ಒತ್ತಡ ಹೇರಲು ಈ ಕ್ರಮ; ಮಿಯಾ ಸಮುದಾಯಕ್ಕೆ ಮಾತ್ರ ನೋಟಿಸ್‌ ನೀಡಲಾಗುತ್ತಿದೆ: ಅಸ್ಸಾಂ ಸಿಎಂ ವಿವಾದಾತ್ಮಕ ಹೇಳಿಕೆ | Himanta Biswa Sarma

ಒತ್ತಡ ಹೇರಲು ಈ ಕ್ರಮ; ಮಿಯಾ ಸಮುದಾಯಕ್ಕೆ ಮಾತ್ರ ನೋಟಿಸ್‌ ನೀಡಲಾಗುತ್ತಿದೆ: ಅಸ್ಸಾಂ ಸಿಎಂ ವಿವಾದಾತ್ಮಕ ಹೇಳಿಕೆ
ಒತ್ತಡ ಹೇರಲು ಈ ಕ್ರಮ; ಮಿಯಾ ಸಮುದಾಯಕ್ಕೆ ಮಾತ್ರ ನೋಟಿಸ್‌ ನೀಡಲಾಗುತ್ತಿದೆ: ಅಸ್ಸಾಂ ಸಿಎಂ ವಿವಾದಾತ್ಮಕ ಹೇಳಿಕೆ
Published on
ಗುವಾಹಟಿ: ಅಸ್ಸಾಂನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂಬ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರ(Himanta Biswa Sarma) ಹೇಳಿಕೆ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.
ಈ ಬಗ್ಗೆ ಶನಿವಾರ (ಜ.24) ನಲ್ಬರಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ವಿರೋಧ ಪಕ್ಷಗಳು ಹೇಳುತ್ತಿರುವಂತೆ ಇದರಲ್ಲಿ ಯಾವುದೇ ವಿವಾದ ಇಲ್ಲ, ಇದು ಉದ್ದೇಶಪೂರ್ವಕವಾಗಿ ಕೈಗೊಂಡಿರುವ ಕ್ರಮ ಎಂದು ಸ್ಪಷ್ಟಪಡಿಸಿದ್ದಾರೆ.

ನೋಟಿಸ್ ನೀಡುವ ಪ್ರಕ್ರಿಯೆಯಲ್ಲಿ ತಾರತಮ್ಯ..?

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನೋಟಿಸ್ ನೀಡುತ್ತಿರುವ ಕ್ರಮವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿಗಳು, ಈ ಪ್ರಕ್ರಿಯೆಯು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಈ ವಿಶೇಷ ಪರಿಷ್ಕರಣೆಯಲ್ಲಿ ಯಾವುದೇ ಗೊಂದಲವಿಲ್ಲ. ಇಲ್ಲಿಯವರೆಗೆ ಯಾವ ಹಿಂದೂ ಕುಟುಂಬಕ್ಕೆ ನೋಟಿಸ್ ಹೋಗಿದೆ? ಅಥವಾ ಯಾವ ಅಸ್ಸಾಮಿ ಮುಸ್ಲಿಮರಿಗೆ ನೋಟಿಸ್ ನೀಡಲಾಗಿದೆ? ನೋಟಿಸ್‌ಗಳನ್ನು ಕೇವಲ ಮಿಯಾ ಸಮುದಾಯದವರಿಗೆ ಮತ್ತು ಅಂತಹ ಜನರಿಗೆ ಮಾತ್ರ ನೀಡಲಾಗುತ್ತಿದೆ. ಇಲ್ಲದಿದ್ದರೆ ಅವರು ನಮ್ಮ ತಲೆಯ ಮೇಲೆ ಹತ್ತಿ ಕೂರುತ್ತಾರೆ, ಎಂದು ಶರ್ಮಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಒತ್ತಡದಲ್ಲಿ ಇರಿಸುವ ತಂತ್ರ

ಈ ಪರಿಷ್ಕರಣೆಯು ಕೇವಲ ಆಡಳಿತಾತ್ಮಕ ಕೆಲಸವಲ್ಲ, ಬದಲಾಗಿ ಒಂದು ಒತ್ತಡ ಹೇರುವ ತಂತ್ರ ಎಂದು ಶರ್ಮಾ ಬಣ್ಣಿಸಿದ್ದಾರೆ. ಬಂಗಾಳಿ ಮೂಲದ ಮುಸ್ಲಿಮರನ್ನು ಒತ್ತಡದಲ್ಲಿ ಇರಿಸಲು ಈ ನೋಟಿಸ್‌ಗಳನ್ನು ನೀಡಲಾಗುತ್ತಿದೆ ಆಸ್ಸಾಂ ಸಿಎಂ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಹೇಳಿಕೆಯ ಪ್ರಮುಖ ಮುಖ್ಯಾಂಶಗಳು:

ಸ್ಥಳೀಯರಿಗೆ ರಕ್ಷಣೆ: ಹಿಂದೂಗಳು ಮತ್ತು ಅಸ್ಸಾಮಿ ಮೂಲದ ಮುಸ್ಲಿಮರಿಗೆ ಈ ಪ್ರಕ್ರಿಯೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.
ವಲಸಿಗರ ವಿರುದ್ಧ ಕ್ರಮ: ಅಕ್ರಮ ವಲಸಿಗರು ಅಥವಾ ಮಿಯಾ ಸಮುದಾಯದವರು ರಾಜ್ಯದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಈ ಕ್ರಮ ಅಗತ್ಯ ಎಂದು ಶರ್ಮಾ ಹೇಳಿದ್ದಾರೆ.
ವಿರೋಧ ಪಕ್ಷಗಳಿಗೆ ಟೀಕೆ: ವಿರೋಧ ಪಕ್ಷಗಳು ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ವಿವಾದವನ್ನಾಗಿ ಮಾಡುತ್ತಿವೆ ಎಂದು ಹಿಮಂತ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳ ಆಕ್ರೋಶ

ಸಿಎಂ ಹೇಳಿಕೆಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ, ಸರ್ಕಾರವು ರಾಜ್ಯದ ಯಂತ್ರಾಂಗವನ್ನು ಬಳಸಿ ಒಂದು ನಿರ್ದಿಷ್ಟ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿವೆ. ಮತದಾರರ ಪಟ್ಟಿ ಪರಿಷ್ಕರಣೆಯು ನಿಷ್ಪಕ್ಷಪಾತವಾಗಿ ನಡೆಯಬೇಕೇ ಹೊರತು, ಸಮುದಾಯಗಳ ನಡುವೆ ವಿಷ ಬಿತ್ತುವ ಕೆಲಸವಾಗಬಾರದು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ಕಾನೂನು ಹಿನ್ನೆಲೆ

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಪ್ರಕ್ರಿಯೆಯ ನಂತರ, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನೆಪದಲ್ಲಿ ಈ ವಿಶೇಷ ಪರಿಷ್ಕರಣೆಯನ್ನು (SIR) ನಡೆಸಲಾಗುತ್ತಿದೆ. ಆದರೆ, ಮುಖ್ಯಮಂತ್ರಿಗಳ ಇತ್ತೀಚಿನ ಹೇಳಿಕೆಯು ಈ ಇಡೀ ಪ್ರಕ್ರಿಯೆಯನ್ನು ಕೇವಲ ಆಡಳಿತಾತ್ಮಕವಾಗಿ ನೋಡದೆ ರಾಜಕೀಯ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ ಎಂಬ ಅನುಮಾನಕ್ಕೆ ಪುಷ್ಟಿ ನೀಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net