ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ; ನನ್ನ ಹೇಳಿಕೆಯಲ್ಲಿ ತಪ್ಪಿಲ್ಲ; ಕ್ಷಮೆಯಾಚಿಸಲ್ಲ ಎಂದ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ | Prithviraj Chavan

ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್
ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್
Published on
ಮುಂಬೈ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಮೊದಲ ದಿನವೇ ಸೋತಿತು ಎಂಬ ಹೇಳಿಕೆಯೂ ರಾಜಕೀಯ ವಿವಾದವನ್ನು ಹುಟ್ಟು ಹಾಕಿದ್ದು, ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ಆದ್ದರಿಂದ ನಾನು ಯಾವುದೇ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಬುಧವಾರ(ಡಿ. 17) ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಾನೇಕೆ ಕ್ಷಮೆ ಕೇಳಲಿ?, ಅದು ಪ್ರಶ್ನೆಯಿಂದ ಹೊರಗಿದೆ. ಸಂವಿಧಾನವು ನನಗೆ ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ನೀಡಿದೆ ಎಂದು ತಮ್ಮ ಮಂಗಳವಾರದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸೇನೆ ಅವಮಾನಿಸುವುದು ಕಾಂಗ್ರೆಸ್​ನ ಲಕ್ಷಣ ಎಂದು ಬಿಜೆಪಿ ಕಿಡಿ

ಪೃಥ್ವಿರಾಜ್ ಚವ್ಹಾಣ್ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ, ಕಾಂಗ್ರೆಸ್ ಭಾರತೀಯ ಸಶಸ್ತ್ರ ಪಡೆಗಳನ್ನು ಅಗೌರವಿಸುತ್ತಿದೆ ಮತ್ತು ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳನ್ನು ದುರ್ಬಲಗೊಳಿಸುತ್ತಿದೆ. ಮಾಜಿ ಸಿಎಂ ನೀಡಿದ ಹೇಳಿಕೆಗಳು ಆಘಾತಕಾರಿ ಮತ್ತು ವಾಯುಪಡೆ ಮತ್ತು ಸಶಸ್ತ್ರ ಪಡೆಗಳನ್ನು ಗುರಿಯಾಗಿರಿಸಿಕೊಂಡಿವೆ. ಸೇನೆಯನ್ನು ಅವಮಾನಿಸುವುದು ಕಾಂಗ್ರೆಸ್ ಪಕ್ಷದ ವಿಶಿಷ್ಟ ಲಕ್ಷಣವಾಗಿದೆ. ಇದು ಕೇವಲ ಪೃಥ್ವಿರಾಜ್ ಚವಾಣ್ ಅವರ ಹೇಳಿಕೆಯಲ್ಲ. ರಾಹುಲ್ ಗಾಂಧಿ ಕೂಡ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದೇನು?

ಮಂಗಳವಾರ ಪುಣೆಯಲ್ಲಿ ಮಾತನಾಡಿದ್ದ ಚವ್ಹಾಣ್, ಆಪರೇಷನ್ ಸಿಂಧೂರ್‌ನ ಮೊದಲ ದಿನ ನಾವು ಸಂಪೂರ್ಣವಾಗಿ ಸೋತಿದ್ದೇವೆ. 7ರಂದು ನಡೆದ ಅರ್ಧ ಗಂಟೆಯ ವೈಮಾನಿಕ ಕಾರ್ಯಾಚರಣೆಯಲ್ಲಿ ಜನರು ಒಪ್ಪಬಹುದು, ಒಪ್ಪದೇ ಇರಬಹುದು ನಾವು ಸಂಪೂರ್ಣವಾಗಿ ಸೋತಿದ್ದೇವೆ. ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಯಿತು. ಒಂದೇ ಒಂದು ವಿಮಾನವೂ ಹಾರಲಿಲ್ಲ. ಗ್ವಾಲಿಯರ್, ಬಟಿಂಡಾ ಅಥವಾ ಸಿರ್ಸಾದಿಂದ ಯಾವುದೇ ವಿಮಾನ ಹೊರಟಿದ್ದರೆ, ಪಾಕಿಸ್ತಾನವು ಹೊಡೆದುರುಳಿಸುವ ಹೆಚ್ಚಿನ ಸಂಭವನೀಯತೆ ಇತ್ತು ಅದಕ್ಕಾಗಿಯೇ ವಾಯುಪಡೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಯಿತು ಎಂದು ಹೇಳಿದ್ದರು.
ಆಪರೇಷನ್ ಸಿಂಧೂರ್ ಸಮಯದಲ್ಲಿ ನಾವು ನೋಡಿದ್ದೇವೆ ಮಿಲಿಟರಿಯ ಒಂದು ಕಿಲೋಮೀಟರ್ ಚಲನೆಯೂ ಇರಲಿಲ್ಲ. ಎರಡು ಅಥವಾ ಮೂರು ದಿನಗಳಲ್ಲಿ ಏನೇ ನಡೆದರೂ ಅದು ಕೇವಲ ವೈಮಾನಿಕ ಯುದ್ಧ ಮತ್ತು ಕ್ಷಿಪಣಿ ಯುದ್ಧವಾಗಿತ್ತು. ಭವಿಷ್ಯದಲ್ಲಿಯೂ ಸಹ ಯುದ್ಧಗಳು ಅದೇ ರೀತಿಯಲ್ಲಿ ನಡೆಯುತ್ತವೆ. ಈ ಪರಿಸ್ಥಿತಿಯಲ್ಲಿ ನಾವು ನಿಜವಾಗಿಯೂ 12 ಲಕ್ಷ ಸೈನಿಕರ ಸೈನ್ಯವನ್ನು ನಿರ್ವಹಿಸುವ ಅಗತ್ಯವಿದೆಯೇ?, ಅಥವಾ ಅವರಿಂದ ಬೇರೆ ಏನನ್ನಾದರೂ ಕೆಲಸ ಮಾಡಿಸಬಹುದೇ ಎಂದಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net