Parliament cigarette Row | ಸಂಸತ್ತಿನ ಆವರಣದಲ್ಲಿ ರಾಜಾರೋಷವಾಗಿ ಸಿಗರೇಟ್​ ಸೇದಿದ ಟಿಎಂಸಿ ಸಂಸದ ರಾಯ್​; ಸಚಿವರ ಆಕ್ಷೇಪ

 ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್
ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್
Published on
ದೆಹಲಿ: ಸದನದ ಒಳಗೆ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ ಹೊರತು ತೆರೆದ ಪ್ರದೇಶಗಳಲ್ಲಿ ಅಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಹೇಳಿಕೆ ನೀಡಿದ್ದಾರೆ. ಸಂಸತ್ತಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಯ್, ಈ ರೀತಿಯ ಆರೋಪಗಳನ್ನು ಮಾಡುವ ಬದಲು, ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಬಿಜೆಪಿ ಸರ್ಕಾರ, ದೆಹಲಿಯಲ್ಲಿ ಮಾಲಿನ್ಯದ ಕುರಿತಾಗಿ ಗಮನಹರಿಸಲಿ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿಡಿಯೋ ವೈರಲ್​..

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಸಂಸದ ರಾಯ್ ಸಂಸತ್ತಿನ ಆವರಣದಲ್ಲಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಹತ್ತಿರದಲ್ಲಿ ನಿಂತಿದ್ದ ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಸದನದ ಘನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಸಂಸದ ಅನುರಾಗ್​ ಠಾಕೂರ್ ಆರೋಪ.......
ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದ ಅನುರಾಗ್​ ಠಾಕೂರ್ ಟಿಎಂಸಿಯ​ ಯಾವ ಸದಸ್ಯರ ಹೆಸರನ್ನೂ ಉಲ್ಲೇಖಿಸದೆ ಸಂಸತ್ತಿನ ಆವರಣದೊಳಗೆ ಇ-ಸಿಗರೇಟ್ ಸೇದುತ್ತಿದ್ದಾರೆ ಎಂದು ಆರೋಪಿಸಿದ್ದರು. ಇಡೀ ದೇಶದಲ್ಲಿ ಇ-ಸಿಗರೇಟ್‌ಗಳನ್ನು ನಿಷೇಧಿಸಲಾಗಿದೆ, ಹೀಗಿದ್ದಾಗ ಲೋಕಸಭೆಯ ಸ್ಪೀಕರ್ ಸದನದಲ್ಲಿ ಇ-ಸಿಗರೇಟ್ ಸೇದಲು ಅನುಮತಿ ನೀಡಿದ್ದಾರೆಯೇ. ಟಿಎಂಸಿ ಸಂಸದರೊಬ್ಬರು ಇಲ್ಲಿ ಅನೇಕ ದಿನಗಳಿಂದ ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್​ ಓ ಬಿರ್ಲಾ, ಸಂಸತ್ ಸದಸ್ಯರು ಸದನದೊಳಗೆ ಧೂಮಪಾನ ಮಾಡಲು ಅನುಮತಿಸುವ ನಿಯಮ ಅಥವಾ ಪೂರ್ವನಿದರ್ಶನವಿಲ್ಲ, ಅಂತಹ ಘಟನೆಯನ್ನು ಸ್ಪಷ್ಟ ಸಾಕ್ಷಿಯೊಂದಿಗೆ ತಮ್ಮ ಗಮನಕ್ಕೆ ತಂದರೆ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಏನಿದು ಇ-ಸಿಗರೇಟ್‌..?

ಇ-ಸಿಗರೇಟ್‌ಗಳು ಎಲೆಕ್ಟ್ರಾನಿಕ್ ಸಾಧನಗಳಾಗಿದ್ದು, ಬಳಕೆದಾರರು ಉಸಿರಾಡುವ ಏರೋಸಾಲ್​​ನ್ನು ಉತ್ಪಾದಿಸಲು ದ್ರವವನ್ನು ಬಿಸಿ ಮಾಡುತ್ತವೆ. ಈ ದ್ರವವು ಸಾಮಾನ್ಯವಾಗಿ ನಿಕೋಟಿನ್, ಸುವಾಸನೆ ನೀಡುವ ಏಜೆಂಟ್‌ಗಳು ಮತ್ತು ಇತರ ರಾಸಾಯನಿಕಗಳನ್ನು ಹೊಂದಿರುತ್ತದೆ. ಸಾಂಪ್ರದಾಯಿಕ ಸಿಗರೇಟ್‌ಗಳಿಗಿಂತ ಭಿನ್ನವಾಗಿ, ಇ-ಸಿಗರೇಟ್‌ಗಳು ತಂಬಾಕನ್ನು ಸುಡುವುದಿಲ್ಲ, ಆದರೆ ಅವು ಇನ್ನೂ ನಿಕೋಟಿನ್ ಅನ್ನು ನೀಡುತ್ತವೆ, ಇದು ವ್ಯಸನಕಾರಿಯಾಗಿದೆ ಮತ್ತು ಬಳಕೆದಾರರಿಗೆ ಹಾನಿಕಾರಕವಾಗಿದೆ. ಇದನ್ನು ಬಳಸುವುದರಿಂದ ಅಪಾಯಗಳು ಎದುರಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದರೂ ಕೂಡ ಅವುಗಳನ್ನು ಧೂಮಪಾನಕ್ಕೆ ಪರ್ಯಾಯವಾಗಿ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಇ-ಸಿಗರೇಟ್, ವೇಪ್ ನಿಷೇಧ

ಭಾರತದಲ್ಲಿ ಯುವಜನರಲ್ಲಿನ ಇ ಸಿಗರೇಟ್ ಬಳಕೆ ಹೆಚ್ಚಾದ ಕಾರಣ, ಈ ಸಾಧನಗಳು ಹೊಸ ಪೀಳಿಗೆಯ ನಿಕೋಟಿನ್ ಅವಲಂಬಿತ ಬಳಕೆದಾರರನ್ನು ಸೃಷ್ಟಿಸಬಹುದು ಮತ್ತು ತಂಬಾಕು ಸೇವನೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ದುರ್ಬಲಗೊಳಿಸಬಹುದು ಎಂದು ಆರೋಗ್ಯ ಅಧಿಕಾರಿಗಳು ವಾದಿಸಿದರು.
2019 ರ ಸೆಪ್ಟೆಂಬರ್​​​ನಲ್ಲಿ ಇ-ಸಿಗರೇಟ್‌ಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧವನ್ನು ವಿಧಿಸಲಾಗಿದೆ. ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆಯು ಸಿಗರೇಟ್‌ಗಳ ಉತ್ಪಾದನೆ, ತಯಾರಿಕೆ, ಆಮದು, ರಫ್ತು, ಸಾಗಣೆ, ಮಾರಾಟ, ವಿತರಣೆ ಮತ್ತು ಜಾಹೀರಾತುಗಳನ್ನು ಕಾನೂನುಬಾಹಿರಗೊಳಿಸಿತು. ವ್ಯಾಪಾರ ಮತ್ತು ವಿತರಣೆಯಂತೆಯೇ ವೈಯಕ್ತಿಕ ಸೇವನೆಯನ್ನು ಅಪರಾಧೀಕರಿಸಲಾಗಿಲ್ಲ
ಕಾನೂನಿನ ಪ್ರಕಾರ, ಅವುಗಳನ್ನು ಮಾರಾಟ ಮಾಡುವುದು ಕಂಡುಬಂದರೆ ದಂಡ ಮತ್ತು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಸಾಧನಗಳನ್ನು ವಶಪಡಿಸಿಕೊಳ್ಳಲು ಮತ್ತು ಆನ್‌ಲೈನ್ ಮಾರಾಟವನ್ನು ನಿಲ್ಲಿಸಲು ಅಧಿಕಾರಿಗಳು ಹಲವಾರು ಜಾರಿ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ನಿಷೇಧದ ಹೊರತಾಗಿಯೂ, ದೇಶದ ಕೆಲವು ಭಾಗಗಳಲ್ಲಿ ಅಕ್ರಮ ವ್ಯಾಪಾರ ಮುಂದುವರೆದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net