ಅಂದು ಮಕ್ಕಳ ಹಸಿವು ನೀಗಿಸಲು 100 ರೂ. ಸಾಲ ಪಡೆದ ಮಹಿಳೆ ಇಂದು 2 ರೆಸ್ಟೋರೆಂಟ್​ ಓನರ್: 30 ಮಂದಿಗೆ ಉದ್ಯೋಗದಾತೆ​! Success Story

ಕೇರಳದ ಕೊಟ್ಟಕ್ಕಲ್ ಮೂಲದ ಶರೀಫಾ ಕಲಾತಿಂಕಲ್
ಕೇರಳದ ಕೊಟ್ಟಕ್ಕಲ್ ಮೂಲದ ಶರೀಫಾ ಕಲಾತಿಂಕಲ್
Published on

ಪ್ರಮುಖ ಮುಖ್ಯಾಂಶಗಳು

  • ಯಶಸ್ಸು ಅನ್ನೋದು ರಾತ್ರೋರಾತ್ರಿ ಬರುವಂಥದ್ದಲ್ಲ, ಅದರ ಹಿಂದೆ ಸಾಕಷ್ಟು ಶ್ರಮ ಇರುತ್ತದೆ
  • ಯಶಸ್ಸಿಗಾಗಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ ಮತ್ತು ಅವಮಾನಗಳನ್ನು ಎದುರಿಸಬೇಕಾಗುತ್ತದೆ
  • ಶರೀಫಾ ಕಲಾತಿಂಕಲ್ ಅವರ ಯಶೋಗಾಥೆ ನಿಮ್ಮಲ್ಲರಿಗೂ ಸ್ಫೂರ್ತಿ ನೀಡುವುದರಲ್ಲಿ ಸಂದೇಹವೇ ಇಲ್ಲ
Success Story : ಯಶಸ್ಸು ಅನ್ನೋದು ರಾತ್ರೋರಾತ್ರಿ ಬರುವಂಥದ್ದಲ್ಲ, ಅದರ ಹಿಂದೆ ಸಾಕಷ್ಟು ಶ್ರಮ ಇರುತ್ತದೆ. ಅನೇಕ ಕಷ್ಟಗಳನ್ನು ದಾಟ ಬೇಕಾಗುತ್ತದೆ. ನಿದ್ರೆಯಿಲ್ಲದ ರಾತ್ರಿಗಳು, ಖಾಲಿ ಹೊಟ್ಟೆಯಲ್ಲಿ ನಡೆದ ಹಾದಿಗಳು ಹಾಗೂ ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ಈ ಜಗತ್ತು ನಿಮ್ಮನ್ನು ಗುರುತಿಸುವುದೇ ಇಲ್ಲ. ಯಾವಾಗ ಯಶಸ್ಸು ನಿಮ್ಮದಾಗುತ್ತೋ ಆಗ ನಿಮ್ಮ ಬಗ್ಗೆ ಎಲ್ಲರು ಮಾತನಾಡುತ್ತಾರೆ ಮತ್ತು ನಿಮ್ಮ ಬೆನ್ನು ತಟ್ಟುತ್ತಾರೆ. ಅಂಥದ್ದೇ ಯಶೋಗಾಥೆಯನ್ನು ನಾವಿಂದು ನಿಮಗೆ ತಿಳಿಸುತ್ತೇವೆ.
ಕೇರಳದ ಕೊಟ್ಟಕ್ಕಲ್ ಮೂಲದ ಶರೀಫಾ ಕಲಾತಿಂಕಲ್ ಅವರ ಯಶೋಗಾಥೆ ನಿಮ್ಮಲ್ಲರಿಗೂ ಸ್ಫೂರ್ತಿ ನೀಡುವುದರಲ್ಲಿ ಸಂದೇಹವೇ ಇಲ್ಲ. ಅಂದು ತೀವ್ರ ಹಸಿವಿನಿಂದ ಪಾರಾಗಲು ಒಂದು ಕೆಲಸವನ್ನು ಪ್ರಾರಂಭಿಸಿದರು. ಆದರೆ, ಇಂದು ಒಂದು ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಹೌದು, 2012 ರಲ್ಲಿ ಶರೀಫಾ ಅವರು ತಮ್ಮ ನೆರೆಹೊರೆಯವರಿಂದ 100 ರೂ.ಗಳನ್ನು ಸಾಲವಾಗಿ ಪಡೆದು, ಒಂದು ಕೆಲಸ ಆರಂಭಿಸಿದರು. ಕೆಲಸದ ಮೇಲಿನ ತಮ್ಮ ಬದ್ಧತೆಯಿಂದಾಗಿ ಇಂದು ಕುಟುಂಬಶ್ರೀಯ ಪ್ರೀಮಿಯಂ ಕೆಫೆ ಸೇರಿದಂತೆ ಎರಡು ರೆಸ್ಟೋರೆಂಟ್‌ಗಳು ಮತ್ತು ಅಡುಗೆ ಸಂಸ್ಥೆಯ ಮಾಲೀಕರಾಗಿದ್ದಾರೆ. ಈ ವರ್ಷ ರಾಜ್ಯದ ಅತ್ಯುತ್ತಮ ಕುಟುಂಬಶ್ರೀ ಉದ್ಯಮಿ ಪ್ರಶಸ್ತಿಯನ್ನು ಗೆದ್ದ ಶರೀಫಾ, 20 ಮಹಿಳೆಯರು ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ಉದ್ಯೋಗದಾತೆಯಾಗಿದ್ದಾರೆ.
ಶರೀಫಾ ಅವರ ಪತಿ ವೃತ್ತಿಯಲ್ಲಿ ಪೇಂಟರ್ ಆಗಿದ್ದರು. ಆದರೆ, ಮಳೆಗಾಲದಲ್ಲಿ ತಮ್ಮ ಕೆಲಸವನ್ನು ಕಳೆದುಕೊಂಡರು. ಮಕ್ಕಳಿಗೆ ಅಡುಗೆ ಮಾಡಿ ಉಣಿಸಲು, ಮನೆಯಲ್ಲಿ ಅಕ್ಕಿ ಕೂಡ ಇರಲಿಲ್ಲ. ಇದರ ನಡುವೆ ಬಾಡಿಗೆ ಮನೆಯಿಂದ ಅವರನ್ನು ಹೊರಹಾಕುವ ಅಪಾಯವಿತ್ತು. 10ನೇ ತರಗತಿ ಓದಿದ್ದ ಶರೀಫಾಗೆ ಅಡುಗೆ ಮಾಡುವುದನ್ನು ಬಿಟ್ಟು ಬೇರೆ ಕೆಲಸ ತಿಳಿದಿರಲಿಲ್ಲ. ತನ್ನ ಮನೆಯ ಹತ್ತಿರದ ಅಂಗಡಿಯವನೊಬ್ಬನ ಬಳಿ ಹೋಗಿ ಉಣ್ಣಿಯಪ್ಪಂ ( ಕೇರಳ ರಾಜ್ಯದ ಜನಪ್ರಿಯ ಸಾಂಪ್ರದಾಯಿಕ ಸಿಹಿ ತಿಂಡಿ) ಮಾಡಿ ಮಾರಾಟ ಮಾಡಬಹುದೇ ಎಂದು ಕೇಳಿದಳು. ನಂತರ ನೆರೆಮನೆಯವರಿಂದ 100 ರೂಪಾಯಿ ಸಾಲ ಪಡೆದು ಉಣ್ಣಿಯಪ್ಪಂ ವ್ಯಾಪಾರ ಆರಂಭಿಸಿದರು.
ಉಣ್ಣಿಯಪ್ಪಂಗೆ ಬೇಡಿಕೆ ಹೆಚ್ಚಾದಂತೆ ಅದನ್ನು ಹೆಚ್ಚಿನ ಅಂಗಡಿಗಳಿಗೆ ವಿಸ್ತರಣೆ ಮಾಡಿದರು. ತಮ್ಮ ಮೂರು ತಿಂಗಳ ಮಗಳನ್ನು ಹೊತ್ತುಕೊಂಡು ನಾಲ್ಕು ಕಿಲೋಮೀಟರ್ ನಡೆದು ಅಂಗಡಿಗಳಿಗೆ ಉಣ್ಣಿಯಪ್ಪಂ ತಲುಪಿಸುತ್ತಿದ್ದರು. ಬಳಿಕ ಪಥಿರಿ ( ಅಕ್ಕಿ ಹಿಟ್ಟಿನಿಂದ ತಯಾರಿಸಿದ ಮೃದುವಾದ, ತೆಳ್ಳಗಿನ, ದುಂಡಗಿನ ಚಪ್ಪಟೆ ಬ್ರೆಡ್ ) ಮತ್ತು ಚಪಾತಿಗಾಗಿ ಆರ್ಡರ್‌ಗಳನ್ನು ಸ್ವೀಕರಿಸುವ ಮೂಲಕ ಸಣ್ಣ ಪ್ರಮಾಣದಲ್ಲಿ ಅಡುಗೆ ಸೇವೆ ಪ್ರಾರಂಭಿಸಿದರು.
ತಮ್ಮ ಉದ್ಯಮ ಬೆಳೆಯುತ್ತಿದ್ದಂತೆ ಶರೀಫಾ ಅವರು ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋದರು. ಆದರೆ, ಯಾವುದೇ ಆಸ್ತಿ ಹಾಗೂ ಉದ್ಯೋಗ ಇಲ್ಲದ ಕಾರಣ ಸಾಲ ನೀಡಲು ಬ್ಯಾಂಕ್​ನವರು ತಿರಸ್ಕರಿಸಿದರು. ಇದರಿಂದ ಶರೀಫಾಗೆ ತುಂಬಾ ಬೇಸರವಾಯಿತು. ಆದರೂ, ಶರೀಫಾ ಅವರು ತಮ್ಮ ಪ್ರಯತ್ನ ಹಾಗೂ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಆತ್ಮವಿಶ್ವಾಸ, ಅವರನ್ನು ಇನ್ನಷ್ಟು ಶ್ರಮ ಹಾಕಲು ಪ್ರೇರೇಪಿಸಿತು.
ಶರೀಫಾ ಅವರು 2018ರಲ್ಲಿ ಕುಟುಂಬಶ್ರೀ ಯೋಜನೆ ಮೂಲಕ 2 ಲಕ್ಷ ರೂಪಾಯಿ ಸಾಲವನ್ನು ಪಡೆದರು. ನಂತರ ತಮ್ಮ ಅಡುಗೆ ಸೇವೆಯನ್ನು ವಿಸ್ತರಿಸಿದರು. ಕೋವಿಡ್ ಅವಧಿಯಲ್ಲಿ, ಸರ್ಕಾರಿ ಆಸ್ಪತ್ರೆಗಳ ರೋಗಿಗಳು ಮತ್ತು ಉದ್ಯೋಗಿಗಳಿಗೆ ಆಹಾರ ಒದಗಿಸುವ ಕುಟುಂಬಶ್ರೀ ಯೋಜನೆಯ ಒಪ್ಪಂದವನ್ನು ಪುನರುಜ್ಜೀವನಗೊಳಿಸಲಾಯಿತು. ಕೊಟ್ಟಕ್ಕಲ್ ಆಯುರ್ವೇದ ಆಸ್ಪತ್ರೆ ಮತ್ತು ಮಲಪ್ಪುರಂ ಕೇಂದ್ರೀಯ ವಿದ್ಯಾಲಯದಲ್ಲಿ ಶರೀಫಾ ಅವರು ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿದರು. ಇದು ಶರೀಫಾ ಅವರ ಬಾಳಿಗೆ ಬೆಳಕಾಯಿತು.
ಕೊಟ್ಟಕ್ಕಲ್‌ನಲ್ಲಿ ಮತ್ತೊಂದು ರೆಸ್ಟೋರೆಂಟ್ ಅನ್ನು ಸಹ ತೆರೆಯಲಾಯಿತು. ಇತ್ತೀಚೆಗೆ, 30 ಲಕ್ಷ ರೂ. ಖರ್ಚು ಮಾಡಿ 85 ಜನರಿಗೆ ಕುಳಿತುಕೊಳ್ಳಬಹುದಾದ ಆಧುನಿಕ ಸೌಲಭ್ಯಗಳುಳ್ಳ ಕುಟುಂಬಶ್ರೀ ಪ್ರೀಮಿಯಂ ಕೆಫೆಯನ್ನು ಶರೀಫಾ ತೆರೆದಿದ್ದಾರೆ. ಈ ಕೆಫೆ ಮೂಲಕ ಸರ್ಕಾರಿ ಕಾರ್ಯಕ್ರಮಗಳು ಮತ್ತು ಕುಟುಂಬಶ್ರೀ ಮೇಳಗಳಿಗೆ ಷರೀಫಾ ಅಡುಗೆ ಸೇವೆಯನ್ನು ಒದಗಿಸುತ್ತಾರೆ.
ಕೊಟ್ಟಕ್ಕಲ್ ನೂಲುವ ಗಿರಣಿ ಬಳಿ ತಮ್ಮದೇಯಾದ ಹೊಸ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ಹೊಸ ವಾಹನವನ್ನು ಸಹ ಖರೀದಿಸಿದ್ದಾರೆ. ತಮ್ಮ ಮಗ ಸೆಬಿಯಾಸ್‌ನನ್ನು ಅಧ್ಯಯನಕ್ಕಾಗಿ ಯುಕೆಗೆ ಕಳುಹಿಸಿದ್ದು, ಆತ ಹೃದಯ ವಿಜ್ಞಾನಿಯಾಗಿದ್ದಾನೆ. ಅವರ ಮಗಳು ಫಾತಿಮಾ ಕೂಡ ಫೆಮಿನಾ ವೈದ್ಯಕೀಯ ಪ್ರವೇಶ ತರಬೇತಿಯ ವಿದ್ಯಾರ್ಥಿನಿ. ಶರೀಫಾ ಅವರು ಮಲಪ್ಪುರಂನಲ್ಲಿ ಸಮ್ಮೇಳನ ಸಭಾಂಗಣವನ್ನು ಹೊಂದಿರುವ ರೆಸ್ಟೋರೆಂಟ್‌ಗೆ ತಯಾರಿ ನಡೆಸುತ್ತಿದ್ದಾರೆ.
ನಾನು ಚಿಕ್ಕ ಮಗುವನ್ನು ಹೊತ್ತಿಕೊಂಡು ಅಂಗಡಿಗಳಿಗೆ ಹೋಗಿ ಉಣ್ಣಿಯಪ್ಪಂ ಮಾರುವುದನ್ನು ನೋಡಿ ಅನೇಕ ಜನರು ನನ್ನನ್ನು ಗೇಲಿ ಮಾಡಿದ್ದಾರೆ. ನಾನು ಪರಿಶ್ರಮ ಪಟ್ಟಿದ್ದರಿಂದ ಇಂದು 30 ಜನರಿಗೆ ಉದ್ಯೋಗ ನೀಡಲು ಸಾಧ್ಯವಾಯಿತು ಎಂದು ಶರೀಫಾ ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net