ಮನೆಯಲ್ಲಿ ತಾಯಿಯ ಜೊತೆ ಕುಳಿತಿದ್ದಾಗ ಜಾರ್ಜ್ಟೌನ್ ವಿಶ್ವವಿದ್ಯಾಲಯದಿಂದ ಬಂದ ಆ ಅದ್ಭುತ ಇಮೇಲ್, ಆದರ್ಶ್ ಜೀವನದ ದೊಡ್ಡ ತಿರುವಾಯಿತು. ಅದು ಬರೋಬ್ಬರಿ 3.5 ಕೋಟಿ ರೂ.ಗಳ ಸಂಪೂರ್ಣ ಸ್ಕಾಲರ್‌ಶಿಪ್ ಒಳಗೊಂಡ ಪ್ರವೇಶ ಪತ್ರವಾಗಿತ್ತು. ಇದರಲ್ಲಿ ಬೋಧನಾ ಶುಲ್ಕ, ವಸತಿ, ಊಟ, ವಿಮಾನ ಟಿಕೆಟ್, ವೀಸಾ, ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ವೆಚ್ಚಗಳು ಸಂಪೂರ್ಣ ಉಚಿತವಾಗಿದ್ದವು. ಈ ಸುದ್ದಿಯನ್ನು ಕೇಳಿ ಭಾವುಕರಾದ ಆದರ್ಶ್, ತಂದೆಯಿಲ್ಲದೆ ತಮ್ಮನ್ನು ಬೆಳೆಸಿದ ಅಮ್ಮನ ಬಳಿ ಮೊದಲು ಈ ಸಂತೋಷವನ್ನು ಹಂಚಿಕೊಂಡರು. ಕತಾರ್‌ನ 'ಎಜುಕೇಶನ್ ಸಿಟಿ'ಯಲ್ಲಿರುವ ಈ ವಿಶ್ವವಿದ್ಯಾಲಯದಲ್ಲಿ 70ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳೊಂದಿಗೆ ಅವರು ರಾಜಕೀಯ, ಅರ್ಥಶಾಸ್ತ್ರ ಮತ್ತು ಅಂತಾರರಾಷ್ಟ್ರೀಯ ಸಂಬಂಧಗಳು ವಿಷಯದಡಿ ಉನ್ನತ ಶಿಕ್ಷಣ ಪಡೆಯಲಿದ್ದಾರೆ.