ಲೈಂಗಿಕ ದೌರ್ಜನ್ಯ ಪ್ರಕರಣ; ಕಾಂಗ್ರೆಸ್‌ನ ಉಚ್ಚಾಟಿತ ಶಾಸಕ ರಾಹುಲ್ ಮಮ್‌ಕೂಟತಿಲ್ ಗೆ ಮತ್ತೇ ಜೈಲು ವಾಸ! Rahul Mamkootathil

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ತಿರುವನಂತಪುರಂ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ರನ್ನು  ಶನಿವಾರ ತಡರಾತ್ರಿ ನಾಟಕೀಯ ಬೆಳವಣಿಗೆಯೊಂದರಲ್ಲಿ  ಕೇರಳ ಪೊಲೀಸರು ಬಂಧಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್​ನ ಉಚ್ಚಾಟಿತ ಶಾಸಕ ರಾಹುಲ್ ವಿರುದ್ಧದ ತನಿಖೆ ಸದ್ಯ ಹೊಸ ರೂಪ ಪಡೆದುಕೊಂಡಿದ್ದು, ಪತ್ತನಂತಿಟ್ಟ ಜಿಲ್ಲೆಯ ಮಹಿಳೆಯೊಬ್ಬರು ಇಮೇಲ್ ಮೂಲಕ ದೂರೊಂದನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಅದರಲ್ಲಿ ಅತ್ಯಾಚಾರ ಮತ್ತು ಬಲವಂತದ ಗರ್ಭಪಾತದಂತಹ ಆಘಾತಕಾರಿ ಆರೋಪಗಳನ್ನು ಮಾಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್​ರನ್ನು ವಶಕ್ಕೆ ಪಡೆದಿದ್ದಾರೆ.

ಹೋಟೆಲ್ ಮೇಲೆ ದಾಳಿ! 

ಭಾನುವಾರ (ಜ.11) ಮಧ್ಯರಾತ್ರಿ 12:30 ರ ಸುಮಾರಿಗೆ ಮಹಿಳಾ ಕಾನ್‌ಸ್ಟೆಬಲ್ ಮತ್ತು ಶೋರ್ನೂರ್ ಡೆಪ್ಯುಟಿ ಎಸ್‌ಪಿ ಸೇರಿದಂತೆ ಎಂಟು ಅಧಿಕಾರಿಗಳ ತಂಡವು ಶಾಸಕ ಉಳಿದುಕೊಂಡಿದ್ದ ಪಾಲಕ್ಕಾಡ್‌ನ ಹೋಟೆಲ್​ ಗೆ ನುಗ್ಗಿದ್ದಾರೆ. ಈ ವೇಳೆ ಮಮ್‌ಕೂಟತಿಲ್​ ತನ್ನ ಪರ ವಕೀಲರು ಅಥವಾ ಸಹಾಯಕರನ್ನು ಸಂಪರ್ಕಿಸುವುದಾಗಿ ಮನವಿ ಮಾಡಿದರೂ ಕೂಡ ಇದ್ಯಾವುದನ್ನು ಲೆಕ್ಕಿಸದ ಪೊಲೀಸರು ತಕ್ಷಣವೇ ರಾಹುಲ್ ರನ್ನು ಬಂಧಿಸಿದ್ದಾರೆ.
ಪತ್ತನಂತಿಟ್ಟ ಮಹಿಳೆಯು ದಾಖಲಿಸಿರುವ ಹೊಸ ಎಫ್‌ಐಆರ್ ಆಧರಿಸಿ ವಿಶೇಷ ತನಿಖಾ ತಂಡ (SIT) ಈಗ ತನಿಖೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು, ಬೆಳಿಗ್ಗೆಯಿಂದಲೇ ರಾಹುಲ್ ರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ ಎಂದು ವರದಿಯಾಗಿದೆ.
ಪತ್ತನಂತಿಟ್ಟ ಮೂಲದ ಮಹಿಳೆಯ  ಇಮೇಲ್ ದೂರು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದ್ದು,  ಈ ಹಿಂದೆ ಶಾಸಕನ ವಿರುದ್ಧ ಇಬ್ಬರು ಮಹಿಳೆಯರು ಹೊರಿಸಿದ್ದ ಆರೋಪಗಳು ಮತ್ತು ಈಗಿನ ದೂರಿನಲ್ಲಿನ ಅಂಶಗಳು ಒಂದೇ ರೀತಿಯದ್ದಾಗಿದೆ. ಇದು ಪ್ರಕರಣ ಇನ್ನಷ್ಟು ಗಂಭೀರತೆ ಪಡೆದುಕೊಳ್ಳಲು ಕಾರಣವಾಗಿದೆ.
ಈ ಹಿಂದೆ ಏನಾಗಿತ್ತು...?
2023 ರಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆಯ ನೆಪದಲ್ಲಿ ಮಹಿಳೆಯೊಬ್ಬಳನ್ನು ರೆಸಾರ್ಟ್‌ಗೆ ಕರೆದೊಯ್ದು ಹಲ್ಲೆ ನಡೆಸಿ ತೀವ್ರ ಗಾಯ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಕೇರಳ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ಎರಡನೇ ಪ್ರಕರಣದಲ್ಲಿ ಇದೇ ರೀತಿಯ ಶೋಷಣೆ, ಸುಳ್ಳು ವಿವಾಹ ಭರವಸೆಗಳು, ಶಿಫಾರಸು ಮಾಡದ ಔಷಧಿಗಳ ಮೂಲಕ ಬಲವಂತದ ಗರ್ಭಪಾತˌ ಕೊಲೆ ಬೆದರಿಕೆಗಳು ಮತ್ತು ಐಟಿ ಕಾಯ್ದೆಯ ಉಲ್ಲಂಘನೆ ಕುರಿತಾದ  ಆರೋಪಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿಯಾಗಿ ತಿಳಿಸಲಾಗಿತ್ತು. ಈ ಪ್ರಕರಣದಲ್ಲೂ ತಿರುವನಂತಪುರಂ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net