ಬ್ರಹ್ಮಾಂಡವೇ ತನ್ಮಯವಾಯಿತು!... ವಿಕ್ರಮ್-1 ಸೂರ್ಯೋದಯದ ವಿಡಿಯೋ ಜೊತೆ ಸ್ಕೈರೂಟ್ ಸಂಸ್ಥಾಪಕರ ಭಾವುಕ ಪೋಸ್ಟ್! Skyroot Aerospace

 Skyroot Aerospace (ಚಿತ್ರ X)
Skyroot Aerospace (ಚಿತ್ರ X)
Published on
Skyroot Aerospace: ಭಾರತದ ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಹೊಸ ಇತಿಹಾಸ ಬರೆದ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace), ತನ್ನ 'ಮಿಷನ್ ಆಗಮನ್' ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಕಕ್ಷೆಗೆ ಜಿಗಿದ ವಿಕ್ರಮ್-1 ರಾಕೆಟ್‌ನ ಆನ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಕ್ಷೆಯ ಮೊದಲ ಸೂರ್ಯೋದಯದ ಅದ್ಭುತ ವೀಡಿಯೊವನ್ನು ಸಂಸ್ಥೆ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಆಕಸ್ಮಿಕವಾಗಿ ಸಿಕ್ಕ ಅದ್ಭುತ ದೃಶ್ಯ!

ರಾಕೆಟ್‌ನ 'ಆರ್ಬಿಟಲ್ ಅಡ್ಜಸ್ಟ್‌ಮೆಂಟ್ ಮೊಡ್ಯೂಲ್  ಹಿಂಭಾಗದಿಂದ ಸೂರ್ಯ ಉದಯಿಸುವ ಈ ದೃಶ್ಯವು ವಜ್ರಾಕಾರದ ಫ್ರೇಮ್‌ನಲ್ಲಿ ಅತ್ಯಂತ ಸಿನಿಮೀಯ ಮಾದರಿಯಲ್ಲಿ ಕಂಗೊಳಿಸುತ್ತಿದೆ. ವಿಶೇಷವೆಂದರೆ ಈ ಮನಮೋಹಕ ನೋಟ ಸಿಕ್ಕಿದ್ದು ಯಾವುದೇ ಪೂರ್ವಾಕ್ಷಿತ ಯೋಜನೆಯಿಂದಲ್ಲ. ಬದಲಾಗಿ ಉಡಾವಣೆಯಲ್ಲಾದ ಸಣ್ಣ ವಿಳಂಬದಿಂದ ಎನ್ನಲಾಗಿದೆ. 
ಉಡಾವಣೆಯ ಕ್ಷಣಗಣನೆ ವೇಳೆಯಲ್ಲಿ ತಾಂತ್ರಿಕ ಕಾರಣಗಳಿಂದಾಗಿ 35 ನಿಮಿಷ 30 ಸೆಕೆಂಡುಗಳ ಕಾಲ ಉಡಾವಣೆಯನ್ನು ತಡೆಹಿಡಿಯಲಾಗಿತ್ತು. ಅಂತಿಮವಾಗಿ ರಾಕೆಟ್ ಮಧ್ಯಾಹ್ನ 12:05:30ಕ್ಕೆ ಬ್ರಹ್ಮಾಂಡಕ್ಕೆ ಹಾರಿತು. ಈ ಸಮಯದ ಬದಲಾವಣೆಯು ಬಾಹ್ಯಾಕಾಶದಲ್ಲಿ ಸೂರ್ಯ ಮತ್ತು ನೌಕೆಯ ಕೋನವನ್ನು ಸಂಪೂರ್ಣವಾಗಿ ಬದಲಾಯಿಸಿ, ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಯಿತು.
ಈ ಕುರಿತು ಸ್ಕೈರೂಟ್ ಜಂಟಿ ಸಂಸ್ಥಾಪಕ ಪವನ್ ಕುಮಾರ್ ಚಂದನಾ ತಮ್ಮ ಎಕ್ಸ್​ (X) ಖಾತೆಯಲ್ಲಿ ಹಂಚಿಕೊಂಡಿದ್ದು, "ಕೆಲವು ಮುಹೂರ್ತಗಳನ್ನು ನಾವು ತಂತ್ರಜ್ಞಾನದಿಂದ ರೂಪಿಸಲು ಸಾಧ್ಯವಿಲ್ಲ. ಲಾಂಚ್ ಹೋಲ್ಡ್‌ನಿಂದಾಗಿ ಈ ಅದ್ಭುತ ಸೂರ್ಯೋದಯ ಕೋನ ಸಿಕ್ಕಿದೆ. ಆಕಸ್ಮಿಕ ವಿಳಂಬವೇ ಈ ನೈಸರ್ಗಿಕ ಸೌಂದರ್ಯಕ್ಕೆ ದಾರಿಯಾಯಿತು. ಬಾಹ್ಯಾಕಾಶದಿಂದ ಸೆರೆಹಿಡಿಯಲಾದ ಅತ್ಯಂತ ಸುಂದರ ದೃಶ್ಯಗಳಲ್ಲಿ ಇದೂ ಒಂದಾಗಲಿದೆ ಎಂದು ಬರೆದುಕೊಂಡಿದ್ದಾರೆ. 

ಏನಿದು ವಿಕ್ರಮ್-1?

ವಿಕ್ರಮ್-1 ಸ್ಕೈರೂಟ್ ಸಂಸ್ಥೆಯ ಚೊಚ್ಚಲ ಆರ್ಬಿಟಲ್ ಉಡಾವಣಾ ನೌಕೆಯಾಗಿದ್ದು, ಸಣ್ಣ ಉಪಗ್ರಹಗಳನ್ನು ಭೂಮಿಯ ಕೆಳ ಹಂತದ ಕಕ್ಷೆಗೆ ತಲುಪಿಸಲು ವಿನ್ಯಾಸಗೊಳಿಸಲಾಗಿದೆ. ಇತ್ತೀಚೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇದು ತನ್ನ ಮೊದಲ ಯಶಸ್ವಿ ಪರೀಕ್ಷಾರ್ಥ ಹಾರಾಟವನ್ನು ಪೂರ್ಣಗೊಳಿಸಿತ್ತು. 3-ಹಂತದ ತಂತ್ರಜ್ಞಾನ ಹೊಂದಿರುವ ಈ ರಾಕೆಟ್, ಕಾರ್ಬನ್ ಕಾಂಪೋಸಿಟ್ ಭಾಗಗಳು ಮತ್ತು 3D ಪ್ರಿಂಟೆಡ್ ಎಂಜಿನ್‌ಗಳನ್ನು ಹೊಂದಿದ್ದು, ಅತ್ಯಂತ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.

ಸ್ಕೈರೂಟ್ ಏರೋಸ್ಪೇಸ್ ಬಗ್ಗೆ...

ಇಸ್ರೋ ಮಾಜಿ ವಿಜ್ಞಾನಿಗಳಾದ ಪವನ್ ಕುಮಾರ್ ಚಂದನಾ ಮತ್ತು ನಾಗ ಭರತ್ ಡಾಕಾ ಅವರು 2018 ರಲ್ಲಿ ಸ್ಥಾಪಿಸಿದ ಸ್ಕೈರೂಟ್, ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದೆ. 2022 ರಲ್ಲಿ ವಿಕ್ರಮ್-ಎಸ್ (Vikram-S) ಸಬ್‌ಆರ್ಬಿಟಲ್ ರಾಕೆಟ್ ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶಕ್ಕೆ ನೌಕೆ ರವಾನಿಸಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು.
ಈಗ 'ವಿಕ್ರಮ್-1' ಯಶಸ್ಸಿನ ಜೊತೆಗೆ ಬಾಹ್ಯಾಕಾಶದಿಂದ ಬಂದಿರುವ ಈ ಸೂರ್ಯೋದಯದ ದೃಶ್ಯ ಭಾರತದ ಖಾಸಗಿ ಬಾಹ್ಯಾಕಾಶ ಯಾನದ ಸಾಮರ್ಥ್ಯ ಮತ್ತು ಸೌಂದರ್ಯಕ್ಕೆ ಸಾಕ್ಷಿಯಾಗಿದೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net