ಸುಳ್ಳು ಭ್ರಷ್ಟಾಚಾರದ ಆರೋಪದಿಂದ ತೀವ್ರ ನೊಂದಿದ್ದರು!...ಆಶಿಶ್​ ಬ್ಯಾನರ್ಜಿ ನಿಧನಕ್ಕೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ದೀದಿ | Mamata Banerjee

Mamata Banerjee | ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Mamata Banerjee | ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ನಾಯಕ ಆಶಿಶ್​ ಬ್ಯಾನರ್ಜಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾನುವಾರದಂದು ಬೀರ್‌ಭೂಮ್ ಜಿಲ್ಲೆಯ ಪಾರ್ಟಿ ಆಫೀಸ್ ಒಂದರಲ್ಲಿ ರಾಂಪುರ್‌ಹಾಟ್ ವಿಧಾನಸಭಾ ಕ್ಷೇತ್ರದ ಐದು ಬಾರಿಯ ಟಿಎಂಸಿ ಶಾಸಕರಾಗಿದ್ದ ಆಶಿಶ್​ ಬ್ಯಾನರ್ಜಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಈ ಘಟನೆಯು ದೊಡ್ಡ ಮಟ್ಟದ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಸಂಸದ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವು ಟಿಎಂಸಿ ನಾಯಕರು, ಬಿಜೆಪಿ ಹಾಗೂ ಕೆಲವು ಮಾಧ್ಯಮಗಳು ಆಶಿಶ್​ ಬ್ಯಾನರ್ಜಿ ಮತ್ತು ಮಮತಾ ಬ್ಯಾನರ್ಜಿ ಬಣದ ನಾಯಕರ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.
ಇದೇ ಹಾದಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಹಿರಿಯ ಟಿಎಂಸಿ ನಾಯಕ ಅಸೀಶ್ ಬ್ಯಾನರ್ಜಿ ಅವರು ತಮ್ಮ ಕ್ಷೇತ್ರದ ಮತ್ತು ಜಿಲ್ಲೆಯ ಜನರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಒಬ್ಬ ಸರಳ ರಾಜಕಾರಣಿಯಾಗಿದ್ದರೂ, ಅವರ ಮೇಲೆ ಸುಳ್ಳು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ, ತೀವ್ರ ಕಿರುಕುಳ ಹಾಗೂ ಒತ್ತಡಕ್ಕೆ ಒಳಪಡಿಸಲಾಗಿತ್ತು ಎಂದು ಹೇಳಿದ್ದಾರೆ.
ಈ ದುರಂತವನ್ನು ಇನ್ನಷ್ಟು ನೋವಿನ ಸಂಗತಿಯನ್ನಾಗಿ ಮಾಡಿರುವುದು ಎಂದರೆ, ಅವರು ತಮ್ಮ ಕೊನೆಯ ದಿನಗಳಲ್ಲಿ ಎದುರಿಸಿದ ತೀವ್ರ ಮಾನಸಿಕ ಮತ್ತು ಭಾವನಾತ್ಮಕ ಒತ್ತಡ. ಐದು ಬಾರಿಯ ಶಾಸಕರಾಗಿ, ಮಾಜಿ ಉಪಸಭಾಪತಿಯಾಗಿ ಮತ್ತು ಅಧ್ಯಕ್ಷರಾಗಿ ಆಶಿಶ್​ ದಾದಾ ಅವರು ರಾಂಪುರ್‌ಹಾಟ್‌ ಅಭಿವೃದ್ಧಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಹಾಗೂ ಜನರಿಗಾಗಿ ಅನೇಕ ಪ್ರಮುಖ ಕೆಲಸಗಳನ್ನು ಮಾಡಿದ್ದರು. ಆದಾಗ್ಯೂ, ಅವರು ಮಾಡಿದ ಉತ್ತಮ ಕೆಲಸಗಳ ನಡುವೆಯೂ ಅವರ ತೇಜೋವಧೆ ಮಾಡಲಾಯಿತು, ಸುಳ್ಳು ಆರೋಪಗಳನ್ನು ಹೊರಿಸಲಾಯಿತು ಮತ್ತು ನಿರಂತರ ಒತ್ತಡಕ್ಕೆ ಒಳಪಡಿಸಲಾಯಿತು ಎಂದು ಮಮತಾ ಬ್ಯಾನರ್ಜಿ ತಮ್ಮ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮಮತಾ ಬ್ಯಾನರ್ಜಿಯವರು ಆಡಳಿತಾರೂಢ ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡುತ್ತಾ, ಆಶಿಶ್ ಬ್ಯಾನರ್ಜಿಯವರ ಸುದೀರ್ಘ ಸಾರ್ವಜನಿಕ ಸೇವೆಯ ಹೊರತಾಗಿಯೂ ಅವರು ಎದುರಿಸಿದ ಕಿರುಕುಳ ಮತ್ತು ಮಾನಸಿಕ ಒತ್ತಡವು, ರಾಜಕೀಯ ಹಗೆತನದಿಂದ ಉಂಟಾಗುವ ಹಾನಿಯ ಬಗ್ಗೆ ನಾವೆಲ್ಲರೂ ಯೋಚಿಸುವಂತೆ ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಆಶಿಶ್ ಬ್ಯಾನರ್ಜಿಯವರು ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿದ್ದರು ಎಂದು ಶ್ಲಾಘಿಸಿದ ಮಮತಾ,

ಆಶಿಶ್

ಅವರ ಕೊರತೆ ಸದಾ ಕಾಡಲಿದೆ ಎಂದು ಹೇಳಿದ್ದಾರೆ.

ಡೆತ್‌ನೋಟ್ ಪತ್ತೆ!..

ಘಟನಾ ಸ್ಥಳದಲ್ಲಿ ಡೆತ್‌ನೋಟ್ ಕೂಡ ದೊರೆತಿದ್ದು, ಆ ಪತ್ರದಲ್ಲಿ, ಬ್ಯಾನರ್ಜಿ ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಳ್ಳುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ತಾವು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ತಾರಾಪೀಠ್ ರಾಂಪುರ್‌ಹಾಟ್ ಅಭಿವೃದ್ಧಿ ಪ್ರಾಧಿಕಾರದ (TRDA) ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯೋಜನೆ ಮತ್ತು ಅಭಿವೃದ್ಧಿ ಸಂಸ್ಥೆಯ ಟೆಂಡರ್ ಸಂಬಂಧಿತ ನಿರ್ಧಾರಗಳು, ಚೆಕ್ ವಿತರಣೆ, ಪ್ಲಾನ್ ಅನುಮೋದನೆಗಳು ಅಥವಾ ನಿರಾಕ್ಷೇಪಣಾ ಪತ್ರಗಳ ವಿತರಣೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದಿರುವ ಬ್ಯಾನರ್ಜಿ, ತಮ್ಮನ್ನು ಈ ಹಗರಣದಲ್ಲಿ ಸಿಲುಕಿಸುವ ಮತ್ತು ಅವಮಾನಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ರಾಜಕೀಯ ಪ್ರವೇಶಿಸಿದ್ದೇ ದೊಡ್ಡ ತಪ್ಪು ಎಂದಿರುವ ಅವರು, ಪಕ್ಷದೊಳಗಿನ ತಪ್ಪುಗಳನ್ನು ಪ್ರತಿಭಟಿಸಲು ಸಾಧ್ಯವಾಗಲಿಲ್ಲ ಎಂದೂ ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಚುನಾವಣಾ ಸೋಲಿನ ನಂತರ ಬ್ಯಾನರ್ಜಿ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿರಲಿಲ್ಲ ಎಂದು ಪಕ್ಷದ ಮೂಲಗಳನ್ನು ಆಧರಿಸಿ ಪಿಟಿಐ ವರದಿ ಮಾಡಿದೆ.(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net