ಹೆಂಡ್ತಿ, ಮಗ!...ಕೆಲವೇ ಸೆಕೆಂಡ್‌ಗಳಲ್ಲಿ ಇಡೀ ಸಂಸಾರವೇ ನಾಶವಾಯ್ತು: ನೇಪಾಳ ಜಲಪ್ರಳಯದ ಭೀಕರತೆ ಬಿಚ್ಚಿಟ್ಟ ಸಂತ್ರಸ್ತ! | Nepal Floods

Nepal Floods | ನೇಪಾಳ ಜಲಪ್ರಳಯದ ಭೀಕರತೆ ಬಿಚ್ಚಿಟ್ಟ ಸಂತ್ರಸ್ತ!
Nepal Floods | ನೇಪಾಳ ಜಲಪ್ರಳಯದ ಭೀಕರತೆ ಬಿಚ್ಚಿಟ್ಟ ಸಂತ್ರಸ್ತ!
Published on

ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹಕ್ಕೆ (Nepal Floods) ಕನಿಷ್ಠ 175 ಜನರು ಮೃತಪಟ್ಟಿದ್ದು, 300 ಭಾರತೀಯರು ಸೇರಿದಂತೆ 800ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಭೋಟಿ ಕೋಶಿ ನದಿಯ ಉಪನದಿಯಾದ ಲ್ಹೆಂಡೆ ನದಿಗೆ ಹಿಮನದಿ ಕುಸಿದು ನೀರು ತಡೆದು ನಿಂತಿತ್ತು. ಆ ತಡೆಗೋಡೆ ಒಮ್ಮೆಲೆ ಒಡೆದುಬಿದ್ದಿದ್ದರಿಂದ ಈ ಭೀಕರ ವಿಕೋಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಪ್ರವಾಹವು ರಸುವಾಗಢಿಯ ಬಳಿಯ ತಿಮುರೆ ಪ್ರದೇಶಕ್ಕೆ ಮೊದಲು ಅಪ್ಪಳಿಸಿದ್ದು, ಕೆಲವೇ ನಿಮಿಷಗಳಲ್ಲಿ ರಸುವಾ, ನುವಾಕೋಟ್ ಮತ್ತು ಧಾದಿಂಗ್ ಜಿಲ್ಲೆಗಳ ಗ್ರಾಮಗಳನ್ನು ಜಲಾವೃತವಾಗಿವೆ.
ಪ್ರವಾಹದ ನೀರು ತಗ್ಗಿದ್ದರೂ, ಮನೆಗಳು, ರಸ್ತೆಗಳು, ಸೇತುವೆಗಳು ಮತ್ತು ಸಾರ್ವಜನಿಕ ಸ್ಥಳಗಳು ಹಲವು ಮೀಟರ್ ಆಳದ ಕೆಸರು ಹಾಗೂ ಹೂಳಿನಿಂದ ಮುಚ್ಚಿಹೋಗಿವೆ. ಮನೆಗಳ ಮೊದಲ ಮಹಡಿಯವರೆಗೂ ಕೆಸರು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆಯಾಗಿದೆ. ಬೆಳಿಗ್ಗೆ ಅಧಿಕಾರಿಗಳು ಬಂದು ಟಿಬೆಟ್ ಭಾಗದ ನದಿ ಅಣೆಕಟ್ಟು ಒಡೆದಿದೆ, ಎತ್ತರದ ಪ್ರದೇಶಕ್ಕೆ ಓಡಿ ಎಂದು ಹೇಳುವಷ್ಟರಲ್ಲಿ ಪ್ರವಾಹದ ನೀರು ನುಗ್ಗಿಬಂತು ಎಂದು ನುವಾಕೋಟ್ ಪ್ರತ್ಯಕ್ಷದರ್ಶಿ ಒಬ್ಬರು ತಮ್ಮ ನೋವು ತೋಡಿಕೊಂಡಿದ್ದಾರೆ. ಅವರ 18 ವರ್ಷದ ಮಗ ಮತ್ತು ಹೆಂಡತಿ ಕೂಡ ಈ ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ.
ಈ ವಿಷಯವಾಗಿ ರಸುವಾದ ಅಧಿಕಾರಿ ರಾಜೇಂದ್ರ ಧುಂಗಾನಾ ಮಾತನಾಡಿ, ಭೂಮಿ ಕಂಪಿಸಿದ ಅನುಭವವಾಗಿ ನಾನು ಹೊರಗೆ ಓಡಿಬಂದಾಗ, ಹೊಗೆಯಂತೆ ಕಾಣುತ್ತಿದ್ದ ಬೃಹತ್ ನೀರಿನ ಅಲೆ ತಿಮುರೆ ಬಜಾರ್‌ಗೆ ನುಗ್ಗುತ್ತಿತ್ತು. ಸುಮಾರು 100 ಮೀಟರ್ ಎತ್ತರಕ್ಕೆ ಎದ್ದ ಆ ರಾಕ್ಷಸಿ ಅಲೆ ಕೆಲವೇ ಕ್ಷಣಗಳಲ್ಲಿ ಇಡೀ ಮಾರುಕಟ್ಟೆಯನ್ನು ನಾಶಮಾಡಿತು. ಚೆಕ್‌ಪೋಸ್ಟ್‌ನಲ್ಲಿದ್ದ 300ಕ್ಕೂ ಹೆಚ್ಚು ವಾಹನಗಳು ಪ್ರವಾಹದಲ್ಲಿ ಕೊಚ್ಚಿಹೋದವು ಎಂದಿದ್ದಾರೆ.
ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಪ್ರಕಾರ, ನಾಪತ್ತೆಯಾದ 823ಕ್ಕೂ ಹೆಚ್ಚು ಮಂದಿಯಲ್ಲಿ ಸುಮಾರು 300 ಭಾರತೀಯ ಪ್ರಜೆಗಳಿದ್ದು, ಅವರಲ್ಲಿ ಹೆಚ್ಚಿನವರು ಮಾನಸಸರೋವರ ಯಾತ್ರಿಕರಾಗಿದ್ದಾರೆ. ಇನ್ನೊಂದೆಡೆ, ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲಿ 558 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾ ಸರ್ಕಾರಿ ಮಾಧ್ಯಮ ತಿಳಿಸಿದ್ದು, ಅವರಲ್ಲಿ 260 ಮಂದಿ ವಿದೇಶಿಗರಿದ್ದಾರೆ. ಒಟ್ಟಾರೆಯಾಗಿ ಎರಡೂ ದೇಶ ಸೇರಿ ನಾಪತ್ತೆಯಾದವರ ಸಂಖ್ಯೆ 1,300 ದಾಟಿದೆ.
ದುರಂತದ ಭೀಕರತೆ ತಿಳಿಯುತ್ತಿದ್ದಂತೆ ಜಗತ್ತಿನಾದ್ಯಂತ ನೆರವು ಹರಿದುಬರುತ್ತಿದೆ. ಭಾರತ ಮೊದಲ ಕಂತಿ 10 ಟನ್, ಎರಡನೇ ಕಂತಿನಲ್ಲಿ 37.5 ಟನ್​ ಮಾನವೀಯ ಪರಿಹಾರ ಸಾಮಗ್ರಿಗಳು, ಅಮೆರಿಕ 5 ಲಕ್ಷ ಡಾಲರ್ ತುರ್ತು ನೆರವು ಘೋಷಿಸಿದ್ದರೆ, ರೆಡ್ ಕ್ರಾಸ್ ಸಂಸ್ಥೆಯು 14 ಲಕ್ಷ ಡಾಲರ್ ಪರಿಹಾರ ಹಣ ಬಿಡುಗಡೆ ಮಾಡಿದೆ. ಯುರೋಪಿಯನ್ ಯೂನಿಯನ್ ತನ್ನ ಕಾಪರ್ನಿಕಸ್ ಉಪಗ್ರಹ ವ್ಯವಸ್ಥೆಯನ್ನು ರಕ್ಷಣಾ ಕಾರ್ಯಕ್ಕೆ ಸಕ್ರಿಯಗೊಳಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net