ಟಿಎಂಸಿಯಲ್ಲಿ ಮುಂದುವರಿದ ರಾಜೀನಾಮೆ ಪರ್ವ! ಬಂಡಾಯಗಾರರಿಗೆ ಕಾಲವೇ ಪಾಠ ಕಲಿಸಲಿದೆ ಎಂದು ದೀದಿ ಕಿಡಿ!Mamata Banerjee

ಟಿಎಂಸಿಯಲ್ಲಿ ಮುಂದುವರಿದ ರಾಜೀನಾಮೆ ಪರ್ವ! ಬಂಡಾಯಗಾರರಿಗೆ ಕಾಲವೇ ಪಾಠ ಕಲಿಸಲಿದೆ ಎಂದು ದೀದಿ ಕಿಡಿ!
ಟಿಎಂಸಿಯಲ್ಲಿ ಮುಂದುವರಿದ ರಾಜೀನಾಮೆ ಪರ್ವ! ಬಂಡಾಯಗಾರರಿಗೆ ಕಾಲವೇ ಪಾಠ ಕಲಿಸಲಿದೆ ಎಂದು ದೀದಿ ಕಿಡಿ!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಭೀಕರ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಸರಣಿ ರಾಜೀನಾಮೆ ಪರ್ವ ಹಾಗೂ ಆಂತರಿಕ ದಂಗೆ ತಾರಕಕ್ಕೇರಿದೆ. ದಿನಕ್ಕೊಬ್ಬರಂತೆ ಪ್ರಭಾವಿ ನಾಯಕರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸುತ್ತಿರುವ ನಾಯಕರ ವಿರುದ್ಧ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ(Mamata Banerjee) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಆಕ್ರೋಶ ಹೊರಹಾಕಿರುವ ಮಮತಾ, ಊಸರವಳ್ಳಿಗಿಂತಲೂ ಇವರು ಅತ್ಯಂತ ಅಪಾಯಕಾರಿಯಾಗಿದ್ದಾರೆ. ಅಲ್ಲದೆ, ಕನಿಷ್ಠ ಪಕ್ಷ ಆ ಊಸರವಳ್ಳಿಯಾದರೂ ತನ್ನ ಜೀವನೋಪಾಯಕ್ಕಾಗಿ ಬಣ್ಣ ಬದಲಾಯಿಸುತ್ತದೆ. ಆದರೆ ಈ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಕೆಲವೇ ಗಂಟೆಗಳಲ್ಲಿ ತಮ್ಮ ಬಣ್ಣ ಮತ್ತು ಚಾರಿತ್ರ್ಯ ಎರಡನ್ನೂ ಬದಲಾಯಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಪಕ್ಷದ ಕಾರ್ಯಕರ್ತರ ಸ್ವಾಭಿಮಾನವನ್ನು ಹರಾಜು ಹಾಕಿದ್ರು!: ದೀದಿ ಆಕ್ರೋಶ

ತಮ್ಮ ಸುದೀರ್ಘ ಕವಿತೆಯಲ್ಲಿ ಬಂಡಾಯ ನಾಯಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಮಮತಾ, ಕೆಲವರು ತಮ್ಮ ವೈಯಕ್ತಿಕ ಲಾಭ ಹಾಗೂ ಅಧಿಕಾರದ ಆಸೆಗಾಗಿ ಪಕ್ಷದ ನಿಷ್ಠಾವಂತ ತಳಮಟ್ಟದ ಕಾರ್ಯಕರ್ತರ ಮತ್ತು ಸಾರ್ವಜನಿಕರ ರಕ್ತ-ಸ್ವೇದದ ಸ್ವಾಭಿಮಾನವನ್ನು ಬೇರೆಯವರ ಮುಂದೆ ತಾರ್ಕಿಕವಾಗಿ ಮಾರಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.
ಅಲ್ಲದೆ, ಕವನದ ಕೊನೆಯ ಸಾಲುಗಳಲ್ಲಿ ಬಂಡಾಯಗಾರರಿಗೆ ಕಠಿಣ ಎಚ್ಚರಿಕೆ ನೀಡಿರುವ ದೀದಿ, ರಥದ ಚಕ್ರಗಳು ಹೇಗೆ ಉರುಳುತ್ತವೆಯೋ, ಹಾಗೆಯೇ ನಿಮ್ಮ ಕರ್ಮದ ಚಕ್ರಗಳೂ ಮುನ್ನಡೆಯಲಿವೆ. ನಿಮ್ಮ ಇಂದಿನ ದ್ರೋಹಕ್ಕೆ ತಕ್ಕ ಫಲಿತಾಂಶವನ್ನು ನೀವು ಶೀಘ್ರದಲ್ಲೇ ಅನುಭವಿಸಲಿದ್ದೀರಿ. ಅಂದು ಆ ದೇಶದ್ರೋಹಿಗಳಿಗೆ ಮೌಲ್ಯರಹಿತ ಅಮಾನವೀಯತೆ ಎಂದರೆ ಏನು ಎಂಬುದು ಕಣ್ಣಿಗೆ ಕಟ್ಟಿದಂತೆ ಅರ್ಥವಾಗಲಿದೆ ಎಂದು ಮಮತಾ ಗುಡುಗಿದ್ದಾರೆ.
ಟಿಎಂಸಿಯನ್ನು ಮುಳುಗಿಸುತ್ತಿರುವ ಸರಣಿ ರಾಜೀನಾಮೆಗಳ ಮಹಾಪೂರ!
ಮಮತಾ ಬ್ಯಾನರ್ಜಿ ಅವರ ಈ ಗಿರ್ಗಿಟ್ ಕವನ ಬಿಡುಗಡೆಯಾದ ದಿನವೇ ಟಿಎಂಸಿ ಪಕ್ಷದೊಳಗಿನ ಬಿಕ್ಕಟ್ಟು ಇನ್ನು ಹತ್ತು ಪಟ್ಟು ತೀವ್ರಗೊಂಡಿದೆ. ಪಕ್ಷದ ಸಾಲು ಸಾಲು ಪ್ರಮುಖ ನಾಯಕರು ತಮ್ಮ ಅಧಿಕೃತ ಹುದ್ದೆಗಳನ್ನು ತ್ಯಜಿಸಿ ಹೊರನಡೆಯುತ್ತಿದ್ದಾರೆ.
ಸಂಸದೆ ಕಾಕೋಲಿ ಘೋಷ್ ದಸ್ತಿದಾರ್: ಬಾರಾಸತ್ ಸಂಸದೆ ಕಾಕೋಲಿ ಘೋಷ್ ಅವರು ಪಕ್ಷದ ರಾಜ್ಯ ಅಧ್ಯಕ್ಷ ಸುಬ್ರತಾ ಬಕ್ಷಿ ಅವರಿಗೆ ಮತ್ತೊಂದು ಅಧಿಕೃತ ರಾಜೀನಾಮೆ ಪತ್ರವನ್ನು ಕಳುಹಿಸಿದ್ದು, ಪಕ್ಷದ ಎಲ್ಲಾ ಸಾಂಸ್ಥಿಕ ಜವಾಬ್ದಾರಿಗಳನ್ನು ಕಾಯಂ ಆಗಿ ತ್ಯಜಿಸಿದ್ದಾರೆ.
ಕೊಲ್ಕತ್ತಾ ಪಾಲಿಕೆ ಉನ್ನತ ನಾಯಕರ ಔಟ್: ಕೆಎಂಸಿ ಬರೋ XII ಅಧ್ಯಕ್ಷ ಸುಶಾಂತ್ ಘೋಷ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಪಕ್ಷದ ಮುಖ್ಯ ವಕ್ತಾರ ಹಾಗೂ ಕೌನ್ಸಿಲರ್ ಅರೂಪ್ ಚಕ್ರವರ್ತಿ ಕೆಎಂಸಿ ಅಕೌಂಟ್ಸ್ ಕಮಿಟಿಗೆ ಬೈ-ಬೈ ಹೇಳಿದ್ದಾರೆ.
ಚುನಾವಣಾ ರಾಜಕೀಯಕ್ಕೆ ಗಾಯಕ ಇಂದ್ರನೀಲ್ ಸೆನ್ ವಿದಾಯ: ಮಾಜಿ ಸಚಿವ ಹಾಗೂ ಪ್ರಸಿದ್ಧ ಗಾಯಕ ಇಂದ್ರನೀಲ್ ಸೆನ್ ಅವರು ಸಕ್ರಿಯ ಚುನಾವಣಾ ರಾಜಕೀಯದಿಂದಲೇ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

ವಿವಿಐಪಿ ಸಂಸ್ಕೃತಿ’ ಹಾಗೂ ಭ್ರಷ್ಟಾಚಾರವೇ ಪಕ್ಷದ ಪತನಕ್ಕೆ ಕಾರಣ!

ರಾಜೀನಾಮೆ ನೀಡಿರುವ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ತಮ್ಮ ಪತ್ರದಲ್ಲಿ ಪಕ್ಷದೊಳಗೆ ನುಸುಳಿರುವ ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಬಂಗಾಳದಲ್ಲಿ ನಡೆದ ಭೀಕರ ರೇಷನ್ ಹಗರಣ, ಶಿಕ್ಷಕರ ನೇಮಕಾತಿ ಅಕ್ರಮಗಳು ಹಾಗೂ ಇಡೀ ದೇಶವನ್ನೇ ನಡುಗಿಸಿದ್ದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸುತ್ತ ನಡೆದ ಗೊಂದಲಗಳೇ ಸಾರ್ವಜನಿಕರಲ್ಲಿ ಟಿಎಂಸಿ ಮೇಲಿದ್ದ ನಂಬಿಕೆಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದೆ ಎಂದು ಉಲ್ಲೇಖಿಸಿದ್ದಾರೆ.
ಅಲ್ಲದೆ, ಇನ್ನುಳಿದ ಬಂಡಾಯ ನಾಯಕರು, ಪಕ್ಷದೊಳಗೆ ಬೆಳೆದಿರುವ ಹೈಟೆಕ್ ವಿವಿಐಪಿ ಸಂಸ್ಕೃತಿ ಹಾಗೂ ತಳಮಟ್ಟದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಕಾರ್ಪೊರೇಟ್ ಶೈಲಿಯಲ್ಲಿ ಪಕ್ಷ ನಡೆಸುತ್ತಿರುವುದೇ ಈ ಭೀಕರ ಪತನಕ್ಕೆ ಕಾರಣ ಎಂದು ಮಮತಾ ಬ್ಯಾನರ್ಜಿ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಈಗಾಗಲೇ ನೂತನ ಶಾಸಕರ ಮೊದಲ ಸಭೆಯಲ್ಲೇ ಪಕ್ಷದಲ್ಲಿ ಇರಲು ಇಷ್ಟವಿಲ್ಲದವರು ಇಂದೇ ಹೊರಹೋಗಬಹುದು ಎಂದು ಮಮತಾ ಬ್ಯಾನರ್ಜಿ ಹತಾಶೆಯಿಂದ ನುಡಿದಿದ್ದರು. ಅದರ ಬೆನ್ನಲ್ಲೇ ಬಂದಿರುವ ಈ ಜೀವರಕ್ಷಕ ಗಿರ್ಗಿಟ್ ಕವಿತೆಯು ಬಂಗಾಳದ ರಾಜಕೀಯ ವಲಯದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಆಂತರಿಕ ಸಾಮ್ರಾಜ್ಯ ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಇತಿಹಾಸದ ಪುಟ ಸೇರಲಿದೆ ಎಂಬುದಕ್ಕೆ ಸ್ಪಷ್ಟ ಮುನ್ಸೂಚನೆಯನ್ನು ನೀಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net