಮತ್ತು RSSನ ಕೈಗೊಂಬೆಗಳು ಎಂಬುದು ನನಗೆ ಮೊದಲೇ ಗೊತ್ತಿತ್ತು. ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಇವರೆಲ್ಲರೂ ತಲೆಬಾಗಿ ಬಿಜೆಪಿಯ ಶರಣಾಗಿದ್ದಾರೆ. ನಾನು ಉತ್ತರ ಪ್ರದೇಶ ಹಾಗೂ ಬಹ್ರೈಚ್‌ನ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡುತ್ತೇನೆ. ನಮ್ಮ ಮಜ್ಲಿಸ್ ಪಕ್ಷವನ್ನು ಬೆಂಬಲಿಸಿ. ನಿಮ್ಮ ಪ್ರೀತಿ ಮತ್ತು ನಮ್ಮ ಧರ್ಮದ ನಂಬಿಕೆಯನ್ನು ನಾವು ಎಂದಿಗೂ ವ್ಯಾಪಾರ ಮಾಡುವುದಿಲ್ಲ. ಅದಕ್ಕಾಗಿ ಸಾಯಲೂ ಸಿದ್ಧ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಖಿಲೇಶ್ ಯಾದವ್ ವಿರುದ್ಧ ಓವೈಸಿ ನೇರ ಪ್ರಶ್ನೆ!

ಸಮಾವೇಶದಲ್ಲಿ ಸಮಾಜವಾದಿ ಪಕ್ಷದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ಓವೈಸಿ, ದೇಶದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟು ಉಂಟಾದರೂ ಮುಸ್ಲಿಂ ನಾಯಕರ ಮೇಲೆ ಗೂಬೆ ಕೂರಿಸಲಾಗುತ್ತದೆ. ಆದರೆ ಬೇರೆಯವರು ತಪ್ಪು ಮಾಡಿದಾಗ ಯಾರೂ ಪ್ರಶ್ನಿಸುವುದಿಲ್ಲ. ಅಖಿಲೇಶ್ ಅವರೇ, ನಿಮ್ಮ ಪರಮ ಆಪ್ತರಾಗಿದ್ದ ಟಿಎಂಸಿ ಸಂಸದರು ಇಂದು ಪಕ್ಷ ಬಿಟ್ಟು ಬಿಜೆಪಿಗೆ ಜೈ ಎನ್ನುತ್ತಿದ್ದಾರಲ್ಲ, ಅವರ ವಿರುದ್ಧ ನೀವೇಕೆ ಒಂದು ಮಾತನ್ನೂ ಆಡುತ್ತಿಲ್ಲ, ಅವರಿಗೆ ಯಾರೂ ಏನೂ ಹೇಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆದರೆ, ಅಸದುದ್ದೀನ್ ಓವೈಸಿ ನಿಮ್ಮ ಹಕ್ಕುಗಳಿಗಾಗಿ, ಮುಸ್ಲಿಂ ಸಮುದಾಯದ ರಾಜಕೀಯ ನಾಯಕತ್ವಕ್ಕಾಗಿ ಧ್ವನಿ ಎತ್ತಿ ಮುಂದೆ ಬಂದಾಗ ಮಾತ್ರ ಇವರೆಲ್ಲರಿಗೂ ತಮ್ಮ ಅಸ್ತಿತ್ವಕ್ಕೆ ಸಂಚಕಾರ ಬಂದಂತೆ ಭೀತಿ ಶುರುವಾಗುತ್ತದೆ. ಇನ್ನು ಮುಂದೆ ಅವರು ಹೆದರಲೇಬೇಕು, ಏಕೆಂದರೆ ದೇಶದ ಮುಸ್ಲಿಂ ಯುವಕರು ಈಗ ಜಾಗೃತರಾಗಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.

"25 ವರ್ಷಗಳಿಂದ ವೋಟ್ ಹಾಕಿದ್ರಲ್ಲಾ, ಬಹ್ರೈಚ್‌ಗೆ ಇವರು ಮಾಡಿದ್ದೇನು?"

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಭಾರಿ ಕ್ರಾಂತಿ ಸೃಷ್ಟಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಓವೈಸಿ, ದೇವರ ಇಚ್ಛೆಯಿದ್ದರೆ ಈ ಬಾರಿ ಯುವಕರ ಒಗ್ಗಟ್ಟು ಉತ್ತರ ಪ್ರದೇಶದ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆಯಲಿದೆ. ನಮ್ಮ ಕಠಿಣ ಪರಿಶ್ರಮದಿಂದ ಮುಸ್ಲಿಂ ಸಮುದಾಯದ ನೈಜ ಪ್ರತಿನಿಧಿಗಳು ಉತ್ತರ ಪ್ರದೇಶ ವಿಧಾನಸಭೆಯನ್ನು ಪ್ರವೇಶಿಸಲಿದ್ದಾರೆ ಎಂದರು.
ಸ್ಥಳೀಯ ಸಮಾಜವಾದಿ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ ಓವೈಸಿ, ಕಳೆದ 20-25 ವರ್ಷಗಳಿಂದ ನೀವು ಸಮಾಜವಾದಿ ಪಕ್ಷದ ಯಾಸರ್ ಶಾ ಮತ್ತು ಅವರ ಕುಟುಂಬಕ್ಕೆ ಅತ್ಯಂತ ಪ್ರಾಮಾಣಿಕವಾಗಿ ಮತ ಹಾಕುತ್ತಾ ಬಂದಿದ್ದೀರಿ. ಬಹ್ರೈಚ್ ಮತ್ತು ಮಾಟೇರಾ ಕ್ಷೇತ್ರಗಳಿಗೆ ಇವರು ಮಾಡಿರುವ ಒಂದು ಕೆಲಸವನ್ನಾದರೂ ತೋರಿಸಿ ಎಂದಿದ್ದಾರೆ. ಇವರು ಒಂದು ಆಸ್ಪತ್ರೆಯನ್ನೂ ಕಟ್ಟಿಸಿಲ್ಲ. ಸಾರ್ವಜನಿಕರು ನಿಷ್ಠೆಯಿಂದ ಮತ ನೀಡಿದರು, ಆದರೆ ಇವರಿಂದ ಸಿಕ್ಕಿದ್ದು ಮಾತ್ರ ಶೂನ್ಯ ಎಂದು ಹೇಳುವ ಮೂಲಕ ಮುಂಬರುವ ಚುನಾವಣೆಯಲ್ಲಿ ಎಸ್ಪಿ ಕೋಟೆಗೆ ಲಗ್ಗೆ ಇಡಲು ಕರೆ ನೀಡಿದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net