ನೀಟ್‌ ಹೋರಾಟದಲ್ಲಿ ಪೆಲೆಟ್ ಗನ್ ಕಿಚ್ಚು: ಅತಿಯಾದ ಬಲಪ್ರಯೋಗದ ಆರೋಪದ ಬೆನ್ನಲ್ಲೇ ತನಿಖೆಗೆ ಮುಂದಾದ ಆರ್‌ಎಎಫ್! | Pellet Gun

Pellet Gun | ನೀಟ್‌ ಹೋರಾಟದಲ್ಲಿ ಪೆಲೆಟ್ ಗನ್ ಕಿಚ್ಚು: ಅತಿಯಾದ ಬಲಪ್ರಯೋಗದ ಆರೋಪದ ಬೆನ್ನಲ್ಲೇ ತನಿಖೆಗೆ ಮುಂದಾದ ಆರ್‌ಎಎಫ್!
Pellet Gun | ನೀಟ್‌ ಹೋರಾಟದಲ್ಲಿ ಪೆಲೆಟ್ ಗನ್ ಕಿಚ್ಚು: ಅತಿಯಾದ ಬಲಪ್ರಯೋಗದ ಆರೋಪದ ಬೆನ್ನಲ್ಲೇ ತನಿಖೆಗೆ ಮುಂದಾದ ಆರ್‌ಎಎಫ್!
Published on
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ವೇಳೆ ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿ ಪೆಲೆಟ್ ಗನ್‌ಗಳ (Pellet Gun) ಬಳಕೆ ಸೇರಿದಂತೆ ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪಗಳ ಕುರಿತು ಆರ್‌ಎಎಫ್ ಪ್ರಾಥಮಿಕ ಪರಿಶೀಲನೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಸಶಸ್ತ್ರ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಆರ್‌ಎಎಫ್ ತಂಡಗಳು ಕೈಗೊಂಡ ಕ್ರಮಗಳು ಹಾಗೂ ಸಿಬ್ಬಂದಿಯ ಮೇಲೆ ನಡೆದ ದಾಳಿಯ ಘಟನೆಗಳು ಸೇರಿದಂತೆ ಸಂಪೂರ್ಣ ಸಂಗತಿಗಳನ್ನು ಪರಿಶೀಲಿಸುವಂತೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CRPF), ತನ್ನ ವಿಶೇಷ ಗಲಭೆ ನಿಯಂತ್ರಣ ವಿಭಾಗವಾದ ಆರ್‌ಎಎಫ್‌ನ ಇನ್‌ಸ್ಪೆಕ್ಟರ್ ಜನರಲ್‌ಗೆ ಸೂಚಿಸಿದೆ.
ಆದರೆ, ಈ ಹಂತದಲ್ಲಿ ಯಾವುದೇ ಅಧಿಕೃತ ಕೋರ್ಟ್ ಆಫ್ ಇನ್‌ಕ್ವೈರಿಗೆ ಆದೇಶಿಸಿಲ್ಲ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯಲ್ಲಿ ಘಟನೆಯ ನೈಜತೆ ಕಂಡುಬಂದ ನಂತರವಷ್ಟೇ ಇಂತಹ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಡಿಯೋ, ಫೋಟೋ ವೈರಲ್!...

ಈ ಇಡೀ ವಿವಾದವು ಜುಲೈ 20 ರಂದು ಕಾಕ್ರೋಚ್ ಜನತಾ ಪಾರ್ಟಿ ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಚಲೋ ಸಂಸದ್ ಮೆರವಣಿಗೆಯಿಂದ ಪ್ರಾರಂಭವಾಗಿತ್ತು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಜಂತರ್ ಮಂತರ್‌ನಿಂದ ಮೆರವಣಿಗೆ ನಡೆಸಿದ್ದರು. ಪ್ರತಿಭಟನೆ ವೇಳೆ ನೀಲಿ ಸಮವಸ್ತ್ರ ಧರಿಸಿದ ಸಿಬ್ಬಂದಿ ಬಂದೂಕು ಹಿಡಿದಿರುವುದು, ಲಾಠಿ ಪ್ರಹಾರ ನಡೆಸಿರುವುದು ಮತ್ತು ಲಾಠಿ ಚಾರ್ಜ್ ಮಾಡುತ್ತಿರುವ ಹಲವಾರು ವೀಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಆರ್‌ಎಎಫ್ ಗಮನಿಸಿದೆ.
ಕರ್ತವ್ಯದ ಸಮಯದಲ್ಲಿ ಸಿಬ್ಬಂದಿಯ ನಡವಳಿಕೆಯನ್ನು ಪರಿಶೀಲಿಸಲು ಇರುವ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು ಎಂದು ಹಿರಿಯ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರ್‌ಎಎಫ್‌ನ ಗಲಭೆ ನಿಯಂತ್ರಣ ಉಪಕರಣಗಳಲ್ಲಿ 12-ಬೋರ್ ಪಂಪ್-ಆಕ್ಷನ್ ಪೆಲೆಟ್ ಗನ್‌ಗಳು ಸೇರಿವೆ ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ, ಸಿಬ್ಬಂದಿಯ ಜೀವಕ್ಕೆ ತೀವ್ರ ಬೆದರಿಕೆ ಇರುವ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಮಾತ್ರ ಈ ಆಯುಧಗಳನ್ನು ಬಳಸಲು ಅವಕಾಶವಿದೆ. ಅಲ್ಲದೆ, ಪೆಲೆಟ್‌ಗಳಿಂದ ಸಣ್ಣಪುಟ್ಟ ಗಾಯಗಳಾಗುವಂತೆ ಮತ್ತು ಸೊಂಟದ ಕೆಳಭಾಗಕ್ಕೆ ಮಾತ್ರ ಗುರಿ ಇಟ್ಟು ಡಿಫ್ಲೆಕ್ಟರ್ ಬಳಸಿ ಫೈರಿಂಗ್ ಮಾಡಬೇಕು ಎಂಬ ನಿಯಮವಿದೆ.

ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!...

ಜುಲೈ 20 ರ ಪ್ರತಿಭಟನೆಯ ನಂತರ ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಪೆಲೆಟ್ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ದೆಹಲಿ ಪೊಲೀಸರು ತಮ್ಮ ಬಳಿ ಪೆಲೆಟ್ ಗನ್‌ಗಳಿರುವುದನ್ನು ನಿರಾಕರಿಸಿದ್ದು, ಅವುಗಳ ಬಳಕೆಯ ವರದಿಗಳು ದಾರಿತಪ್ಪಿಸುವಂತಿವೆ ಎಂದು ಹೇಳಿದ್ದಾರೆ. ಆದರೆ, ಆರ್‌ಎಎಫ್ ಸಿಬ್ಬಂದಿ ಪೆಲೆಟ್ ಗುಂಡು ಹಾರಿಸಿದ್ದಾರೆ ಎಂಬ ಆರೋಪದ ಕುರಿತು ಸಿಆರ್‌ಪಿಎಫ್ ಅಥವಾ ಆರ್‌ಎಎಫ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಈ ಪರಿಶೀಲನಾ ಪ್ರಕ್ರಿಯೆಯಲ್ಲಿ ಪ್ರತಿಭಟನಾಕಾರರಿಂದ ಆರ್‌ಎಎಫ್ ಸಿಬ್ಬಂದಿ ಮೇಲಾದ ಹಲ್ಲೆಯ ವೀಡಿಯೊಗಳು, ಆರ್‌ಎಎಫ್ ಸಮವಸ್ತ್ರಧಾರಿ ಅಧಿಕಾರಿಯೊಬ್ಬರು ಪ್ರತಿಭಟನಾಕಾರರ ಕಾಲಿಗೆ ಕಾಲಿಟ್ಟು ಕೆಳಗೆ ಬೀಳಿಸುವ ದೃಶ್ಯ ಮತ್ತು ಶೋಕ್ ನೀಡುವ ಸಾಧನವನ್ನು ಬಳಸಲಾಗಿದೆ ಎಂದು ಆರೋಪಿಸಲಾದ ಮತ್ತೊಂದು ಕ್ಲಿಪ್ ಕೂಡ ಸೇರಿದೆ.
ಸಂತ್ರಸ್ತನನ್ನು ಮಾಧ್ಯಮಗಳ ಮುಂದೆ ತಂದ ರಾಹುಲ್ ಗಾಂಧಿ
ಇದಕ್ಕೂ ಮುನ್ನ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದಾರೆ ಎನ್ನಲಾದ ಪ್ರತಿಭಟನಾಕಾರರೊಬ್ಬರನ್ನು ಮಾಧ್ಯಮಗಳ ಮುಂದೆ ಕರೆತಂದರು. ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್​, ವಿದ್ಯಾರ್ಥಿಯು ತ್ರಿವರ್ಣ ಧ್ವಜವನ್ನು ಹಿಡಿದು ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಗ ಅವರ ಮೇಲೆ ಪೆಲೆಟ್ ಗನ್‌ನಿಂದ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿದರು. ವಿದ್ಯಾರ್ಥಿಗೆ ಗಾಯಗಳಾಗಿದ್ದರೂ ಸರ್ಕಾರ ಪೆಲೆಟ್ ಗನ್‌ಗಳ ಬಳಕೆಯನ್ನು ನಿರಾಕರಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಇಲ್ಲಿ ನಿಂತಿರುವ ನನ್ನ ಸಹೋದರ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ, ತ್ರಿವರ್ಣ ಧ್ವಜ ಹಿಡಿದಿದ್ದಾಗ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದಾನೆ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಯಾವುದೇ ಪೆಲೆಟ್ ಗನ್ ಬಳಕೆಯಾಗಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಅವರ ಕಣ್ಣಿಗೆ ಹಾನಿಯಾಗಿದ್ದು, ದೃಷ್ಟಿ ಕಳೆದುಕೊಂಡಿದ್ದಾರೆ. ಇಂತಹ ಸಾವಿರಾರು ಯುವಕರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಮತ್ತು ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ. ಈತ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ, ಆದರೆ ಆ ಪರೀಕ್ಷೆಯ ಪತ್ರಿಕೆಯೂ ಸೋರಿಕೆಯಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net