ಖರ್ಗೆ ರ‍್ಯಾಲಿ ಸ್ಥಳ ಶುದ್ಧೀಕರಣ ವಿವಾದಕ್ಕೆ ಟ್ವಿಸ್ಟ್!: ರಾಹುಲ್ ಗಾಂಧಿ ವಿರುದ್ಧವೇ ಜಾತಿ ನಿಂದನೆ ದೂರು ನೀಡಿದ ಶ್ರೀರಾಮ್ ಸೇನೆ! | Shuddhikaran Row

Shuddhikaran Row | ಖರ್ಗೆ ರ‍್ಯಾಲಿ ಸ್ಥಳ ಶುದ್ಧೀಕರಣ ವಿವಾದಕ್ಕೆ ಟ್ವಿಸ್ಟ್!: ರಾಹುಲ್ ಗಾಂಧಿ ವಿರುದ್ಧವೇ ಜಾತಿ ನಿಂದನೆ ದೂರು ನೀಡಿದ ಶ್ರೀರಾಮ್ ಸೇನೆ!
Shuddhikaran Row | ಖರ್ಗೆ ರ‍್ಯಾಲಿ ಸ್ಥಳ ಶುದ್ಧೀಕರಣ ವಿವಾದಕ್ಕೆ ಟ್ವಿಸ್ಟ್!: ರಾಹುಲ್ ಗಾಂಧಿ ವಿರುದ್ಧವೇ ಜಾತಿ ನಿಂದನೆ ದೂರು ನೀಡಿದ ಶ್ರೀರಾಮ್ ಸೇನೆ!
Published on

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಶ್ರೀರಾಮ್ ಸೇನೆಯ ಅಮಿತ್ ಕುಮಾರ್ ಅವರು ರವಿವಾರ ದೂರು ನೀಡಿದ್ದು, ರಾಹುಲ್ ಗಾಂಧಿ ತಮ್ಮ ವಿರುದ್ಧ ಜಾತಿ ನಿಂದನೆಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿರುವ ಕುಮಾರ್, ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ. ಆದಾಗ್ಯೂ, ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಮತ್ತು ನೀಡಲಾದ ದೂರನ್ನು ಪರಿಶೀಲಿಸಲಾಗುತ್ತಿದೆ ಎಂದು ಹಲ್ದ್ವಾನಿ ಪೊಲೀಸರು ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ‍್ಯಾಲಿ ನಡೆದ ನಂತರ ಶುದ್ಧೀಕರಣ ಹವನ ನಡೆಸಿದ್ದರಿಂದ ಈ ವಿವಾದ ಪ್ರಾರಂಭವಾಯಿತು. ಈ ಘಟನೆ ಬೆಳಕಿಗೆ ಬಂದ ನಂತರ, ಹವನ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಹುಲ್ ಗಾಂಧಿ ಆಗ್ರಹಿಸಿದ್ದರು. ಇದೀಗ ಅಮಿತ್ ಕುಮಾರ್ ಅವರು ಪೊಲೀಸರನ್ನು ಸಂಪರ್ಕಿಸಿದ್ದು, ರಾಹುಲ್ ಗಾಂಧಿ ಅವರು ತಮ್ಮ ವಿರುದ್ಧ ಜಾತಿ ಆಧಾರಿತ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ಶುದ್ಧೀಕರಣ ಕಾರ್ಯಕ್ರಮ ನಡೆಸಿದ ಶ್ರೀರಾಮ್ ಸೇನಾ ಧರ್ಮಾರ್ಥ ಸೇವಾ ನ್ಯಾಸದ ಸದಸ್ಯ ವಿನೋದ್ ಆರ್ಯ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸನಾತನ ಪರಂಪರೆಯ ಅನುಯಾಯಿಯಾಗಿ, ಭಗವಾನ್ ರಾಮನನ್ನು ಪೂಜಿಸುವ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸ್ಥಳದ ನೈರ್ಮಲ್ಯ ಹಾಗೂ ಪವಿತ್ರತೆಯನ್ನು ಕಾಯ್ದುಕೊಳ್ಳುವುದು ತಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಆರ್ಯ ಹೇಳಿದ್ದಾರೆ.
ತಾವು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಕಾರ್ಯಕ್ರಮದ ಸಮಯದಲ್ಲಿ ದಲಿತ ಸಮುದಾಯದ ಇತರ ಸದಸ್ಯರೂ ಉಪಸ್ಥಿತರಿದ್ದರು ಎಂದು ತಿಳಿಸಿರುವ ವಿನೋದ್​ ಆರ್ಯ, ತಾವು ಖಂಡಿತವಾಗಿಯೂ ಯಾವುದೇ ತಪ್ಪು ಮಾಡಿಲ್ಲ, ತಾವು ದಲಿತರಾಗಿದ್ದರೂ ರಾಹುಲ್ ಗಾಂಧಿ ಅವರು ಕಾನೂನು ಕ್ರಮ ಮತ್ತು ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ ಎಂದು ಆರ್ಯ ಆರೋಪಿಸಿದ್ದು, ತಮ್ಮ ಕಾರ್ಯಗಳ ಮೇಲೆ ಅನಗತ್ಯ ಒತ್ತಡ ಹೇರಲಾಗುತ್ತಿರುವುದರಿಂದ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ಬಯಸಿರುವುದಾಗಿ ಹೇಳಿದ್ದಾರೆ.

ಸದನದಲ್ಲೇ ಖರ್ಗೆ ಕಿಡಿ!...

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ತಾವು ಭಾಷಣ ಮಾಡಿದ ನಂತರ ಅಲ್ಲಿ ಶುದ್ಧೀಕರಣ ಪೂಜೆ ನಡೆಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನದಂದು ಆರೋಪಿಸಿದ್ದರು.
ಆಗಸ್ಟ್ 8 ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ರ‍್ಯಾಲಿ ಆಯೋಜಿಸಿತ್ತು. ರ‍್ಯಾಲಿಯನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದರು. ಖರ್ಗೆ ನಿರ್ಗಮಿಸಿದ ಬೆನ್ನಲ್ಲೇ ಆ ಸ್ಥಳದಲ್ಲಿ ಶುದ್ಧೀಕರಣ ವಿಧಿವಿಧಾನಗಳನ್ನು ನಡೆಸಲಾಗಿತ್ತು. ಈ ಕುರಿತು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಖರ್ಗೆ, ನಾನು ದಲಿತ ಸಮುದಾಯಕ್ಕೆ ಸೇರಿದವನೆಂಬ ಕಾರಣಕ್ಕೆ ಬಿಜೆಪಿ ನಾಯಕರು ಮೈದಾನವನ್ನು ಶುದ್ಧೀಕರಿಸಿದ್ದಾರೆ. ಇದು ದಲಿತರ ಮೇಲಿನ ಅಸ್ಪೃಶ್ಯತೆ ಮತ್ತು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ತನಿಖೆಯ ಭರವಸೆ ನೀಡಿದ್ದ ನಡ್ಡಾ!

ಖರ್ಗೆ ಅವರ ಆರೋಪಕ್ಕೆ ಕೇಂದ್ರ ಸಚಿವ ಜೆ ಪಿ ನಡ್ಡಾ ತಿರುಗೇಟು ನೀಡಿ, ಬಿಜೆಪಿ ಪಕ್ಷವು ಇಂತಹ ಯಾವುದೇ ಶುದ್ಧೀಕರಣ ಅಥವಾ ಅಸ್ಪೃಶ್ಯತೆಯ ಆಚರಣೆಗಳನ್ನು ಬೆಂಬಲಿಸುವುದಿಲ್ಲ. ಘಟನೆಯನ್ನು ಪಕ್ಷ ಬಲವಾಗಿ ಖಂಡಿಸುತ್ತದೆ. ಆದರೆ ಯಾವುದೇ ತನಿಖೆಯಿಲ್ಲದೆ ನೇರವಾಗಿ ಬಿಜೆಪಿ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಡ್ಡಾ ಭರವಸೆ ನೀಡಿದರು.
ಇದೇ ವೇಳೆ ಮಧ್ಯಪ್ರವೇಶಿಸಿದ ರಾಜ್ಯಸಭಾ ಸಭಾಪತಿಗಳು, ಅಸ್ಪೃಶ್ಯತೆಯು ಅತಿ ದೊಡ್ಡ ಪಾಪ. ಈ ಘಟನೆಯನ್ನು ಎಲ್ಲರೂ ಪಕ್ಷಾತೀತವಾಗಿ ಖಂಡಿಸುತ್ತೇವೆ. ನಾವೆಲ್ಲರೂ ಈಗಾಗಲೇ ಶುದ್ಧರಾಗಿದ್ದೇವೆ, ನಮ್ಮನ್ನು ಯಾರೂ ಪ್ರತ್ಯೇಕವಾಗಿ ಶುದ್ಧೀಕರಿಸುವ ಅಗತ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಸೂಕ್ತ ಶಿಕ್ಷೆ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net