ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ: ಮತ್ತೊಂದು ಐತಿಹಾಸಿಕ ದಾಖಲೆಯತ್ತ 'ಹಿಟ್​ಮ್ಯಾನ್​' ಚಿತ್ತ

ರೋಹಿತ್ ಶರ್ಮ
ರೋಹಿತ್ ಶರ್ಮ
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನಿಂದ ಮೂರು ಪಂದ್ಯಗಳ ಏಕದಿನ ಸರಣಿ
  • ಮತ್ತೊಂದು ಐತಿಹಾಸಿಕ ದಾಖಲೆಯತ್ತ ಹಿಟ್​ಮ್ಯಾನ್​ ಚಿತ್ತ
  • ಮೂರು ಸಿಕ್ಸರ್​ ಬಾಕಿ ಈ ವಿಶೇಷ ದಾಖಲೆಗೆ
ನವದೆಹಲಿ: ಹರಿಣರ ಪಡೆ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಆದ ಟೀಮ್ ಇಂಡಿಯಾ ಇಂದು (ನ.30) ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ರಾಂಚಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಭಾರತ ತಂಡ ಸನ್ನದ್ಧಗೊಂಡಿದ್ದು, ಶುಭಾರಂಭ ಮಾಡಲು ಎದುರುನೋಡುತ್ತಿದೆ. ಇದೇ ಸಮಯದಲ್ಲಿ, ಅಬ್ಬರದ ಬ್ಯಾಟಿಂಗ್ ನಡೆಸಲು 'ರೋಕೊ' ಜೋಡಿ ತಂಡಕ್ಕೆ ಕಮ್​ಬ್ಯಾಕ್​ ಮಾಡುತ್ತಿರುವುದು ಸದ್ಯ ಕ್ರಿಕೆಟ್​ ಪ್ರಿಯರ ಕುತೂಹಲವನ್ನು ದುಪ್ಪಟ್ಟಾಗಿಸಿದೆ.

'ರೋಕೊ' ಜೋಡಿ ಮೇಲೆ ಕಣ್ಣು

ಟೀಮ್ ಇಂಡಿಯಾದ ಸ್ಟಾರ್ ಓಪನರ್​ ರೋಹಿತ್ ಶರ್ಮ ಈ ಪಂದ್ಯದಲ್ಲಿ ಮೂರು ಸಿಕ್ಸರ್ ಬಾರಿಸಿದ್ದೇ ಆದರೆ, ಅವರು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಹಾಗೂ ವಿಶೇಷ ದಾಖಲೆಗೆ ಸಾಕ್ಷಿಯಾಗಲಿದ್ದಾರೆ.

ರೋಹಿತ್ ಇನ್ನಿಂಗ್ಸ್​

276 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮ, 268 ಇನ್ನಿಂಗ್ಸ್‌ಗಳಲ್ಲಿ 49.22ರ ಸರಾಸರಿಯಲ್ಲಿ ಒಟ್ಟು 11,370 ರನ್ ಗಳಿಸಿದ್ದಾರೆ. ಇದರಲ್ಲಿ 33 ಶತಕ ಮತ್ತು 59 ಅರ್ಧಶತಕಗಳು ಸೇರಿವೆ. ಇಲ್ಲಿಯವರೆಗೆ, ಹಿಟ್‌ಮ್ಯಾನ್ 349 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಪ್ರಸ್ತುತ, ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರನ ದಾಖಲೆ ಪಾಕ್​ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 398 ಪಂದ್ಯಗಳಲ್ಲಿ 351 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಬಳಿಕ ರೋಹಿತ್​ ಎರಡನೇ ಸ್ಥಾನದಲ್ಲಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರು ಇವರೇ ನೋಡಿ...
  1. ಶಾಹಿದ್ ಅಫ್ರಿದಿ (ಪಾಕಿಸ್ತಾನ) - 351 ಸಿಕ್ಸರ್‌
  2. ರೋಹಿತ್ ಶರ್ಮ (ಭಾರತ) - 349 ಸಿಕ್ಸರ್‌
  3. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 331 ಸಿಕ್ಸರ್‌
  4. ಸನತ್ ಜಯಸೂರ್ಯ (ಶ್ರೀಲಂಕಾ) - 270 ಸಿಕ್ಸರ್‌
  5. ಎಂ.ಎಸ್. ಧೋನಿ (ಭಾರತ) - 229 ಸಿಕ್ಸರ್‌
ಟೆಸ್ಟ್ ಮತ್ತು ಟಿ20 ಕ್ರಿಕೆಟ್​ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮ, ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಗುರಿಯೊಂದಿಗೆ ಅವರು ಮುಂದುವರಿಯುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ತೂಕ ಇಳಿಸಿಕೊಳ್ಳುವ ಮೂಲಕ ತಮ್ಮ ಫಿಟ್‌ನೆಸ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಏಕದಿನ ವಿಶ್ವಕಪ್​ಗೆ ಭಾರತ ತಂಡದಲ್ಲಿ ಅವರ ಸ್ಥಾನ ಖಚಿತ ಎಂದೇ ಎಲ್ಲರೂ ಭಾವಿಸಿದ್ದಾರೆ. ಈ ಕುರಿತು ಸ್ವತಃ ಬಿಸಿಸಿಐ ಕೂಡ ಅವರಿಗೆ ಕಿವಿಮಾತು ನೀಡಿದ್ದು, ನಿಮ್ಮ ವೃತ್ತಿ ಭವಿಷ್ಯಕ್ಕೆ ಸಂಬಂಧಿಸಿದಂತೆ ಹರಿದಾಡುವ ಊಹಾಪೋಹಗಳಿಗೆ ಕಿವಿಗೊಡಬೇಡಿ. ಆಟದತ್ತ ಮತ್ತು ಫಿಟ್ನೆಸ್​ನತ್ತ ಮಾತ್ರ ಗಮನಹರಿಸಿ ಎಂದಿದೆ.
​ಇತ್ತೀಚೆಗೆ ಆಸೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ರೋಹಿತ್ ಶರ್ಮ, ಭರ್ಜರಿ ಶತಕದಾಟ ತೋರುವ ಮೂಲಕ ಕ್ರಿಕೆಟ್​ ಪ್ರಿಯರ ಸಂತಸಕ್ಕೆ ಕಾರಣರಾದರು. ಇದೀಗ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಅದೇ ವೇಗದ ಹಾಗೂ ಭರ್ಜರಿ ಪ್ರದರ್ಶನ ಮುಂದುವರಿಸುತ್ತಾರೆ ಎಂಬ ನಿರೀಕ್ಷೆಗಳು ಎಂದಿಗಿಂತ ಹೆಚ್ಚಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net