ಸಹೋದ್ಯೋಗಿ ಅತ್ಯಾಚಾರ ಪ್ರಕರಣದಲ್ಲಿ ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ದೋಷಿ: ಬಾಂಬೆ ಹೈಕೋರ್ಟ್​ ತೀರ್ಪು! Tarun Tejpal

ಸಹೋದ್ಯೋಗಿ ಅತ್ಯಾಚಾರ ಪ್ರಕರಣದಲ್ಲಿ ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ದೋಷಿ: ಬಾಂಬೆ ಹೈಕೋರ್ಟ್​ ತೀರ್ಪು! Tarun Tejpal
ಸಹೋದ್ಯೋಗಿ ಅತ್ಯಾಚಾರ ಪ್ರಕರಣದಲ್ಲಿ ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ದೋಷಿ: ಬಾಂಬೆ ಹೈಕೋರ್ಟ್​ ತೀರ್ಪು! Tarun Tejpal
Published on

ಪ್ರಮುಖ ಮುಖ್ಯಾಂಶಗಳು

  • ಬಾಂಬೆ ಹೈಕೋರ್ಟ್‌ನಿಂದ ತೇಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ದೋಷಿ ಘೋಷಣೆ
  • 2021ರ ಗೋವಾ ವಿಚಾರಣಾ ನ್ಯಾಯಾಲಯದ ನಿರ್ದೋಷಿ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್
  • ವಯಸ್ಸು ಹಾಗೂ ಆರೋಗ್ಯದ ಕಾರಣ ನೀಡಿ ನ್ಯಾಯಾಲಯದಲ್ಲಿ ಕರುಣೆ ತೋರುವಂತೆ ಮನವಿ ಮಾಡಿದ ತೇಜ್‌ಪಾಲ್
  • ಮಧ್ಯಾಹ್ನ ಪ್ರಕಟವಾಗಲಿರುವ ತರುಣ್ ತೇಜ್‌ಪಾಲ್ ಪ್ರಕರಣದ ಶಿಕ್ಷೆಯ ಪ್ರಮಾಣ
ಪಣಜಿ: ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ( Tarun Tejpal ) ಗೆ ಸಂಬಂಧಿಸಿದ 2013ರ ಅತ್ಯಾಚಾರ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಗುರುವಾರ (ಆಗಸ್ಟ್​ 06) ಮಹತ್ವದ ತೀರ್ಪು ಪ್ರಕಟಿಸಿದೆ. 2021ರಲ್ಲಿ ತರುಣ್ ತೇಜ್‌ಪಾಲ್ ಅವರನ್ನು ದೋಷಮುಕ್ತಗೊಳಿಸಿ ಗೋವಾ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಅವರನ್ನು ಈ ಪ್ರಕರಣದಲ್ಲಿ ದೋಷಿಯೆಂದು ತೀರ್ಪು ನೀಡಿದೆ.
ಈ ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಇಂದು ಮಧ್ಯಾಹ್ನ 2:30 ಗಂಟೆಗೆ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿದೆ. 2013ರ ನವೆಂಬರ್‌ನಲ್ಲಿ ಗೋವಾದ ರೆಸಾರ್ಟ್ ಒಂದರಲ್ಲಿ ನಡೆದ ಮ್ಯಾಗಜೀನ್‌ನ ವಾರ್ಷಿಕ 'ಥಿಂಕ್‌ಫೆಸ್ಟ್' ಕಾರ್ಯಕ್ರಮದ ಸಂದರ್ಭದಲ್ಲಿ, ಲಿಫ್ಟ್‌ನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತೇಹಲ್ಕಾ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ತರುಣ್ ತೇಜ್‌ಪಾಲ್ ವಿರುದ್ಧ ದೂರು ದಾಖಲಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಇದೀಗ ಹೈಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಮ್ಸಂದೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. ಐಪಿಸಿ ಸೆಕ್ಷನ್ 376(2)(ಎಫ್), 376(2)(ಕೆ), ಹಾಗೆಯೇ 354ಎ ಮತ್ತು 354ಬಿ ಅಡಿಯಲ್ಲಿ ತೇಜ್‌ಪಾಲ್ ಅವರನ್ನು ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿತು. ಅಲ್ಲದೆ, ಈ ಹಿಂದಿನ ತೀರ್ಪು ಮತ್ತು ಆದೇಶವನ್ನು ರದ್ದುಗೊಳಿಸಿ ತೇಜ್‌ಪಾಲ್ ಅವರನ್ನು ದೋಷಿಯೆಂದು ತೀರ್ಪು ನೀಡಿರುವುದಾಗಿ ಹೈಕೋರ್ಟ್ ತಿಳಿಸಿತು.
* ಸೆಕ್ಷನ್ 376(2)(f): ನಂಬಿಕೆಗೆ ಅರ್ಹರಾದ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯು ಎಸಗುವ ಅತ್ಯಾಚಾರವನ್ನು ಇದು ಅಪರಾಧವೆಂದು ಪರಿಗಣಿಸುತ್ತದೆ.

* ಸೆಕ್ಷನ್ 354A: ಲೈಂಗಿಕ ಕಿರುಕುಳವನ್ನು ಅಪರಾಧವೆಂದು ಘೋಷಿಸುತ್ತದೆ.

* ಸೆಕ್ಷನ್ 354B: ಮಹಿಳೆಯ ವಸ್ತ್ರಾಪಹರಣ ಮಾಡುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ನಡೆಸುವುದು ಅಥವಾ ಅಪರಾಧ ಬಲವನ್ನು ಪ್ರಯೋಗಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ.

ಸ್ವಲ್ಪ ಕರುಣೆ ತೋರಿ ಎಂದ ತೇಜ್​ಪಾಲ್​

ಈ ಹೈಪ್ರೊಫೈಲ್ ವಿಚಾರಣೆಯಲ್ಲಿ ಸುದೀರ್ಘ ವಾದ-ವಿವಾದಗಳ ಬಳಿಕ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, ತೀರ್ಪು ಪ್ರಕಟಗೊಳ್ಳುವ ವೇಳೆ ಖ್ಯಾತ ಪತ್ರಕರ್ತ ತರುಣ್ ತೇಜ್‌ಪಾಲ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ತಮ್ಮ ವಯಸ್ಸು ಮತ್ತು ಆರೋಗ್ಯದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಬಳಿ ಸ್ವಲ್ಪ ಕರುಣೆ ತೋರುವಂತೆ ಮನವಿ ಮಾಡಿಕೊಂಡರು. ನನಗೀಗ 62 ವರ್ಷ ವಯಸ್ಸಾಗಿದ್ದು, ನಾನಿಲ್ಲಿ ಸಂತ್ರಸ್ತನೆಂದು ನಂಬಿದ್ದೇನೆ. ನನಗೆ ಹೆಂಡತಿಯಿದ್ದು, ಹೇಳಲು ಬೇರೆ ಏನೂ ಇಲ್ಲ. ದಯವಿಟ್ಟು ನನ್ನೊಂದಿಗೆ ಉದಾರತೆಯಿಂದ ವರ್ತಿಸಿ ಎಂದು ತೇಜ್‌ಪಾಲ್ ನ್ಯಾಯಾಲಯಕ್ಕೆ ತಿಳಿಸಿದರು.
ಇನ್ನೂ ನ್ಯಾಯಾಲಯದಲ್ಲಿ ತೇಜ್‌ಪಾಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಆಬಾದ್ ಪೊಂಡಾ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಹೈಕೋರ್ಟ್ ಆದೇಶವನ್ನು ಎಂಟು ವಾರಗಳ ಕಾಲ ತಡೆಹಿಡಿಯುವಂತೆ ಮನವಿ ಮಾಡಿದರು. ಅಲ್ಲದೆ, ತೇಜ್‌ಪಾಲ್ ಈಗಾಗಲೇ ಆರು ತಿಂಗಳು ಜೈಲುವಾಸ ಅನುಭವಿಸಿರುವುದನ್ನು ಪರಿಗಣಿಸುವಂತೆಯೂ ನ್ಯಾಯಾಲಯವನ್ನು ಕೋರಿದರು.
ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಂತ್ರಸ್ತೆಯು ಮಗಳ ವಯಸ್ಸಿನವರಾಗಿದ್ದು, ತೇಜ್‌ಪಾಲ್ ಆಕೆಗೆ ತಂದೆಯ ಸ್ಥಾನದಲ್ಲಿದ್ದುಕೊಂಡು ಈ ಕೃತ್ಯ ಎಸಗಿರುವುದರಿಂದ ಸಮಾಜಕ್ಕೆ ಒಂದು ಕಠಿಣ ಸಂದೇಶ ರವಾನಿಸಬೇಕು ಎಂದು ವಾದಿಸಿದರು. ಹುಡುಗಿ ಬೇಡ ಎಂದಾಗ, ಅದರ ಅರ್ಥ ಬೇಡ ಎಂದೇ ಹೊರತು ಬೇರೆ ಇಲ್ಲ ಎಂಬ ಸ್ಪಷ್ಟ ಸಂದೇಶ ಸಮಾಜಕ್ಕೆ ಹೋಗಬೇಕಿದೆ ಎಂದು ಅವರು ಬಲವಾಗಿ ವಾದ ಮಂಡಿಸಿದರು. ಅಂತಿಮವಾಗಿ ನ್ಯಾಯಾಲಯ ತೇಜ್​ಪಾಲ್​ನನ್ನು ದೋಷಿ ಎಂದು ತೀರ್ಪು ಪ್ರಕಟಿಸಿದೆ.

ಏನಿದು ಪ್ರಕರಣ?

ಗೋವಾದ ಬಂಬೋಲಿಮ್‌ನ ಗ್ರ್ಯಾಂಡ್ ಹಯಾತ್ ಹೋಟೆಲ್‌ನ ಲಿಫ್ಟ್‌ನಲ್ಲಿ ಹಿರಿಯ ಪತ್ರಕರ್ತ ತರುಣ್ ತೇಜ್‌ಪಾಲ್, ತನ್ನ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿದೆ. ಆ ಕಾಲದಲ್ಲಿ 'ತೇಹಲ್ಕಾ' ಅತ್ಯಂತ ಪ್ರಭಾವಿ ತನಿಖಾ ಪತ್ರಿಕೆಯಾಗಿದ್ದು, ತೇಜ್‌ಪಾಲ್ ಸೆಲೆಬ್ರಿಟಿ ಸ್ಥಾನಮಾನ ಹೊಂದಿದ್ದರು. ಗೋವಾದ ಸೆಷನ್ಸ್ ನ್ಯಾಯಾಲಯದಲ್ಲಿ 2017ರಲ್ಲಿ ಆರಂಭವಾದ ವಿಚಾರಣೆಯು, 2021ರಲ್ಲಿ ತೇಜ್‌ಪಾಲ್ ಅವರ ನಿರ್ದೋಷಿ ಬಿಡುಗಡೆಯಲ್ಲಿ ಕೊನೆಗೊಂಡಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಈ ಹಿಂದೆ ವಿಚಾರಣಾ ನ್ಯಾಯಾಲಯವು ತನ್ನ ಆದೇಶದಲ್ಲಿ, ಅತ್ಯಾಚಾರ ಸಂತ್ರಸ್ತೆಯು ತೋರಬೇಕಾದ "ಸಾಮಾನ್ಯ ವರ್ತನೆ"ಯನ್ನು ದೂರುದಾರರು ಪ್ರದರ್ಶಿಸಿಲ್ಲ ಎಂದು ಅಭಿಪ್ರಾಯಪಟ್ಟು ತೇಜ್​ಪಾಲ್​ ಅವರನ್ನು ದೋಷಮುಕ್ತಗೊಳಿಸಿತ್ತು. ಆದರೆ, ಪ್ರಸ್ತುತ ಹೈಕೋರ್ಟ್‌ನಲ್ಲಿ ನಡೆದ ಅಂತಿಮ ವಾದ-ವಿವಾದಗಳ ಮೂರು ದಿನಗಳ ವಿಚಾರಣೆಯು ಮುಖ್ಯವಾಗಿ ಎರಡು ಪ್ರಮುಖ ಅಂಶಗಳ ಸುತ್ತ ಸುತ್ತಿಕೊಂಡಿತು. ವಿಚಾರಣಾ ನ್ಯಾಯಾಲಯವು ತೇಜ್‌ಪಾಲ್ ಅವರನ್ನು ದೋಷಮುಕ್ತಗೊಳಿಸುವಲ್ಲಿ ತಪ್ಪು ಮಾಡಿತೇ ಎಂಬುದು ಮತ್ತು ಸಂತ್ರಸ್ತೆಗೆ ತೇಜ್‌ಪಾಲ್ ಕಳುಹಿಸಿದ್ದ ಕ್ಷಮೆಯಾಚನೆಯ ಇಮೇಲ್ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಒಪ್ಪಿಗೆಯಾಗಿದೆಯೇ ಎಂಬ ಬಗ್ಗೆ ವಾದಗಳು ನಡೆದವು. ಅಂತಿಮವಾಗಿ ಇಂದು ತೀರ್ಪು ಹೊರಬಿದ್ದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net