ಒಂದು 'ಸ್ನೋ ರೂಮ್' ನಿರ್ಮಾಣ ಮಾಡಲು ಸರಿಸುಮಾರು 1,30,000 ಡಾಲರ್ (ಅಂದಾಜು 1.25 ಕೋಟಿ ರೂ.) ವೆಚ್ಚವಾಗಲಿದ್ದು, ಗ್ರಾಹಕರ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿದರೆ ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ. ಅಷ್ಟೇ ಅಲ್ಲದೆ, ಕೊಠಡಿಯ ಗಾತ್ರಕ್ಕೆ ಅನುಗುಣವಾಗಿ ವಾರಕ್ಕೆ ಸುಮಾರು 200 ಲೀಟರ್ ನೀರು ಬೇಕಾಗುವುದರಿಂದ ಇವುಗಳ ನಿರ್ವಹಣೆಯೂ ಅತ್ಯಂತ ದುಬಾರಿಯಾಗಿದೆ. ಕಳೆದ ಹತ್ತು ವರ್ಷಗಳಿಂದ ಈ ಕಲ್ಪನೆ ಚಾಲ್ತಿಯಲ್ಲಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆ ಹಾಗೂ ಭೀಕರ ಬಿಸಿಲ ಬೇಗೆ ಹೆಚ್ಚಾಗಿರುವುದರಿಂದ ಇವು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಕಳೆದ ಜೂನ್‌ನಲ್ಲಿ ಬೆಲ್ಜಿಯಂ, ಬ್ರಿಟನ್, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗಿ 10,000ಕ್ಕೂ ಹೆಚ್ಚು ಜನರು ಬಿಸಿಲಿನ ತಾಪಕ್ಕೆ ಬಲಿಯಾಗಿದ್ದು, ಇಂತಹ ತೀವ್ರ ಹವಾಮಾನ ವೈಪರೀತ್ಯಗಳೇ ಶ್ರೀಮಂತರು ತಮ್ಮ ಮನೆಗಳಲ್ಲೇ 'ಸ್ನೋ ರೂಮ್' ನಿರ್ಮಿಸಿಕೊಳ್ಳಲು ಪ್ರಮುಖ ಕಾರಣವಾಗಿವೆ.