8 ಸಂಸದರ ಅಮಾನತು ರದ್ದು..ಲಕ್ಷ್ಮಣ ರೇಖೆಯ ಪಾಠ ಮಾಡಿದ ಸಚಿವರು; ಓಂ ಬಿರ್ಲಾ ಕೊಟ್ಟ ಆ AI ಎಚ್ಚರಿಕೆ ಏನು ಗೊತ್ತಾ..? | Suspension Revoked

Suspension Revoked  | 8 ಸಂಸದರ ಅಮಾನತು ರದ್ದು
Suspension Revoked | 8 ಸಂಸದರ ಅಮಾನತು ರದ್ದು
Published on
ನವದೆಹಲಿ: ಕಳೆದ ತಿಂಗಳು ಸಂಸತ್ತಿನ ಅಧಿವೇಶನದಲ್ಲಿ ಅಮಾನತುಗೊಂಡಿದ್ದ  ಎಂಟು ಸಂಸದರ ಅಮಾನತನ್ನು ಲೋಕಸಭೆಯು ಮಂಗಳವಾರ ಅಧಿಕೃತವಾಗಿ ರದ್ದುಗೊಳಿಸಿದ್ದು (Suspension Revoked), ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಡಿಸಿದ ನಿರ್ಣಯಕ್ಕೆ ಸದನವು ಧ್ವನಿಮತದ ಅಂಗೀಕಾರ ನೀಡುವ ಮೂಲಕ ಈ ಸಂಘರ್ಷಕ್ಕೆ ವಿರಾಮ ಬಿದ್ದಿದೆ.

ಲಕ್ಷ್ಮಣ ರೇಖೆ ದಾಟಬೇಡಿ: ಕಿರಣ್ ರಿಜಿಜು ಎಚ್ಚರಿಕೆ

ನಿರ್ಣಯ ಮಂಡಿಸುವ ಮುನ್ನ ಮಾತನಾಡಿದ ಸಚಿವ ಕಿರಣ್ ರಿಜಿಜು, ಸದನದ ಸುಗಮ ಕಾರ್ಯನಿರ್ವಹಣೆಗೆ ಪ್ರತಿಯೊಬ್ಬ ಸದಸ್ಯರೂ ಒಂದು ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳುವುದು ಅತ್ಯಗತ್ಯ. ವಿರೋಧ ಪಕ್ಷಗಳು ಸರ್ಕಾರದೊಂದಿಗೆ ಸಹಕರಿಸಿದರೆ ಮಾತ್ರ ಪ್ರಜಾಪ್ರಭುತ್ವದ ಆಶಯ ಈಡೇರುತ್ತದೆ ಎಂದರು, ಈ ಪ್ರಸ್ತಾವನೆಗೆ ವಿರೋಧ ಪಕ್ಷದ ನಾಯಕರೂ ಕೂಡ ಸಹಮತಿ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ಎಐ ವಾರ್ನ್​​ ಮಾಡಿದ ಸ್ಪೀಕರ್​

ಅಮಾನತು ರದ್ದುಗೊಳಿಸಿದ ಬೆನ್ನಲ್ಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸದರಿಗೆ ಕಠಿಣ ಸೂಚನೆಗಳೊಂದಿಗೆ, ಸಂಸತ್ತಿನ ಘನತೆಗೆ ಚ್ಯುತಿ ತರುವಂತಹ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸದನದ ಒಳಗೆ ಪ್ಲಕಾರ್ಡ್‌ಗಳನ್ನು ಹಿಡಿಯುವುದು ಅಥವಾ ಎಐ ಮೂಲಕ ಸೃಷ್ಟಿಸಿದ ವಿವಾದಾತ್ಮಕ ಚಿತ್ರಗಳನ್ನು ಪ್ರದರ್ಶಿಸುವುದು ಸಂಸದೀಯ ನಡವಳಿಕೆಗೆ ವಿರುದ್ಧವಾದುದು. ಚರ್ಚೆಗಳು ಸಭ್ಯತೆಯಿಂದ ಕೂಡಿರಲಿ ಎಂದು ಸ್ಪೀಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಅಮಾನತು ರದ್ದಾದ ಬೆನ್ನಲ್ಲೇ ಎಂಟು ಮಂದಿ ಸಂಸದರು ಸಂಸತ್ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಇದು ಕೇವಲ ನಮ್ಮ ಗೆಲುವಲ್ಲ, ಸಂವಿಧಾನದ ಗೆಲುವು ಎಂದು ಕಾಂಗ್ರೆಸ್ ನಾಯಕರು ಘೋಷಿಸಿದರು. ಏಪ್ರಿಲ್ 2ಕ್ಕೆ ಕೊನೆಗೊಳ್ಳಲಿರುವ ಬಜೆಟ್ ಅಧಿವೇಶನದ ಉಳಿದ ದಿನಗಳಲ್ಲಿ ಈ ಸದಸ್ಯರು ಈಗ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

ಘಟನೆಯ ಹಿನ್ನಲೆ

ಲೋಕಸಭೆಯ ಎಂಟು ಜನ ಸಂಸದರು ಅಶಿಸ್ತಿನಿಂದ ವರ್ತಿಸಿದ್ದರು. ಫೆಬ್ರವರಿ 3ರಂದು ಬಜೆಟ್ ಅಧಿವೇಶನದ ವೇಳೆ ಸದನದ ಬಾವಿಗಿಳಿದು ಪ್ಲಕಾರ್ಡ್ ಪ್ರದರ್ಶಿಸುತ್ತಾ, ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದು ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ವಿವಾದಾತ್ಮಕ ಚಿತ್ರಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಸ್ಪೀಕರ್ ಓಂ ಬಿರ್ಲಾ ಅವರು ಇವರನ್ನು ಅಮಾನತುಗೊಳಿಸಿದ್ದರು.

ಅಮಾನತು ರದ್ದಾದ ಸಂಸದರುಗಳು ಯಾರು?

ಕಾಂಗ್ರೆಸ್‌ನ ಸಂಸದರಾದ ಗುರ್ಜೀತ್ ಸಿಂಗ್ ಔಜ್ಲಾ, ಹಿಬಿ ಈಡನ್, ಸಿ ಕಿರಣ್ ಕುಮಾರ್ ರೆಡ್ಡಿ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಪ್ರಶಾಂತ್ ಪಡೋಲೆ ಮತ್ತು ಡೀನ್ ಕುರಿಯಾಕೋಸ್ ಸೇರಿದಂತೆ ಸಿಪಿಐ(ಎಂ) ನ ಎಸ್. ವೆಂಕಟೇಸನ್ ಅವರ ಸದಸ್ಯತ್ವವನ್ನು ಪುನಃಸ್ಥಾಪಿಸಲಾಗಿದೆ. ಫೆಬ್ರವರಿ 3 ರಂದು ಅಶಿಸ್ತಿನ ವರ್ತನೆಯ ಕಾರಣ ನೀಡಿ ಇವರನ್ನು ಏಪ್ರಿಲ್ 2 ರವರೆಗೆ ಅಧಿವೇಶನದಿಂದ ಅಮಾನತುಗೊಳಿಸಲಾಗಿತ್ತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net