ವಿಚ್ಛೇದನಕ್ಕೆ ಕಾರಣವಾಗಿತ್ತು ಗೊರಕೆ: ಕೌನ್ಸೆಲಿಂಗ್‌ನಿಂದ ಉಳಿಯಿತು ದಾಂಪತ್ಯ!

Snoring
Snoring
Published on
ಭೋಪಾಲ್: ಗಂಡನ ಜೋರಾದ ಗೊರಕೆಯಿಂದ(Snoring) ನಿದ್ರೆ ಬಾರದ ಕಾರಣ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿ, ಕೌನ್ಸೆಲಿಂಗ್ ಹಾಗೂ ಮೂರು ತಿಂಗಳ ಪ್ರತ್ಯೇಕ ವಾಸದ ಬಳಿಕ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡು ಮತ್ತೆ ಒಟ್ಟಾಗಿ ಜೀವನ ಮುಂದುವರಿಸಲು ತೀರ್ಮಾನಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಅಪರೂಪದ ಪ್ರಕರಣ ಕುಟುಂಬ ಸಮಾಲೋಚನೆ ವೇಳೆ ಬೆಳಕಿಗೆ ಬಂದಿದೆ ಎಂದು ಹಿರಿಯ ಕುಟುಂಬ ಸಲಹೆಗಾರ್ತಿ ರೀಟಾ ತುಲಿ ತಿಳಿಸಿದ್ದಾರೆ.
ಪತ್ನಿಗೆ ಗಂಡನ ಸ್ವಭಾವ, ಕುಟುಂಬ ಅಥವಾ ದಾಂಪತ್ಯ ಜೀವನದ ಬಗ್ಗೆ ಯಾವುದೇ ದೂರು ಇರಲಿಲ್ಲ. ಆದರೆ ಗಂಡನ ಜೋರಾದ ಗೊರಕೆಯಿಂದ ಪ್ರತಿದಿನ ರಾತ್ರಿ ನಿದ್ರೆ ಬಾರದ ಕಾರಣ ಮಾನಸಿಕವಾಗಿ ಕಂಗೆಟ್ಟು ವಿಚ್ಛೇದನವೇ ಪರಿಹಾರ ಎಂದು ಭಾವಿಸಿದ್ದರು ಎಂದು ಕೌನ್ಸೆಲರ್ ತಿಳಿಸಿದ್ದಾರೆ.

'ಗಂಡ ಒಳ್ಳೆಯವರೇ, ಗೊರಕೆಯೇ ಸಮಸ್ಯೆ'

ಕುಟುಂಬ ಸಮಾಲೋಚನೆ ವೇಳೆ ಪತ್ನಿ, "ಗಂಡ ತುಂಬಾ ಒಳ್ಳೆಯ ವ್ಯಕ್ತಿ. ಅವರ ಕುಟುಂಬದ ವಿರುದ್ಧವೂ ಯಾವುದೇ ದೂರು ಇಲ್ಲ. ಆದರೆ ರಾತ್ರಿ ಅವರ ಗೊರಕೆಯಿಂದ ನನಗೆ ನಿದ್ರೆ ಬರುವುದಿಲ್ಲ. ಇಡೀ ರಾತ್ರಿ ಎಚ್ಚರದಿಂದ ಇರಲು ಸಾಧ್ಯವಿಲ್ಲ" ಎಂದು ತಿಳಿಸಿದ್ದರು ಎಂದು ರೀಟಾ ತುಲಿ ಹೇಳಿದ್ದಾರೆ.
ಇನ್ನೊಂದೆಡೆ, ತಾನು ಗೊರಕೆ ಹೊಡೆಯುವುದೇ ಇಲ್ಲ ಎಂದು ಗಂಡ ಹೇಳುತ್ತಿದ್ದರಿಂದ ಪ್ರತಿದಿನ ಬೆಳಗ್ಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಯಾವುದೇ ಕಿರುಕುಳದ ಆರೋಪ ಇರಲಿಲ್ಲ

ಈ ಪ್ರಕರಣದಲ್ಲಿ ಮಾನಸಿಕ ಅಥವಾ ದೈಹಿಕ ಕಿರುಕುಳಕ್ಕೆ ಸಂಬಂಧಿಸಿದ ಯಾವುದೇ ಆರೋಪಗಳು ಇರಲಿಲ್ಲ. ಪತ್ನಿ ತಮ್ಮ ಗಂಡ ಅಥವಾ ಅವರ ಕುಟುಂಬದ ವಿರುದ್ಧ ಯಾವುದೇ ದೂರು ನೀಡಿರಲಿಲ್ಲ ಎಂದು ಕೌನ್ಸೆಲರ್ ತಿಳಿಸಿದ್ದಾರೆ. ದಂಪತಿಯ ನಡುವಿನ ಏಕೈಕ ಸಮಸ್ಯೆ ಗೊರಕೆಯಿಂದ ಉಂಟಾಗುತ್ತಿದ್ದ ನಿದ್ರಾಹೀನತೆ ಮತ್ತು ಅದರ ಪರಿಣಾಮವಾಗಿ ನಡೆಯುತ್ತಿದ್ದ ಜಗಳಗಳಾಗಿದ್ದವು ಎಂದು ಅವರು ಹೇಳಿದ್ದಾರೆ.

ಮೂರು ತಿಂಗಳು ಪ್ರತ್ಯೇಕವಾಗಿ ಇರಲು ಸಲಹೆ

ವಿಚ್ಛೇದನದ ಕಾನೂನು ಪ್ರಕ್ರಿಯೆ ಮುಂದುವರಿಸುವ ಬದಲು, ದಂಪತಿ ಮೂರು ತಿಂಗಳ ಕಾಲ ಪ್ರತ್ಯೇಕವಾಗಿ ವಾಸಿಸುವಂತೆ ಕೌನ್ಸೆಲರ್ ಸಲಹೆ ನೀಡಿದರು. ತಾತ್ಕಾಲಿಕ ಅಸಮಾಧಾನ ಮತ್ತು ನಿಜವಾದ ಹೊಂದಾಣಿಕೆ ಸಮಸ್ಯೆಗಳ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಲು ಈ ಪ್ರಯೋಗ ನೆರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಮತ್ತೆ ಒಂದಾಗಲು ನಿರ್ಧಾರ

ಮೂರು ತಿಂಗಳ ಬಳಿಕ ಮತ್ತೆ ಕೌನ್ಸೆಲಿಂಗ್‌ಗೆ ಹಾಜರಾದ ದಂಪತಿ, ಪ್ರತ್ಯೇಕವಾಗಿ ಇದ್ದ ಅವಧಿಯಲ್ಲಿ ಪರಸ್ಪರರನ್ನು ತುಂಬಾ ಮಿಸ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ದಾಂಪತ್ಯ ಜೀವನದ ಮೌಲ್ಯ ಗೊರಕೆಯಿಂದ ಉಂಟಾಗುವ ತೊಂದರೆಗಿಂತ ದೊಡ್ಡದು ಎಂಬ ಅರಿವಾದ ಹಿನ್ನೆಲೆಯಲ್ಲಿ ವಿಚ್ಛೇದನದ ನಿರ್ಧಾರ ಕೈಬಿಟ್ಟು ಮತ್ತೆ ಒಟ್ಟಾಗಿ ಬದುಕಲು ತೀರ್ಮಾನಿಸಿದ್ದಾರೆ ಎಂದು ಕೌನ್ಸೆಲರ್ ರೀಟಾ ತುಲಿ ತಿಳಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net