400 ಚದರ ಅಡಿಯ ಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ವಿಶ್ವದ ಮೊದಲ ಟ್ರಿಲಿಯನೇರ್ ಎಲಾನ್ ಮಸ್ಕ್! ಕಾರಣವೇನು? Elon Musk

400 ಚದರ ಅಡಿಯ ಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ವಿಶ್ವದ ಮೊದಲ ಟ್ರಿಲಿಯನೇರ್ ಎಲಾನ್ ಮಸ್ಕ್! ಕಾರಣವೇನು? Elon Musk
400 ಚದರ ಅಡಿಯ ಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ವಿಶ್ವದ ಮೊದಲ ಟ್ರಿಲಿಯನೇರ್ ಎಲಾನ್ ಮಸ್ಕ್! ಕಾರಣವೇನು? Elon Musk
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಮೊದಲ ಟ್ರಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎಲಾನ್ ಮಸ್ಕ್
  • ತಮ್ಮ ಅಗಾಧ ಸಂಪತ್ತಿನ ನಡುವೆಯೂ ಅತ್ಯಂತ ಸರಳ ಜೀವನ ನಡೆಸುತ್ತಿರುವ ಮಸ್ಕ್​
  • ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದಾರೆ ಟೆಸ್ಲಾ ಸಿಇಒ
Elon Musk : ವಿಶ್ವದ ಮೊದಲ ಟ್ರಿಲಿಯನೇರ್ (ಲಕ್ಷ ಕೋಟ್ಯಧಿಪತಿ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎಲಾನ್ ಮಸ್ಕ್, ತಮ್ಮ ಅಗಾಧ ಸಂಪತ್ತಿನ ನಡುವೆಯೂ ಅತ್ಯಂತ ಸರಳ ಜೀವನ ನಡೆಸುವ ಮೂಲಕ ಸದಾ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ವಾಸಿಸುತ್ತಿರುವ ಮನೆಯ ಕುರಿತು ಪ್ರಖ್ಯಾತ 'ಫಾರ್ಚೂನ್' ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶೇಷ ವರದಿಯೊಂದು ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿದ್ದು, ಕೋಟಿ ಕೋಟಿ ಒಡೆಯನ ಅತಿ ಸರಳ ಬದುಕಿನ ಮಗದೊಂದು ಮುಖವನ್ನು ಜಗತ್ತಿನ ಎದುರು ಅನಾವರಣಗೊಳಿಸಿದೆ!
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ ಎಲಾನ್ ಮಸ್ಕ್ ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ತಮ್ಮ ಸ್ಪೇಸ್‌ಎಕ್ಸ್ (SpaceX) ಸ್ಟಾರ್‌ಬೇಸ್ ಸಂಸ್ಥೆಯ ಪಕ್ಕದಲ್ಲೇ, ಕೇವಲ 400 ಚದರ ಅಡಿಯ ಪ್ರಿಫ್ಯಾಬ್ರಿಕೇಟೆಡ್ (ರೆಡಿಮೇಡ್) ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
'ಬಾಕ್ಸಬಲ್' (Boxable) ಎಂಬ ಕಂಪನಿ ನಿರ್ಮಿಸಿರುವ ಈ ಫೋಲ್ಡಬಲ್ ಮನೆಯ ಒಟ್ಟು ಮೌಲ್ಯ ಸುಮಾರು 50,000 ಡಾಲರ್​. ಅಂದರೆ ಭಾರತೀಯ ರೂಪಾಯಿಗಳಲ್ಲಿ ಅಂದಾಜು 41 ರಿಂದ 42 ಲಕ್ಷ ರೂಪಾಯಿ ಎನ್ನಲಾಗಿದೆ. ದಿನನಿತ್ಯದ ಪ್ರಯಾಣದ ಸಮಯವನ್ನು ಉಳಿಸಿ, ತಮ್ಮ ಕಚೇರಿಯ ಕೆಲಸ ಹಾಗೂ ಹೊಸ ಸಂಶೋಧನೆಗಳ ಮೇಲೆ ಸಂಪೂರ್ಣ ಗಮನ ಹರಿಸುವ ಏಕೈಕ ಉದ್ದೇಶದಿಂದ ಮಸ್ಕ್ ಇಷ್ಟು ದೊಡ್ಡ ಕೋಟ್ಯಧಿಪತಿಯಾಗಿದ್ದರೂ ಇಂತಹ ಪುಟ್ಟ ಮನೆಯಲ್ಲಿ ವಾಸಿಸುತ್ತಿರುವುದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ.
ಕೇವಲ 20x20 ಅಡಿಯ ಈ ಪುಟ್ಟ ಮನೆಯು ಒಂದು ಲಿವಿಂಗ್ ಏರಿಯಾ, ಬೆಡ್‌ರೂಮ್, ಕಿಚನ್ ಮತ್ತು ಬಾತ್‌ರೂಮ್ ಅನ್ನು ಒಳಗೊಂಡಿದ್ದು, ಮಸ್ಕ್ ಇದನ್ನು ಸ್ಪೇಸ್‌ಎಕ್ಸ್ ಸಂಸ್ಥೆಯಿಂದಲೇ ಬಾಡಿಗೆಗೆ ಪಡೆದಿದ್ದಾರೆ. ವಿಶೇಷವೆಂದರೆ, ಆಸ್ಟಿನ್‌ನ ಅತ್ಯಂತ ಶ್ರೀಮಂತ ಪ್ರದೇಶವಾದ 'ವೆಸ್ಟ್ ಲೇಕ್ ಹಿಲ್ಸ್'ನಲ್ಲಿ (West Lake Hills) ಎಲಾನ್ ಮಸ್ಕ್ ಅವರಿಗೆ ಸೇರಿದ ಮೂರು ಬೃಹತ್ ಐಷಾರಾಮಿ ಬಂಗಲೆಗಳಿವೆ. ತಲಾ 6,000 ದಿಂದ 9,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಪ್ರತಿಯೊಂದು ಮಹಲುಗಳೂ ಸುಸಜ್ಜಿತ ಸ್ವಿಮ್ಮಿಂಗ್ ಪೂಲ್ ಹಾಗೂ ಹೈಟೆಕ್ ಸೌಲಭ್ಯಗಳನ್ನು ಹೊಂದಿವೆ.
ಇಷ್ಟೆಲ್ಲಾ ಭವ್ಯವಾದ ಅರಮನೆಗಳಂತಹ ಮನೆಗಳು ಸ್ವಂತಕ್ಕಿದ್ದರೂ ಸಹ, ಕೋಟ್ಯಧಿಪತಿ ಮಸ್ಕ್ ತಮ್ಮ ಕೆಲಸದ ಮೇಲಿನ ಹುಚ್ಚಿನಿಂದಾಗಿ ಅವೆಲ್ಲವನ್ನೂ ಬಿಟ್ಟು ಇಂತಹದೊಂದು ಪುಟ್ಟ ಬಾಡಿಗೆ ಮನೆಯಲ್ಲಿ ದಿನದೂಡುತ್ತಿರುವುದು ಜಗತ್ತನ್ನೇ ಆಶ್ಚರ್ಯಚಕಿತಗೊಳಿಸಿದೆ.
ಅಂದಹಾಗೆ, ಉದ್ಯಮಿ ಎಲಾನ್​ ಮಸ್ಕ್​ ಅವರು ವಿಶ್ವದ ಮೊದಲ ಟ್ರಿಲಿಯನೇರ್​ ಆಗಿ ಹೊರಹೊಮ್ಮಿದ್ದಾರೆ. ಟೆಸ್ಲಾ, ಸ್ಪೇಸ್​ ಎಕ್ಸ್​, ಎಕ್ಸ್​​ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರದ ಕಂಪನಿಗಳ ಯಶಸ್ಸಿನ ಬೆನ್ನಲ್ಲೇ ಮೊದಲ ಟ್ರಿಲೇನಿಯರ್​​ ಎಂಬ ಹೆಗ್ಗಳಿಕೆಗೆ ಮಸ್ಕ್​ ಪಾತ್ರರಾಗಿದ್ದಾರೆ. ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯ 1.1 ಟ್ರಿಲಿಯನ್ ಡಾಲರ್ ತಲುಪಿದೆ ಎಂದು ವರದಿಗಳು ತಿಳಿಸಿವೆ. ಇದುವರೆಗೆ ಜಗತ್ತಿನ ಯಾವುದೇ ವ್ಯಕ್ತಿ ಟ್ರಿಲಿಯನ್ ಡಾಲರ್ ಆಸ್ತಿ ಗಡಿ ದಾಟಿರಲಿಲ್ಲ. ಇದೇ ಕಾರಣಕ್ಕೆ ಎಲಾನ್ ಮಸ್ಕ್ ಅವರ ಈ ಸಾಧನೆ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ಟ್ರಿಲಿಯನ್ ಅಂದರೆ ಬರೋಬ್ಬರಿ 1000 ಬಿಲಿಯನ್. ಇದು ಭಾರತೀಯ ರೂಪಾಯಿಗಳಲ್ಲಿ 93.5 ಲಕ್ಷ ಕೋಟಿ ರೂಪಾಯಿಗಳು ಆಗುತ್ತವೆ. ಈ ಮೊತ್ತವು ವಿಶ್ವದ ಬಹುತೇಕ ದೇಶಗಳ ವಾರ್ಷಿಕ ಸರ್ಕಾರದ ಬಜೆಟ್‌ಗಳಿಗಿಂತಲೂ ದೊಡ್ಡದಾಗಿದೆ ಎನ್ನಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net