ಟಿ20 ವಿಶ್ವಕಪ್: ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಅಬ್ಬರ; ನಮೀಬಿಯಾಕ್ಕೆ 210 ರನ್‌ಗಳ ಬೃಹತ್ ಗುರಿ ನೀಡಿದ ಭಾರತ | Team India

ಟಿ20 ವಿಶ್ವಕಪ್: ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಅಬ್ಬರ; ನಮೀಬಿಯಾಕ್ಕೆ 210 ರನ್‌ಗಳ ಬೃಹತ್ ಗುರಿ ನೀಡಿದ ಭಾರತ
ಟಿ20 ವಿಶ್ವಕಪ್: ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಅಬ್ಬರ; ನಮೀಬಿಯಾಕ್ಕೆ 210 ರನ್‌ಗಳ ಬೃಹತ್ ಗುರಿ ನೀಡಿದ ಭಾರತ
Published on
ದೆಹಲಿ: ತವರಿನ ಅಂಗಳದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಭಾರತವು(Team India) ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಸ್ಫೋಟಕ ಬ್ಯಾಟಿಂಗ್ ನಡುವೆಯೂ ಕೊನೆಯ ಹಂತದಲ್ಲಿ ವಿಕೆಟ್ ಪತನದ ಸುಳಿಗೆ ಸಿಲುಕಿದ ಭಾರತ, ಅಂತಿಮವಾಗಿ ಸವಾಲಿನ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಇಶಾನ್ ಕಿಶನ್ ಸಿಡಿಲಬ್ಬರದ ಆರಂಭ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರ ಇಶಾನ್ ಕಿಶನ್ ಅಕ್ಷರಶಃ ಸಿಡಿಲಬ್ಬರದ ಆರಂಭ ನೀಡಿದರು. ಕೇವಲ 24 ಎಸೆತಗಳಲ್ಲಿ 61 ರನ್ ಚಚ್ಚಿದ ಕಿಶನ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಇವರಿಗೆ ಸಾಥ್ ನೀಡಿದ ಸಂಜು ಸ್ಯಾಮ್ಸನ್ ಕೇವಲ 8 ಎಸೆತಗಳಲ್ಲಿ 22 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಅನಾರೋಗ್ಯದ ಕಾರಣ ಅಭಿಷೇಕ್ ಶರ್ಮಾ ಅಲಭ್ಯರಾದ ಹಿನ್ನೆಲೆಯಲ್ಲಿ ಸಂಜುಗೆ ಈ ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು.

ಪಾಂಡ್ಯ - ದುಬೆ ಜುಗಲ್‌ಬಂದಿ

ಮಧ್ಯಮ ಕ್ರಮಾಂಕದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ನಮೀಬಿಯಾ ಬೌಲರ್‌ಗಳನ್ನು ಬೆಂಡೆತ್ತಿದರು. ಹಾರ್ದಿಕ್ ಪಾಂಡ್ಯ ಅರ್ಧಶತಕ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು.

ಧಿಡೀರ್ ಕುಸಿತ

ಒಂದು ಹಂತದಲ್ಲಿ ಸುಸ್ಥಿತಿಯಲ್ಲಿದ್ದ ಭಾರತ ತಂಡವು ಕೊನೆಯ 3 ಓವರ್‌ಗಳಲ್ಲಿ ದಿಢೀರ್ ವಿಕೆಟ್ ಕಳೆದುಕೊಂಡಿತು. ಸತತವಾಗಿ ವಿಕೆಟ್ ಉರುಳಿದ ಕಾರಣ ರನ್ ಗತಿಗೆ ತುಸು ಬ್ರೇಕ್ ಬಿತ್ತು. ಅಂತಿಮವಾಗಿ ಭಾರತ 9 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು. ನಮೀಬಿಯಾ ಪರ ನಾಯಕ ಎರಾಸ್ಮಸ್ ಚಾಣಾಕ್ಷ ಬೌಲಿಂಗ್ ಬದಲಾವಣೆ ಮಾಡುವ ಮೂಲಕ ಭಾರತದ ದೊಡ್ಡ ಮೊತ್ತಕ್ಕೆ ಕಡಿವಾಣ ಹಾಕಿದರು.

ತಂಡದಲ್ಲಿ ಬದಲಾವಣೆ:

ಭಾರತ ತಂಡವು ಇಂದು ಪ್ರಮುಖ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಹೊಟ್ಟೆಯ ಸೋಂಕಿನಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ ಬದಲಿಗೆ ಸಂಜು ಸ್ಯಾಮ್ಸನ್ ತಂಡ ಸೇರಿದ್ದಾರೆ.
ಮೊಹಮ್ಮದ್ ಸಿರಾಜ್ ಬದಲಿಗೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಮರಳಿದ್ದಾರೆ. ಬೃಹತ್ ಗುರಿ ಬೆನ್ನಟ್ಟಲಿರುವ ನಮೀಬಿಯಾವನ್ನು ಕಟ್ಟಿಹಾಕಲು ಬುಮ್ರಾ ಮತ್ತು ತಂಡ ಸಜ್ಜಾಗಿದೆ. ದೆಹಲಿಯ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದ್ದು, ಎರಡನೇ ಇನ್ನಿಂಗ್ಸ್ ಕುತೂಹಲ ಮೂಡಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net