ಇರಾನ್ ಯುರೇನಿಯಂ ಮೇಲೆ ರಷ್ಯಾದ ಕಣ್ಣು: ಪುಟಿನ್ ಪ್ರಸ್ತಾಪಕ್ಕೆ ಟ್ರಂಪ್ ನೋ ಎಂದಿದ್ದೇಕೆ? ಭೌಗೋಳಿಕ ರಾಜಕೀಯದ ಹೊಸ ಚದುರಂಗದಾಟ! Vladimir Putin

ಇರಾನ್ ಯುರೇನಿಯಂ ಮೇಲೆ ರಷ್ಯಾದ ಕಣ್ಣು: ಪುಟಿನ್ ಪ್ರಸ್ತಾಪಕ್ಕೆ ಟ್ರಂಪ್ ನೋ ಎಂದಿದ್ದೇಕೆ? ಭೌಗೋಳಿಕ ರಾಜಕೀಯದ ಹೊಸ ಚದುರಂಗದಾಟ!
ಇರಾನ್ ಯುರೇನಿಯಂ ಮೇಲೆ ರಷ್ಯಾದ ಕಣ್ಣು: ಪುಟಿನ್ ಪ್ರಸ್ತಾಪಕ್ಕೆ ಟ್ರಂಪ್ ನೋ ಎಂದಿದ್ದೇಕೆ? ಭೌಗೋಳಿಕ ರಾಜಕೀಯದ ಹೊಸ ಚದುರಂಗದಾಟ!
Published on
ಮಾಸ್ಕೋ: ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಇರಾನ್‌ನ ಪರಮಾಣು ಬಿಕ್ಕಟ್ಟನ್ನು ಬಗೆಹರಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ಮುಂದೆ ಬಂದಿದ್ದಾರೆ. ಇರಾನ್ ಬಳಿ ಇರುವ ಅಪಾಯಕಾರಿ ಯುರೇನಿಯಂ ದಾಸ್ತಾನನ್ನು ರಷ್ಯಾಕ್ಕೆ ವರ್ಗಾಯಿಸುವ ಪುಟಿನ್ ಆಫರ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ನನಗೆ ಸಹಾಯ ಮಾಡುವ ಮೊದಲು ಯುಕ್ರೇನ್ ಯುದ್ಧ ನಿಲ್ಲಿಸಿ ಎಂದು ಟ್ರಂಪ್ ನೇರವಾಗಿಯೇ ಉತ್ತರಿಸುವ ಮೂಲಕ ರಷ್ಯಾಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಪುಟಿನ್ ನೀಡಿದ ಆಫರ್ ಏನು..?

ಇತ್ತೀಚೆಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ವ್ಲಾದಿಮಿರ್ ಪುಟಿನ್ ಅವರು ಇರಾನ್‌ನ ಪರಮಾಣು ಕಾರ್ಯಕ್ರಮದ ವಿವಾದವನ್ನು ಬಗೆಹರಿಸಲು ಒಂದು ಉಪಾಯವನ್ನು ಮುಂದಿಟ್ಟಿದ್ದರು. ಇರಾನ್ ನೆಲದಲ್ಲಿ ಹೂತುಹಾಕಲಾಗಿರುವ ಮತ್ತು ಸಂವರ್ಧನೆ ಮಾಡಲಾಗಿರುವ ಯುರೇನಿಯಂ ಅನ್ನು ರಷ್ಯಾಕ್ಕೆ ತೆಗೆದುಕೊಂಡು ಹೋಗಲು ತಾವು ಸಿದ್ಧ ಎಂದು ಪುಟಿನ್ ತಿಳಿಸಿದ್ದರು. ಈ ಮೂಲಕ ಇರಾನ್ ಅಣ್ವಸ್ತ್ರ ತಯಾರಿಸದಂತೆ ತಡೆಯಬಹುದು ಎಂಬುದು ರಷ್ಯಾದ ವಾದವಾಗಿತ್ತು. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಕೂಡ ಇದನ್ನು ಖಚಿತಪಡಿಸಿದ್ದು, ಇದೊಂದು ಉತ್ತಮ ನಿರ್ಧಾರವಾಗುತ್ತಿತ್ತು, ಆದರೆ ಅಮೆರಿಕ ಇದನ್ನು ಒಪ್ಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ತಿರಸ್ಕರಿಸಿದ್ದಕ್ಕೆ ಕಾರಣವೇನು..?

ಡೊನಾಲ್ಡ್ ಟ್ರಂಪ್ ಅವರು ಪುಟಿನ್ ಅವರ ಈ ಮಧ್ಯಸ್ಥಿಕೆಯನ್ನು ಒಪ್ಪಲು ಸಿದ್ಧರಿಲ್ಲ. ನಮ್ಮ ಸಂಭಾಷಣೆ ತುಂಬಾ ಚೆನ್ನಾಗಿತ್ತು. ಆದರೆ ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ನೀವು ಇರಾನ್ ವಿಷಯದಲ್ಲಿ ನಮಗೆ ಸಹಾಯ ಮಾಡುವ ಮೊದಲು, ಯುಕ್ರೇನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಿ. ನಿಮ್ಮ ಯುದ್ಧ ನಿಂತರೆ ಮಾತ್ರ ಉಳಿದ ವಿಷಯಗಳ ಬಗ್ಗೆ ಚರ್ಚಿಸಬಹುದು ಎಂದು ಟ್ರಂಪ್ ಹೇಳಿದ್ದಾರೆ. ಯುಕ್ರೇನ್ ಯುದ್ಧದಲ್ಲಿ ರಷ್ಯಾ ತನ್ನ ಶಕ್ತಿಯನ್ನು ವಿನಿಯೋಗಿಸುತ್ತಿರುವಾಗ, ಇರಾನ್ ಬಿಕ್ಕಟ್ಟಿನಲ್ಲಿ ರಷ್ಯಾಗೆ ಹೀರೋ ಪಟ್ಟ ನೀಡಲು ಟ್ರಂಪ್ ಬಯಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಇರಾನ್ ಯುರೇನಿಯಂ ಮೇಲೆ ರಷ್ಯಾಕ್ಕೆ ಯಾಕಿಷ್ಟು ವ್ಯಾಮೋಹ..?

ರಷ್ಯಾ ಪದೇಪದೆ ಇರಾನ್‌ನ ಯುರೇನಿಯಂ ಅನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಬಯಸುತ್ತಿರುವುದರ ಹಿಂದೆ ಮೂರು ಪ್ರಮುಖ ಕಾರಣಗಳಿವೆ.
೧. ಜಾಗತಿಕ ಮಧ್ಯಸ್ಥಗಾರನ ಪಟ್ಟ: ಇರಾನ್ ಮತ್ತು ಅಮೆರಿಕ ನಡುವಿನ ದಶಕಗಳ ಹಳೆಯ ಸಂಘರ್ಷವನ್ನು ತಾನು ಬಗೆಹರಿಸಿದೆ ಎಂದು ತೋರಿಸಿಕೊಳ್ಳುವ ಮೂಲಕ ರಷ್ಯಾ ಜಾಗತಿಕ ಮಟ್ಟದಲ್ಲಿ ತನ್ನ ರಾಜತಾಂತ್ರಿಕ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದೆ.
೨. ಬಲಾಢ್ಯ ರಾಷ್ಟ್ರಗಳ ಮೇಲೆ ನಿಯಂತ್ರಣ: ಇರಾನ್‌ನ ಯುರೇನಿಯಂ ದಾಸ್ತಾನು ರಷ್ಯಾದ ಕೈಯಲ್ಲಿದ್ದರೆ, ಅದು ಅಮೆರಿಕ ಮತ್ತು ಪಶ್ಚಿಮ ರಾಷ್ಟ್ರಗಳ ವಿರುದ್ಧ ರಷ್ಯಾಕ್ಕೆ ಒಂದು ಬ್ರಹ್ಮಾಸ್ತ್ರ ಸಿಕ್ಕಂತಾಗುತ್ತದೆ. ಮಾತುಕತೆಗಳಲ್ಲಿ ರಷ್ಯಾ ಮೇಲುಗೈ ಸಾಧಿಸಲು ಇದು ಸಹಕಾರಿಯಾಗಲಿದೆ.
೩. ವಾಣಿಜ್ಯ ಲಾಭ: ಇರಾನ್ ಬಳಿ ಇರುವ ಹೆಚ್ಚಿನ ಸಾಂದ್ರತೆಯ ಯುರೇನಿಯಂ ಅನ್ನು ರಷ್ಯಾ ತನ್ನ ರೊಸಾಟಮ್ ಪರಮಾಣು ಸಂಸ್ಥೆಯ ಮೂಲಕ ನಾಗರಿಕ ಬಳಕೆಗಾಗಿ ಇಂಧನವನ್ನಾಗಿ ಪರಿವರ್ತಿಸಿ ಲಾಭ ಗಳಿಸುವ ಉದ್ದೇಶವನ್ನೂ ಹೊಂದಿದೆ.

ಇರಾನ್ ಬಳಿ ಇರುವ ಯುರೇನಿಯಂ ಎಷ್ಟು ಅಪಾಯಕಾರಿ..?

ಅಮೆರಿಕದ ವರದಿಗಳ ಪ್ರಕಾರ ಇರಾನ್ ಬಳಿ ಭಾರಿ ಪ್ರಮಾಣದ ಯುರೇನಿಯಂ ಸಂಗ್ರಹವಿದೆ.
ಶೇ. 60 ರಷ್ಟು ಶುದ್ಧತೆಯ ಯುರೇನಿಯಂ: ಸುಮಾರು ೪೫೦ ಕೆ.ಜಿ (ಇದು ಅಣ್ವಸ್ತ್ರ ತಯಾರಿಕೆಗೆ ಬೇಕಾದ ಶೇ. ೯೦ ರಷ್ಟು ಶುದ್ಧತೆಗೆ ಅತ್ಯಂತ ಹತ್ತಿರದಲ್ಲಿದೆ).
ಶೇ. 20 ರಷ್ಟು ಶುದ್ಧತೆಯ ಯುರೇನಿಯಂ: ಸುಮಾರು 1,000 ಕೆ.ಜಿ.
ಶೇ. 3.6 ರಷ್ಟು ಶುದ್ಧತೆಯ ಯುರೇನಿಯಂ: ಸುಮಾರು 8,500 ಕೆ.ಜಿ.
ಶೇ. 60 ರಷ್ಟು ಸಂವರ್ಧನೆಗೊಂಡಿರುವ ಯುರೇನಿಯಂ ಅತ್ಯಂತ ಸೂಕ್ಷ್ಮವಾದುದು. ತಾಂತ್ರಿಕವಾಗಿ ಇನ್ನು ಅಲ್ಪ ಪ್ರಮಾಣದ ಸಂವರ್ಧನೆ ನಡೆದರೆ ಇರಾನ್ ಸುಲಭವಾಗಿ ಪರಮಾಣು ಬಾಂಬ್ ತಯಾರಿಸಬಹುದು. ಇದೇ ಕಾರಣಕ್ಕೆ ಇಡೀ ಜಗತ್ತು ಇರಾನ್‌ನ ಈ ದಾಸ್ತಾನಿನ ಮೇಲೆ ಕಣ್ಣಿಟ್ಟಿದೆ.

ತಂತ್ರಗಾರಿಕೆಯ ಹೊಸ ಆಯಾಮ

ಇರಾನ್ ವಿದೇಶಾಂಗ ಸಚಿವ ಅರಾಗ್ಚಿ ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿ ಪುಟಿನ್ ಮತ್ತು ಲಾವ್ರೊವ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇರಾನ್ ದೇಶಕ್ಕೆ ಅಮೆರಿಕಕ್ಕಿಂತ ರಷ್ಯಾದ ಮೇಲೆ ಹೆಚ್ಚು ನಂಬಿಕೆ ಇರುವುದರಿಂದ, ರಷ್ಯಾಕ್ಕೆ ಯುರೇನಿಯಂ ವರ್ಗಾಯಿಸುವುದು ಅವರಿಗೆ ಸುರಕ್ಷಿತ ಎನಿಸಿದೆ. ಆದರೆ, ರಷ್ಯಾ ಇದನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದು ಎಂಬ ಭಯ ಅಮೆರಿಕವನ್ನು ಕಾಡುತ್ತಿದೆ.
ಒಟ್ಟಾರೆಯಾಗಿ, ಇರಾನ್ ಯುರೇನಿಯಂ ಬಿಕ್ಕಟ್ಟು ಈಗ ಅಮೆರಿಕ-ರಷ್ಯಾ ನಡುವಿನ ಪ್ರತಿಷ್ಠೆಯ ಹೋರಾಟವಾಗಿ ಮಾರ್ಪಟ್ಟಿದೆ. ಪುಟಿನ್ ಅವರ ಸಹಾಯ ಹಸ್ತವನ್ನು ಟ್ರಂಪ್ ಕೊಡವಿದ್ದಾರೆ. ಈಗ ಜಗತ್ತಿನ ಕಣ್ಣು ಯುಕ್ರೇನ್ ಯುದ್ಧ ಮತ್ತು ಇರಾನ್‌ನ ಮುಂದಿನ ನಡೆಯ ಮೇಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net