ತಮಿಳುನಾಡು ಗದ್ದುಗೆಗೆ ದಳಪತಿ ಪಟ್ಟಾಭಿಷೇಕ ಫಿಕ್ಸ್!... ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ ಕಾಂಗ್ರೆಸ್​ ಹೈಕಮಾಂಡ್ | TVK-Congress Alliance

TVK-Congress Alliance | ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ ಕಾಂಗ್ರೆಸ್​ ಹೈಕಮಾಂಡ್
TVK-Congress Alliance | ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ ಕಾಂಗ್ರೆಸ್​ ಹೈಕಮಾಂಡ್
Published on
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಮಹತ್ವದ ಘಟ್ಟಕ್ಕೆ ತಲುಪಿದ್ದು, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಲ್ಲಿಸಿದ್ದ ಅಧಿಕೃತ ಪ್ರಸ್ತಾವನೆಗೆ ಕಾಂಗ್ರೆಸ್ (TVK-Congress Alliance) ಹಸಿರು ನಿಶಾನೆ ತೋರಿದೆ. ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಈ ಬೆಂಬಲವನ್ನು ಘೋಷಿಸಿದ್ದು, ರಾಜ್ಯ ಕಾಂಗ್ರೆಸ್ ಸಮಿತಿ ಮತ್ತು ಶಾಸಕಾಂಗ ಪಕ್ಷವು ಈ ಮೈತ್ರಿಗೆ ಸಮ್ಮತಿಸಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದಲ್ಲಿ ಕೋಮುವಾದಿ ಶಕ್ತಿಗಳನ್ನು ಸಂಪೂರ್ಣವಾಗಿ ಹೊರಗಿಡಬೇಕು ಎಂಬ ಕಟ್ಟುನಿಟ್ಟಿನ ಷರತ್ತನ್ನು ವಿಧಿಸಲಾಗಿದೆ ಎಂದು ತಿಳಿಸಿರುವ ಚೋಡಂಕರ್​, ಈ ಮೈತ್ರಿಯು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜರ ಕಾಲದ ಸುವರ್ಣ ಆಡಳಿತವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ, ಪೆರಿಯಾರ್ ಇ.ವಿ. ರಾಮಸಾಮಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ವೈಚಾರಿಕ ತತ್ವಗಳನ್ನು ಎತ್ತಿಹಿಡಿಯುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ.
ಈ ಬೆಳವಣಿಗೆಯೊಂದಿಗೆ ವಿಜಯ್ ಮತ್ತು ರಾಹುಲ್ ಗಾಂಧಿ ಜಂಟಿಯಾಗಿ ತಮಿಳುನಾಡಿನ ಜನರ, ವಿಶೇಷವಾಗಿ ಯುವಜನತೆಯ ಆಶೋತ್ತರಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಈ ಪಾಲುದಾರಿಕೆಯು ಕೇವಲ ಸದ್ಯದ ಸರ್ಕಾರ ರಚನೆಗೆ ಮಾತ್ರ ಸೀಮಿತವಾಗದೆ, ಮುಂದಿನ ಲೋಕಸಭೆ, ರಾಜ್ಯಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಮುಂದುವರಿಯುವ ಭರವಸೆಯನ್ನು ಉಭಯ ಪಕ್ಷಗಳು ವ್ಯಕ್ತಪಡಿಸಿವೆ ಎಂದು ಚೋಡಂಕರ್​ ತಿಳಿಸಿದ್ದಾರೆ. ಈ ಹೊಸ ರಾಜಕೀಯ ಸಮೀಕರಣವು ತಮಿಳುನಾಡಿನ ಸಾಂಪ್ರದಾಯಿಕ ದ್ರಾವಿಡ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸರ್ಕಾರ ರಚನೆಯಲ್ಲಿ ದಳಪತಿ ವಿಜಯ್ ಅವರ ಹಾದಿ ಈಗ ಸುಗಮವಾದಂತಾಗಿದೆ.
ಪ್ರಸ್ತುತ ಟಿವಿಕೆ 108 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್‌ನ 5 ಶಾಸಕರ ಬೆಂಬಲದೊಂದಿಗೆ ಈ ಸಂಖ್ಯೆ 113ಕ್ಕೆ ಏರಲಿದೆ (ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ). 118ರ ಬಹುಮತದ ಗಡಿ ತಲುಪಲು ಇನ್ನು 5 ಶಾಸಕರ ಬೆಂಬಲ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಜಯ್ ವಿಸಿಕೆ, ಸಿಪಿಐ ಮತ್ತು ಸಿಪಿಎಂ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಪಕ್ಷಗಳು ಬೆಂಬಲ ನೀಡಿದರೆ ಟಿವಿಕೆ ಸಂಖ್ಯಾಬಲ 119ಕ್ಕೇರಲಿದ್ದು, ಸರ್ಕಾರ ರಚನೆ ಸಾಧ್ಯವಾಗಲಿದೆ.

ಎಐಎಡಿಎಂಕೆಯಲ್ಲಿನ ಬಿರುಕು..?

ಇನ್ನೊಂದೆಡೆ, ಟಿವಿಕೆ ಪದಾಧಿಕಾರಿಗಳು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಭೇಟಿ ಮಾಡಿರುವುದು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇದು ಬಿಜೆಪಿ ಜೊತೆಗಿನ ಮೈತ್ರಿ ಹೊಂದಿರುವ ಎಐಎಡಿಎಂಕೆಯೊಳಗೆ ದೊಡ್ಡ ಮಟ್ಟದ ಆಂತರಿಕ ಭಿನ್ನಮತದ ಮುನ್ಸೂಚನೆ ನೀಡುತ್ತಿದೆ. ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಟಿವಿಕೆ 108, ಡಿಎಂಕೆ 59 ಮತ್ತು ಎಐಎಡಿಎಂಕೆ 47 ಸ್ಥಾನಗಳನ್ನು ಗೆದ್ದಿವೆ. ವಿಜಯ್ ಸ್ಪರ್ಧಿಸಿದ್ದ ತಿರುಚ್ಚಿ ಪೂರ್ವ ಮತ್ತು ಪೆರಂಬೂರು ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಮೂಲಗಳ ಪ್ರಕಾರ, ಅವರು ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಪೆರಂಬೂರು ಶಾಸಕರಾಗಿ ಮುಂದುವರಿಯುವ ಸಾಧ್ಯತೆಯಿದೆ.

ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕುವ ಪಕ್ಷ ಎಂದ ಡಿಎಂಕೆ ನಾಯಕ

ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ದಶಕಗಳ ಕಾಲದ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗೆ ಬೆಂಬಲ ನೀಡಲು ಕಾಂಗ್ರೆಸ್ ಮುಂದಾಗಿರುವುದನ್ನು ಡಿಎಂಕೆ ತೀವ್ರವಾಗಿ ಖಂಡಿಸಿದೆ.
ಎನ್‌ಡಿಟಿವಿ ಜೊತೆಗೆ ಮಾತನಾಡಿದ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ, ಕಾಂಗ್ರೆಸ್ ಅನ್ನು ಬೆನ್ನಿಗೆ ಚೂರಿ ಹಾಕುವ ಪಕ್ಷ ಎಂದು ಕಟುವಾಗಿ ಟೀಕಿಸಿದ್ದು, ಈ ಚುನಾವಣೆಯಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೇ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು, ಇಲ್ಲದಿದ್ದರೆ ಅವರಿಗೆ ಒಂದು ಸ್ಥಾನವೂ ಸಿಗುತ್ತಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಈ ವಿಚಾರವಾಗಿ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೇರ ಉತ್ತರ ನೀಡದಿದ್ದರೂ, ಮೈತ್ರಿ ಧರ್ಮವನ್ನು ಗಾಳಿಗೆ ತೂರಿದ ಕಾಂಗ್ರೆಸ್ ನಿಲುವಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಚುನಾವಣಾ ಫಲಿತಾಂಶ

ಚೊಚ್ಚಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದ ಟಿವಿಕೆ ಅತಿದೊಡ್ಡ ಪಕ್ಷವಾದರೆ, ದಶಕಗಳ ಕಾಲ ರಾಜ್ಯವಾಳಿದ ಡಿಎಂಕೆ ಕೇವಲ 59 ಸ್ಥಾನಗಳಿಗೆ ಕುಸಿದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಐಎಡಿಎಂಕೆ 47 ಸ್ಥಾನಗಳನ್ನು ಗಳಿಸಿದರೆ, ಪಿಎಂಕೆ 4 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಿಂಗ್ ಮೇಕರ್ ಪಾತ್ರಕ್ಕೆ ಸಜ್ಜಾಗಿದೆ. ಈ ಎಲ್ಲಾ ಬೆಳವಣಿಗೆಗಳು ತಮಿಳುನಾಡಿನಲ್ಲಿ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಿದ್ದು, ವಿಜಯ್ ರಾಜಕೀಯ ಹಾದಿಗೆ ಕಾಂಗ್ರೆಸ್‌ನ ಬೆಂಬಲವು ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net