ಪಹಲ್ಗಾಮ್​ ದಾಳಿಯಿಂದ ದೆಹಲಿ ಸ್ಫೋಟದವರೆಗೆ... 2025ರಲ್ಲಿ ಸಂಭವಿಸಿದ ಪ್ರಮುಖ ದುರಂತಗಳು! Major Tragedies

2025ರಲ್ಲಿ ಸಂಭವಿಸಿದ ಪ್ರಮುಖ ದುರಂತಗಳು
2025ರಲ್ಲಿ ಸಂಭವಿಸಿದ ಪ್ರಮುಖ ದುರಂತಗಳು
Published on

ಪ್ರಮುಖ ಮುಖ್ಯಾಂಶಗಳು

  • ಇಡೀ ಜಗತ್ತು 2026ರ ಹೊಸ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ
  • 2025ನೇ ವರ್ಷವನ್ನು ನೆನೆದು ಅನೇಕರು ಭಾವುಕ ವಿದಾಯ ಹೇಳಲು ಸಜ್ಜಾಗಿದ್ದಾರೆ
  • ಈ ವರ್ಷ ಮರೆಯುವಂತಹ ಹಾಗೂ ಮರೆಯಲಾರದಂತಹ ಎಷ್ಟೋ ಕ್ಷಣಗಳು ಘಟಿಸಿವೆ
  • ಈ ವರ್ಷದ ಪ್ರಮುಖ ದುರಂತಗಳು ಯಾವುವು ಎಂಬುದನ್ನು ನಾವೀಗ ಮೆಲುಕು ಹಾಕೋಣ
ನವದೆಹಲಿ: ಕೆಲವೇ ದಿನಗಳಲ್ಲಿ 2025 ವರ್ಷ ಕೊನೆಗೊಳ್ಳಲಿದ್ದು, 2026ರ ಹೊಸ ವರ್ಷ ಆಗಮಿಸುತ್ತಿದೆ. ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧರಾಗುತ್ತಿದ್ದಾರೆ. ಇದೇ ಸಮಯದಲ್ಲಿ ನಮ್ಮಿಂದ ದೂರವಾಗಿ ಇತಿಹಾಸ ಪುಟ ಸೇರಲಿರುವ 2025ನೇ ವರ್ಷವನ್ನು ನೆನೆದು ಅನೇಕರು ಭಾವುಕ ವಿದಾಯ ಹೇಳಲು ಸಜ್ಜಾಗುತ್ತಿದ್ದಾರೆ. ಈ ವರ್ಷ ಸಾಕಷ್ಟು ಘಟನೆಗಳು ನಡೆದಿವೆ. ಪ್ರತಿ ಕ್ಷೇತ್ರದಲ್ಲೂ ಮರೆಯುವಂತಹ ಹಾಗೂ ಮರೆಯಲಾರದಂತಹ ಎಷ್ಟೋ ಕ್ಷಣಗಳು ಘಟಿಸಿವೆ. ಅದೇ ರೀತಿ 2025 ಕೆಲವು ಕಹಿ ನೆನಪುಗಳನ್ನು ನಮ್ಮ ಬಳಿ ಬಿಟ್ಟು ಹೋಗಲಿದೆ. ಈ ವರ್ಷ ಅನೇಕ ಕುಟುಂಬಗಳಲ್ಲಿ ಅಪಾರ ದುಃಖವನ್ನು ತುಂಬಿದೆ. ಈ ವರ್ಷ ಅನೇಕ ದೊಡ್ಡ ದುರಂತಗಳು ನಡೆದಿದ್ದು, ಕಾಲ್ತುಳಿತ ಮತ್ತು ಸ್ಫೋಟಗಳಲ್ಲಿ ಮುಗ್ಧ ಜೀವಗಳು ಬಲಿಯಾಗಿವೆ. ಈ ವರ್ಷದ ಪ್ರಮುಖ ದುರಂತಗಳು ( Major Tragedies ) ಯಾವುವು ಎಂಬುದನ್ನು ನಾವೀಗ ಮೆಲುಕು ಹಾಕೋಣ.

ಮಹಾಕುಂಭಮೇಳದಲ್ಲಿ ಕಾಲ್ತುಳಿತ

ಈ ವರ್ಷದ ಆರಂಭದಲ್ಲೇ ಒಂದು ದೊಡ್ಡ ದುರಂತ ಸಂಭವಿಸಿತು. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಉತ್ಸವವಾದ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿತು. ಈ ಕಾಲ್ತುಳಿತದಲ್ಲಿ 30 ಜನರು ಸಾವಿಗೀಡಾಗಿ, 60 ಜನರು ಗಾಯಗೊಂಡರು. 'ಮೌನಿ ಅಮಾವಾಸ್ಯೆ' ಆಗಿದ್ದರಿಂದ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ಈ ಸಂದರ್ಭದಲ್ಲಿ ಗದ್ದಲ ಉಂಟಾಯಿತು. ಸೆಕ್ಟರ್ -2 ರಲ್ಲಿ ಕಾಲ್ತುಳಿತ ಸಂಭವಿಸಿ ಸಾವು-ನೋವುಗಳು ಸಂಭವಿಸಿದವು. 

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ 

ಫೆಬ್ರವರಿ 15 ರಂದು ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿತು. ಈ ಅಪಘಾತದಲ್ಲಿ 18 ಜನರು ಸಾವಿಗೀಡಾಗಿ, 12 ಜನರು ಗಾಯಗೊಂಡರು. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ದೆಹಲಿ ರೈಲು ನಿಲ್ದಾಣದಿಂದ ಪ್ರಯಾಗ್‌ರಾಜ್‌ ಹೊರಡಲು ಹೆಚ್ಚಿನ ಸಂಖ್ಯೆಯ ಭಕ್ತರು ಧಾವಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಪಹಲ್ಗಾಮ್​ ದಾಳಿ

2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಸಮೀಪದ ಪ್ರವಾಸಿ ತಾಣ ಬೈಸರನ್ ಕಣಿವೆಯಲ್ಲಿ ಲಷ್ಕರ್-ಇ-ತೊಯ್ಬಾ (LeT) ಮತ್ತು ಅದರ ಅಂಗ ಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF)ಗೆ ಸಂಬಂಧಿಸಿದ ಪಾಕಿಸ್ತಾನ ಮೂಲದ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮುಖ್ಯವಾಗಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 26 ಅಮಾಯಕರು ಬಲಿಯಾದರು. ಈ ದಾಳಿಯಲ್ಲಿ ಓರ್ವ ಪ್ರವಾಸಿ ಕ್ರಿಶ್ಚಿಯನ್ ಮತ್ತು ಸ್ಥಳೀಯ ಮುಸ್ಲಿಂ ಕೂಡ ಮೃತಪಟ್ಟರು. ಈ ದಾಳಿಯು ಭಾರತ ಹಾಗೂ ಪಾಕಿಸ್ತಾನ ನಡುವೆ ತೀವ್ರ ಉದ್ವಿಗ್ನತೆಗೆ ಕಾರಣವಾಯಿತು. ಇದರಿಂದ ಭಾರತದ ಸೇನೆ 'ಆಪರೇಷನ್ ಸಿಂಧೂರ' ಹೆಸರಿನಲ್ಲಿ ಪ್ರತೀಕಾರ ದಾಳಿ ನಡೆಸಿತು. ಪಾಕಿಸ್ತಾನ ಸೇನಾ ಶಿಬಿರ ಹಾಗೂ ಉಗ್ರರ ಶಿಬಿರಗಳ ಮೇಲೆ ಕರಾರುವೊಕ್ಕಾಗಿ ದಾಳಿ ಮಾಡಿ ನೂರಾರು ಉಗ್ರರನ್ನು ಹೊಡೆದುರುಳಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ 

ಕ್ರಿಕೆಟ್ ಮೇಲಿನ ಉತ್ಸಾಹ ಜೀವಗಳನ್ನು ಬಲಿ ತೆಗೆದುಕೊಂಡಿತು. ಹೌದು, ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. 18 ವರ್ಷಗಳ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಿತು. ಇದೇ ಖುಷಿಯಲ್ಲಿ ವಿಜಯೋತ್ಸವ ಆಚರಿಸಲು ಆರ್​ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಮುಂಚೆಯೇ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. ಕ್ರೀಡಾಂಗಣಕ್ಕೆ ಆಟಗಾರರು ಬರುತ್ತಾರೆ ಅನ್ನೋ ಸುದ್ದಿ ಕೇಳಿದ ಕ್ರೀಡಾಭಿಮಾನಿಗಳು ಒಮ್ಮೆಲ್ಲೆ ಸ್ಟೇಡಿಂಯಂನತ್ತ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟರು. ಅಲ್ಲದೆ, 47 ಮಂದಿ ಗಾಯಗೊಂಡರು. ಜನರು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಉಚಿತ ಪಾಸ್‌ಗಳು ದೊರೆಯುತ್ತದೆ ಎಂಬ ವದಂತಿ ಹಾಗೂ ದೊಡ್ಡ ಜನಸಂದಣಿ ಮತ್ತು ಸರಿಯಾದ ನಿರ್ವಹಣೆಯ ಕೊರತೆಯಿಂದ ಕಾಲ್ತುಳಿತ ಸಂಭವಿಸಿತು. 

ಕರೂರು ಕಾಲ್ತುಳಿತ

ನೆಚ್ಚಿನ ನಟನನ್ನು ನೋಡಲು ಬಂದ ಜನಸಮೂಹ ಮೃತ್ಯುವಿನ ಕೂಪಕ್ಕೆ ಬಿದ್ದಿತು. ಹೌದು, ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ಮತ್ತು ಚಲನಚಿತ್ರ ನಟ ವಿಜಯ್ ಆಯೋಜಿಸಿದ್ದ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತು. ಈ ಘಟನೆಯಲ್ಲಿ 41 ಜನರು ಸಾವಿಗೀಡಾದರು ಮತ್ತು 50 ಜನರು ಗಾಯಗೊಂಡರು. ಅತ್ಯಂತ ನೋವಿನ ಸಂಗತಿ ಏನೆಂದರೆ, ಸತ್ತವರಲ್ಲಿ 11 ಮಕ್ಕಳು ಕೂಡ ಸೇರಿದ್ದರು. ವಿಜಯ್ ಅವರ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ನಿರೀಕ್ಷೆಗಿಂತ ಹೆಚ್ಚಿನ ಜನರು ಆಗಮಿಸಿದ್ದರು. ಅದೇ ಸಮಯದಲ್ಲಿ, ವಿಜಯ್ ಈ ಸಭೆಗೆ ಬಹಳ ತಡವಾಗಿ ಬಂದರು. ಈ ವೇಳೆ ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತ ಸಂಭವಿಸಿತು.

ದೆಹಲಿ ಸ್ಫೋಟ

2025ರ ನವೆಂಬರ್ 10ರ ಸಂಜೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿಯ ರಸ್ತೆಯಲ್ಲಿ i20 ಹ್ಯೂಂಡೈ ಕಾರು ಸ್ಫೋಟಗೊಂಡು ಕನಿಷ್ಠ 12 ನಾಗರಿಕರು ಮೃತಪಟ್ಟರು ಮತ್ತು 20 ರಿಂದ 30 ಜನರು ಗಾಯಗೊಂಡರು. ಈ ದಾಳಿಯನ್ನು ಆತ್ಮಾಹುತಿ ಬಾಂಬ್ ದಾಳಿಯೆಂದು ಶಂಕಿಸಲಾಗಿದೆ. ಕಾರು ಚಾಲಕನಾಗಿದ್ದ ವೈದ್ಯ ಡಾ. ಉಮರ್ ಉನ್ ನಬಿ ಸುಸೈಡ್ ಬಾಂಬರ್ ಎಂಬುದು ತನಿಖೆಯಲ್ಲಿ ತಿಳಿದುಬಂತು. ಇದರ ಹಿಂದೆ ವೈದ್ಯರ ಒಂದು ತಂಡವಿದ್ದರಿಂದ ಅನೇಕ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಗೆ ಜೈಶ್-ಇ-ಮೊಹಮ್ಮದ್ ಮತ್ತು ದೇಶೀಯ ಉಗ್ರ ಮಾಡ್ಯೂಲ್‌ಗಳೊಂದಿಗೆ ಸಂಪರ್ಕವಿದೆ ಎಂದು ತನಿಖೆಯಲ್ಲಿ ಬಯಲಾಗಿದ್ದು, ಭಾರತ ಸರ್ಕಾರ ಇದನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸಿ ಕಠಿಣ ಕಾನೂನುಗಳಡಿ ತನಿಖೆ ನಡೆಸುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net