Sanchar Saathi App | ಇದು ಜನರ ರಕ್ಷಣೆಗಾಗಿ...ಬೇಹುಗಾರಿಕೆ ಸಾಧ್ಯವಿಲ್ಲ: ಸಂಚಾರ್ ಸಾಥಿ ಬಗ್ಗೆ ಸಚಿವ ಸಿಂಧಿಯಾ ಹೇಳಿದ್ದೇನು..?

Sanchar Saathi App | ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ
Sanchar Saathi App | ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ
Published on
ದೆಹಲಿ: ಸಂಚಾರ್ ಸಾಥಿ ಆ್ಯಪ್ ಕೇವಲ ಜನರ ರಕ್ಷಣೆಗಾಗಿ, ಇದರೊಂದಿಗೆ ಬೇಹುಗಾರಿಕೆ ಸಾಧ್ಯವಿಲ್ಲ ಎಂದು ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸಚಿವರು, ಸರ್ಕಾರವು ಸಾರ್ವಜನಿಕರನ್ನು ಸಬಲೀಕರಣಗೊಳಿಸಲು ಉದ್ದೇಶಿಸಿದೆ, ವಂಚನೆ ಮತ್ತು ಕಳ್ಳತನದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದು ನೆರವಾಗುತ್ತದೆ ಎಂದು ಹೇಳಿದರು.

ದೂರಸಂಪರ್ಕ ಇಲಾಖೆ ಆದೇಶ

  1. ಈ ನಿರ್ದೇಶನವನ್ನು 90 ದಿನಗಳಲ್ಲಿ ಜಾರಿಗೆ ತರಬೇಕು ಮತ್ತು 120 ದಿನಗಳಲ್ಲಿ ಇಲಾಖೆಗೆ ವರದಿಯನ್ನು ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ನಕಲಿ ಹ್ಯಾಂಡ್‌ಸೆಟ್‌ಗಳು, ಒಂದೇ IMEI ಸಂಖ್ಯೆ ಬಳಸಿ ಹಲವು ಸ್ಮಾರ್ಟ್ಫೋನ್‌ಗಳ ಉಪಯೋಗ, ನಕಲಿ ಸಿಮ್ ಕಾರ್ಡ್‌ಗಳು, ಸಂಪರ್ಕಗಳನ್ನು ತಡೆಗಟ್ಟಲು ಈ ಆ್ಯಪ್​ ಅನ್ನು ವಿಶೇಷವಾಗಿ ಡಿಸೈನ್​ ಮಾಡಲಾಗಿದೆ. ಈ ಆ್ಯಪ್​ ಬಳಕೆದಾರರಿಗೆ ಸ್ನೇಹಿಯಾಗಿರಬೇಕು. ಪ್ರಸ್ತುತ ಮಾರಾಟದಲ್ಲಿರುವ ಮಾದರಿಗಳಲ್ಲಿ ಸಾಫ್ಟ್‌ವೇರ್ ಅಪ್ಡೇಟ್​ಗಳ ಮೂಲಕ ಆ್ಯಪ್​ ಅನ್ನು ರನ್​ ಮಾಡಬೇಕು. ಭಾರತದಲ್ಲಿ ಮೊದಲ ಬಾರಿಗೆ ಪೂರ್ವ ಸ್ಥಾಪಿತ ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸುವುದರ ಬಗ್ಗೆ ಕೆಲವೆಡೆಯಿಂದ ಟೀಕೆಗಳು ವ್ಯಕ್ತವಾಗಿವೆ. ಸರ್ಕಾರವು ಸಂಚಾರ್ ಸಾಥಿ ಮೂಲಕ ಗ್ರಾಹಕರ ಫೋನ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ ಎಂಬುದು ಕಾಂಗ್ರೆಸ್​ನ ದೊಡ್ಡ ಆರೋಪ.
  2. ಈ ವರ್ಷದ ನ.28ರಂದು ಹೊರಡಿಸಲಾದ ಆದೇಶದ ಪ್ರಕಾರ, ಯಾವುದೇ ಹೊಸ ಹ್ಯಾಂಡ್‌ಸೆಟ್‌ನ ಆರಂಭಿಕ ಸೆಟಪ್ ಸಮಯದಲ್ಲಿ ಸಂಚಾರಿ ಸಾಥಿ ಆ್ಯಪ್​ ಇನ್​ಸ್ಟಾಲ್​ ಆಗಿರಬೇಕು ಮತ್ತು ಬಳಸಲು ಸುಲಭವಾಗಿರಬೇಕು ಎಂದು ತಿಳಿಸಲಾಗಿದೆ. ತಯಾರಕರು ಅದರ ಯಾವುದೇ ವೈಶಿಷ್ಟ್ಯಗಳನ್ನು ಮರೆಮಾಡಲು, ನಿಷ್ಕ್ರಿಯಗೊಳಿಸಲು ಅಥವಾ ನಿರ್ಬಂಧಿಸಲು ಅನುಮತಿ ಇಲ್ಲ. ಕಂಪನಿಗಳು ಆದೇಶವನ್ನು ಫಾಲೋ ಮಾಡಲು 90 ದಿನಗಳು ಮತ್ತು ಅನುಸರಣೆಯ ವರದಿಯನ್ನು ಸಲ್ಲಿಸಲು 120 ದಿನಗಳು ಮಾತ್ರ ಉಳಿದಿವೆ.
  3. ಇದನ್ನು ಪಾಲಿಸಲು ವಿಫಲವಾದ ಸಂಸ್ಥೆಗಳು ದೂರಸಂಪರ್ಕ ಕಾಯ್ದೆ 2023, ಟೆಲಿಕಾಂ ಸೈಬರ್ ಭದ್ರತಾ ನಿಯಮಗಳು 2024 ಮತ್ತು ಇತರ ಅನ್ವಯವಾಗುವ ಕಾನೂನುಗಳ ನಿಬಂಧನೆಗಳ ಪ್ರಕಾರ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ.
ಸಂಚಾರ್ ಸಾಥಿ ಆ್ಯಪ್ ಬಳಕೆದಾರರ ಸಂದೇಶಗಳನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ಕರೆಗಳನ್ನು ಆಲಿಸಬಹುದು ಎಂಬ ಆತಂಕದಿಂದ ಅನೇಕ ವಿರೋಧ ಪಕ್ಷದ ನಾಯಕರು ಸರ್ಕಾರದ ನೀತಿಯನ್ನು ಬೇಹುಗಾರಿಕೆ ಪ್ರಯತ್ನವೆಂದು ಆರೋಪಿಸಿದ್ದರು. ಆಪಲ್‌ನಂತಹ ಕೆಲವು ಫೋನ್ ತಯಾರಕರು ಈ ಆದೇಶವನ್ನು ವಿರೋಧಿಸಿದ್ದಾರೆಂದು ವರದಿಯಾಗಿದೆ. ಆದೇಶವನ್ನು ಅದರ ಪ್ರಸ್ತುತ ರೂಪದಲ್ಲಿ ಜಾರಿಗೆ ತರಲು ಸಾಧ್ಯವಾಗದ ಕಾರಣ, ಆಪಲ್ ಸರ್ಕಾರದೊಂದಿಗೆ ಈ ಸಮಸ್ಯೆಯನ್ನು ಚರ್ಚಿಸಿ ಮಧ್ಯಮ ಮಾರ್ಗವನ್ನು ಹುಡುಕುತ್ತದೆ ಎಂದು ಮೂಲಗಳು ತಿಳಿಸಿವೆ.

ಮೃದು ನಿಲುವು ತಳೆದ ಸಚಿವರು...

ಸಚಿವಾಲಯದ ನಿಲುವನ್ನು ಮೃದುಗೊಳಿಸುವಂತೆ ಕಂಡು ಬಂದ ಸಚಿವ ಸಿಂಧಿಯಾ, ಬಳಕೆದಾರರು ಅಪ್ಲಿಕೇಶನ್ ಅನ್ನು ಬಳಸಲು ಇಷ್ಟಪಡದಿದ್ದರೆ ಅದನ್ನು ಡಿಲೀಟ್​ ಮಾಡಲು ಅವರು ಸ್ವತಂತ್ರರು ಮತ್ತು ಅವರು ನೋಂದಾಯಿಸಿಕೊಳ್ಳುವವರೆಗೆ ಆ್ಯಪ್​ ನಿಷ್ಕ್ರಿಯವಾಗಿರುತ್ತದೆ ಎಂದು ಹೇಳಿದರು. ಇದೇ ವಿಷಯವಾಗಿ ಸಂಸತ್ತಿನ ಹೊರಗು ಮಾತನಾಡಿದ್ದ ಸಚಿವರು, ವಂಚನೆ ಮತ್ತು ಕಳ್ಳತನದಿಂದ ರಕ್ಷಿಸಲು ಈ ಅಪ್ಲಿಕೇಶನ್ ಅಸ್ತಿತ್ವದಲ್ಲಿದೆ ಎಂದು ದೇಶದ ಎಲ್ಲರಿಗೂ ತಿಳಿದಿಲ್ಲ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net