ರೇವಂತ್ ರೆಡ್ಡಿ ಅಮೆರಿಕ ಪ್ರವಾಸಕ್ಕೆ ತಡೆ: ಯುಪಿಎ ಕಾಲದ ನಿಯಮ ನೆನಪಿಸಿ ತಿರುಗೇಟು ನೀಡಿದ ಬಿಜೆಪಿ ನಾಯಕ! | Revanth Reddy US Visit

Revanth Reddy US Visit | ರೇವಂತ್ ರೆಡ್ಡಿ ಅಮೆರಿಕ ಪ್ರವಾಸಕ್ಕೆ ತಡೆ: ಯುಪಿಎ ಕಾಲದ ನಿಯಮ ನೆನಪಿಸಿ ತಿರುಗೇಟು ನೀಡಿದ ಬಿಜೆಪಿ ನಾಯಕ!
Revanth Reddy US Visit | ರೇವಂತ್ ರೆಡ್ಡಿ ಅಮೆರಿಕ ಪ್ರವಾಸಕ್ಕೆ ತಡೆ: ಯುಪಿಎ ಕಾಲದ ನಿಯಮ ನೆನಪಿಸಿ ತಿರುಗೇಟು ನೀಡಿದ ಬಿಜೆಪಿ ನಾಯಕ!
Published on

Revanth Reddy US Visit​: ತಮ್ಮ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿಗೆ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಎನ್. ರಾಮಚಂದರ್ ರಾವ್ ತಿರುಗೇಟು ನೀಡಿದ್ದು, ರೇವಂತ್ ರೆಡ್ಡಿ ಅವರು ಅಮೆರಿಕದಲ್ಲಿ ಯಾರನ್ನು ಭೇಟಿಯಾಗಲು ಯೋಜಿಸಿದ್ದರು ಮತ್ತು ಆ ಭೇಟಿಗಳ ಉದ್ದೇಶವೇನಿತ್ತು ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ.

ಅಮೆರಿಕ ಪ್ರವಾಸದ ವೇಳೆ ತಾವು ಭೇಟಿಯಾಗಲು ಬಯಸಿದ್ದ ವ್ಯಕ್ತಿಗಳು ಯಾರು ಹಾಗೂ ಆ ಸಭೆಗಳನ್ನು ಏಕೆ ಯೋಜಿಸಲಾಗಿತ್ತು ಎಂಬುದರ ಕುರಿತು ಮುಖ್ಯಮಂತ್ರಿಗಳು ದೇಶದ ಜನರಿಗೆ ಉತ್ತರ ನೀಡಬೇಕು. ಪ್ರವಾಸದ ವಿವರವಾದ ಮಾಹಿತಿಯನ್ನು ಸರಿಯಾಗಿ ಹಂಚಿಕೊಳ್ಳದೆ, ಕೇಂದ್ರ ಸರ್ಕಾರದ ವಿರುದ್ಧ ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡಬಾರದು ಎಂದು ರಾಮಚಂದರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಅನುಮತಿ ಏಕೆ ಸಿಕ್ಕಿಲ್ಲ ಅರ್ಥ ಮಾಡಿಕೊಳ್ಳಿ: ರಾವ್

ಈ ಹಿಂದೆ ರೇವಂತ್ ರೆಡ್ಡಿ ಅಮೆರಿಕ, ಲಂಡನ್ ಮತ್ತು ಸಿಂಗಾಪುರಕ್ಕೆ ತೆರಳಿದ್ದಾಗ ಅವರ ಪ್ರವಾಸಕ್ಕೆ ಯಾವುದೇ ತಡೆ ನೀಡಲಾಗಲಿಲ್ಲ ಎಂಬುದನ್ನು ನೆನಪಿಸಿದ ರಾಮಚಂದರ್ ರಾವ್, ಈ ಬಾರಿ ಅವರಿಗೆ ಅನುಮತಿ ಏಕೆ ಸಿಕ್ಕಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲೂ ಸೂಕ್ತ ಹಾಗೂ ಸಂಪೂರ್ಣ ಮಾಹಿತಿ ನೀಡದಿದ್ದ ಕಾರಣಕ್ಕಾಗಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ವಿದೇಶಿ ಪ್ರವಾಸಗಳಿಗೆ ಅನುಮತಿ ನಿರಾಕರಿಸಲಾಗಿತ್ತು ಎಂದು ಬಿಜೆಪಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, ರೈಲ್ವೇ ನಿಲ್ದಾಣಗಳ ಆಧುನೀಕರಣ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಚಾಲನೆ, ವಾರಂಗಲ್‌ನಲ್ಲಿ ರೈಲ್ವೇ ಕೋಚ್ ಕಾರ್ಖಾನೆ ಸ್ಥಾಪನೆ ಹಾಗೂ ಬೀಬಿನಗರದ ಏಮ್ಸ್‌ನಂತಹ ಬೃಹತ್ ಯೋಜನೆಗಳು ತೆಲಂಗಾಣದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ನಿದರ್ಶನವಾಗಿವೆ ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ತಮ್ಮ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಿರುವುದನ್ನು ಸರ್ವಾಧಿಕಾರಿ ನಿರ್ಧಾರ ಹಾಗೂ ರಾಜ್ಯದ ನಾಲ್ಕು ಕೋಟಿ ಜನರಿಗೆ ಎಸಗಿದ ಅಪಮಾನ ಎಂದು ಕರೆದಿದ್ದರು. ಇದೀಗ ಅನುಮತಿ ನಿರಾಕರಣೆಗೆ ಮೂಲ ಕಾರಣಗಳು ಹಾಗೂ ತೆಲಂಗಾಣದ ಬಗ್ಗೆ ಕೇಂದ್ರದ ಧೋರಣೆಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ಮಾಡಿದ ವಾಗ್ದಾಳಿಗೆ ಬಿಜೆಪಿ ತೀವ್ರ ತಿರುಗೇಟು ನೀಡಿದೆ.

ವಿದೇಶಾಂಗ ಇಲಾಖೆ ಹೇಳಿದ್ದೇನು..?

‘ಈ ವಿಷಯವಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಅವರು ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ ಇತರ ಗಣ್ಯರ ವಿದೇಶ ಪ್ರವಾಸಗಳಿಗೆ ರಾಜಕೀಯ ಅನುಮತಿ ನೀಡುವ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅದನ್ನು ಪರಿಶೀಲಿಸುತ್ತದೆ. ಪ್ರಸ್ತಾಪಿತ ಕಾರ್ಯಕ್ರಮವು ಅವರು ಹೊಂದಿರುವ ಹುದ್ದೆಗೆ ಮತ್ತು ಪ್ರವಾಸದ ಉದ್ದೇಶಕ್ಕೆ ಸೂಕ್ತವಾಗಿರಬೇಕು. ಆದರೆ ಈ ನಿರ್ದಿಷ್ಟ ಪ್ರಕರಣದಲ್ಲಿ ಅಮೆರಿಕ ಪ್ರವಾಸದ ಕಾರ್ಯಕ್ರಮವು ಸೂಕ್ತವಾಗಿ ಕಂಡುಬರದ ಕಾರಣ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ರೇವಂತ್ ರೆಡ್ಡಿ ಅವರ ಲಂಡನ್​ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂಬುದನ್ನು ಅವರು ದೃಢಪಡಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net