ಮಹಾ ಯುದ್ಧದ ಕಾರ್ಮೋಡ: ಗಲ್ಫ್‌ನಲ್ಲಿ ಅಮೆರಿಕದ ಟ್ಯಾಂಕರ್ ಜಲಸಮಾಧಿ? ಇರಾನ್‌ನ ರಣಕೇಕೆಗೆ ಬೆಚ್ಚಿಬಿದ್ದ ಯುಎಸ್​..! IranVsUSA

ಮಹಾ ಯುದ್ಧದ ಕಾರ್ಮೋಡ: ಗಲ್ಫ್‌ನಲ್ಲಿ ಅಮೆರಿಕದ ಟ್ಯಾಂಕರ್ ಜಲಸಮಾಧಿ? ಇರಾನ್‌ನ ರಣಕೇಕೆಗೆ ಬೆಚ್ಚಿಬಿದ್ದ ಯುಎಸ್​..!
ಮಹಾ ಯುದ್ಧದ ಕಾರ್ಮೋಡ: ಗಲ್ಫ್‌ನಲ್ಲಿ ಅಮೆರಿಕದ ಟ್ಯಾಂಕರ್ ಜಲಸಮಾಧಿ? ಇರಾನ್‌ನ ರಣಕೇಕೆಗೆ ಬೆಚ್ಚಿಬಿದ್ದ ಯುಎಸ್​..!
Published on
ಟೆಹ್ರಾನ್: ಜಗತ್ತು ಈಗ ಮೂರನೇ ಮಹಾಯುದ್ಧದ ಅಂಚಿನಲ್ಲಿ ಬಂದು ನಿಂತಿದೆಯೇ, ಇಂತಹದೊಂದು ಆತಂಕಕಾರಿ ಪ್ರಶ್ನೆ ಈಗ ಎಲ್ಲೆಡೆ ಎದ್ದಿದೆ. ಶ್ರೀಲಂಕಾ ಕರಾವಳಿಯಲ್ಲಿ ಅಮೆರಿಕವು ಇರಾನ್‌ನ 'ಐಆರ್‌ಐಎಸ್ ಡೇನಾ ಯುದ್ಧನೌಕೆಯನ್ನು(IranVsUSA) ಮುಳುಗಿಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಭೀಕರ ಸೇಡು ತೀರಿಸಿಕೊಂಡಿದೆ. ಪರ್ಷಿಯನ್ ಗಲ್ಫ್‌ನಲ್ಲಿ ಅಮೆರಿಕದ ಬೃಹತ್ ತೈಲ ಟ್ಯಾಂಕರ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಹಡಗು ಹೊತ್ತಿ ಉರಿಯುತ್ತಿದೆ.
ಇದರ ಬೆನ್ನಲ್ಲೇ ಜಗತ್ತಿನ ಪ್ರಮುಖ ತೈಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯನ್ನು ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಇರಾನ್ ಘೋಷಿಸಿದೆ.

ಪಕ್ಷಿನೋಟ: ಏನಿದು ಪ್ರತೀಕಾರದ ದಾಳಿ..?

ಗುರುವಾರ ಮುಂಜಾನೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಉತ್ತರ ಪರ್ಷಿಯನ್ ಗಲ್ಫ್‌ನಲ್ಲಿ ಅಮೆರಿಕದ ತೈಲ ಟ್ಯಾಂಕರ್ ಅನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಮೆಹರ್ ಸುದ್ದಿ ಸಂಸ್ಥೆಯ ಪ್ರಕಾರ, ಈ ದಾಳಿಯಿಂದಾಗಿ ಅಮೆರಿಕದ ಹಡಗು ಭಾರಿ ಪ್ರಮಾಣದಲ್ಲಿ ಜಖಂಗೊಂಡಿದ್ದು, ಸಮುದ್ರದ ಮಧ್ಯೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಇರಾನ್ ತನ್ನ ನೌಕಾಪಡೆಯ ಮೇಲೆ ಅಮೆರಿಕ ನಡೆಸಿದ ದುಷ್ಕೃತ್ಯಕ್ಕೆ ಇದು ತಕ್ಕ ಪ್ರತ್ಯುತ್ತರ ಎಂದು ಕರೆದಿದೆ.

ಶ್ರೀಲಂಕಾ ಸಮುದ್ರದಲ್ಲಿ ನಡೆದಿದ್ದೇನು..?

ಈ ಯುದ್ಧದ ಕಿಡಿ ಹೊತ್ತಿದ್ದು ಹಿಂದೂ ಮಹಾಸಾಗರದಲ್ಲಿ. ಭಾರತದ ವಿಶಾಖಪಟ್ಟಣಂನಲ್ಲಿ ನಡೆದ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಂಡು ಇರಾನ್‌ಗೆ ಮರಳುತ್ತಿದ್ದ ಐಆರ್‌ಐಎಸ್ ಡೇನಾ ಫ್ರಿಗೇಟ್ ನೌಕೆಯನ್ನು ಅಮೆರಿಕದ ಜಲಂತರ್ಗಾಮಿ ನೌಕೆ ಶ್ರೀಲಂಕಾದ ದಕ್ಷಿಣ ಕರಾವಳಿ ಸಮೀಪ ಟಾರ್ಪಿಡೋ ಬಳಸಿ ಮುಳುಗಿಸಿತ್ತು.
ಭೀಕರ ಸಾವು-ನೋವು: ಹಡಗಿನಲ್ಲಿದ್ದ 180 ಮಂದಿಯಲ್ಲಿ 87 ನಾವಿಕರು ಸಾವನ್ನಪ್ಪಿದ್ದಾರೆ.
ರಕ್ಷಣೆ: ಶ್ರೀಲಂಕಾ ನೌಕಾಪಡೆಯು 32 ಜನರನ್ನು ರಕ್ಷಿಸಿದ್ದು, ಉಳಿದ ನಾವಿಕರು ನಾಪತ್ತೆಯಾಗಿದ್ದಾರೆ.
ವಿದೇಶಾಂಗ ಸಚಿವರ ಎಚ್ಚರಿಕೆ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ನಮ್ಮ ತೀರದಿಂದ 2,000 ಮೈಲಿ ದೂರದಲ್ಲಿ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಅತಿಥಿಯಾಗಿ ಹೋಗುತ್ತಿದ್ದ ನೌಕೆಯನ್ನು ಅಮೆರಿಕ ಮುಳುಗಿಸಿದೆ. ಈ ಕೃತ್ಯಕ್ಕೆ ಅಮೆರಿಕ ಕಹಿಯಾಗಿ ಪಶ್ಚಾತ್ತಾಪ ಪಡಲಿದೆ ಎಂದು ಎಚ್ಚರಿಸಿದ್ದರು.

ಹಾರ್ಮುಜ್ ಜಲಸಂಧಿ ಬಂದ್: ಜಗತ್ತಿಗೆ ಇಂಧನ ಸಂಕಷ್ಟ!

ಟ್ಯಾಂಕರ್ ಮೇಲಿನ ದಾಳಿಯ ಬೆನ್ನಲ್ಲೇ ಇರಾನ್ ಮತ್ತೊಂದು ಆಘಾತಕಾರಿ ನಿರ್ಧಾರ ಪ್ರಕಟಿಸಿದೆ. ಜಗತ್ತಿನ ಒಟ್ಟು ತೈಲ ರಫ್ತಿನ ಬಹುಪಾಲು ಹಾದುಹೋಗುವ ಹಾರ್ಮುಜ್ ಜಲಸಂಧಿ ಈಗ ಇರಾನ್‌ನ ಪೂರ್ಣ ನಿಯಂತ್ರಣದಲ್ಲಿದೆ.
ನಿರ್ಬಂಧ: ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ರಾಷ್ಟ್ರಗಳ ಯಾವುದೇ ಹಡಗುಗಳು ಈ ಮಾರ್ಗದಲ್ಲಿ ಚಲಿಸುವಂತಿಲ್ಲ.
ಎಚ್ಚರಿಕೆ: ಈ ಆದೇಶವನ್ನು ಉಲ್ಲಂಘಿಸುವ ಯಾವುದೇ ಹಡಗನ್ನು ಹೊಡೆದು ಉರುಳಿಸುವುದಾಗಿ IRGC ಎಚ್ಚರಿಕೆ ನೀಡಿದೆ.
ಈ ಬೆಳವಣಿಗೆಯು ಜಾಗತಿಕ ತೈಲ ಬೆಲೆಗಳಲ್ಲಿ ದಿಢೀರ್ ಏರಿಕೆಗೆ ಕಾರಣವಾಗಲಿದ್ದು, ಯುರೋಪ್ ಮತ್ತು ಅಮೆರಿಕದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲಿದೆ.

ಸಂಘರ್ಷದ ಹೊಸ ಆಯಾಮ

ಇಲ್ಲಿಯವರೆಗೆ ಇಸ್ರೇಲ್ ಮತ್ತು ಇರಾನ್ ನಡುವೆ ಇದ್ದ ನೇರ ಸಂಘರ್ಷ ಈಗ ಅಮೆರಿಕ ಮತ್ತು ಇರಾನ್ ನಡುವಿನ ಸಾಗರದಾಳದ ಯುದ್ಧವಾಗಿ ಬದಲಾಗಿದೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ನ ಪರಮಾಣು ಕೇಂದ್ರಗಳು ಮತ್ತು ನಾಯಕತ್ವವನ್ನು ಗುರಿಯಾಗಿಸಿಕೊಂಡಿವೆ. ಆದರೆ ಇರಾನ್ ಜಾಗತಿಕ ಸಮುದ್ರ ಮಾರ್ಗಗಳನ್ನು ಬಂದ್ ಮಾಡುವ ಮೂಲಕ ಅಮೆರಿಕದ ಮಿತ್ರರಾಷ್ಟ್ರಗಳಿಗೆ ಆರ್ಥಿಕ ಬಿಸಿ ಮುಟ್ಟಿಸಲು ಮುಂದಾಗಿದೆ.
ಭದ್ರತಾ ತಜ್ಞರ ಪ್ರಕಾರ, ಒಂದು ವೇಳೆ ಅಮೆರಿಕ ಈ ದಾಳಿಗೆ ಪ್ರತಿಯಾಗಿ ಇರಾನ್‌ನ ಒಳಭಾಗದಲ್ಲಿ ದಾಳಿ ನಡೆಸಿದರೆ, ಅದು ಪೂರ್ಣ ಪ್ರಮಾಣದ ಮಹಾಯುದ್ಧಕ್ಕೆ ನಾಂದಿ ಹಾಡಲಿದೆ. ಶ್ರೀಲಂಕಾ ಮತ್ತು ಭಾರತದ ಸಮೀಪದ ಸಮುದ್ರ ವಲಯಗಳು ಈಗ ಯುದ್ಧ ಭೂಮಿಯಾಗಿ ಮಾರ್ಪಟ್ಟಿರುವುದು ದಕ್ಷಿಣ ಏಷ್ಯಾದ ದೇಶಗಳಲ್ಲಿ ಭೀತಿ ಮೂಡಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net