ಅಲ್ಪಸಂಖ್ಯಾತರ ರಕ್ಷಣೆ ಮಾಡಿ: ಬಾಂಗ್ಲಾ ಮಧ್ಯಂತರ ಸರ್ಕಾರಕ್ಕೆ ಅಮೆರಿಕದ ಖಡಕ್ ಸೂಚನೆ | US warns Bangladesh

US warns Bangladesh
US warns Bangladesh
Published on
ನ್ಯೂಯಾರ್ಕ್​: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ದೀಪು ಚಂದ್ರ ದಾಸ್ ಎಂಬ ಹಿಂದೂ ಕಾರ್ಮಿಕನ ಭೀಕರ ಹತ್ಯೆಯನ್ನು ಅಮೆರಿಕದ ವಿದೇಶಾಂಗ ಇಲಾಖೆ(US warns Bangladesh) ಮತ್ತು ಅಮೆರಿಕದ ಸಂಸದರು ಬಲವಾಗಿ ಖಂಡಿಸಿದ್ದಾರೆ.

ಅಮೆರಿಕ ವಿದೇಶಾಂಗ ಇಲಾಖೆ ಖಂಡನೆ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂಗಳು, ಬೌದ್ಧರು ಮತ್ತು ಕ್ರೈಸ್ತರ ಸುರಕ್ಷತೆಯ ಬಗ್ಗೆ ಅಮೆರಿಕ ವಿದೇಶಾಂಗ ಇಲಾಖೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಧಾರ್ಮಿಕ ಅಸಹಿಷ್ಣುತೆಯಿಂದ ನಡೆಯುವ ಯಾವುದೇ ಹಿಂಸಾಚಾರವನ್ನು ಒಪ್ಪಲು ಸಾಧ್ಯವಿಲ್ಲ. ಬಾಂಗ್ಲಾದ ಮಧ್ಯಂತರ ಸರ್ಕಾರವು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕು ಎಂದು ಸೂಚಿಸಿದೆ.
ಹಿಂದೂ ಯುಕಕ ದೀಪು ದಾಸ್​ ಹತ್ಯೆಗೆ ಕಾರಣರಾದವರನ್ನು ಪತ್ತೆಹಚ್ಚಿ ನ್ಯಾಯಾಂಗದ ಮುಂದೆ ತರಲು ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಅಮೆರಿಕ ಕರೆ ನೀಡಿದೆ.

ಅಮೆರಿಕದ ಸಂಸದ ಸುಹಾಸ್ ಸುಬ್ರಹ್ಮಣ್ಯಂ ಕಿಡಿ

ಬಾಂಗ್ಲಾ ಹಿಂಸಾಚಾರದ ಬಗ್ಗೆ ಮಾತನಾಡಿರುವ ವರ್ಜೀನಿಯಾದ ಅಮೆರಿಕನ್ ಸಂಸದ ಸುಹಾಸ್ ಸುಬ್ರಹ್ಮಣ್ಯಂ, ದೇವದೂಷಣೆಯ ನಿಂದನೆಯ ಸುಳ್ಳು ಆರೋಪ ಹೊರಿಸಿ ಹಿಂದೂ ಕಾರ್ಮಿಕ ದೀಪು ಚಂದ್ರ ದಾಸ್ ಹತ್ಯೆ ಮಾಡಿರುವುದು ಅತ್ಯಂತ ಭೀಕರ ಕೃತ್ಯವಾಗಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾ ಸರ್ಕಾರದಲ್ಲಿ ಆಗುತ್ತಿರುವ ಬದಲಾವಣೆಗಳು ಹಿಂದೂ ದೇವಾಲಯ ಮತ್ತು ಮನೆಗಳ ಮೇಲೆ ದಾಳಿಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಹಿಂದೂ ಯುವಕ ದೀಪು ಚಂದ್ರ ದಾಸ್ ಪ್ರಕರಣದ ಹಿನ್ನೆಲೆ

ಇದೇ ಡಿಸೆಂಬರ್ 18 ರಂದು ಮೈಮೆನ್ಸಿಂಗ್‌ನ ಪಯೋನೀರ್ ನಿಟ್ ಕಾಂಪೋಸಿಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ದೀಪು ಚಂದ್ರ ದಾಸ್ ಎಂಬುವವರನ್ನು ಗುಂಪು ಹಿಡಿದು ಥಳಿಸಿ, ಅವರ ಶವವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿದ್ದ ಘಟನೆ ನಡೆದಿತ್ತು.
ದೀಪು ದಾಸ್​ ಎಂಬ ಹಿಂದೂ ಯುವಕ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಕಿಡಿಗೇಡಿಗಳು ಸುಳ್ಳು ವದಂತಿ ಹಬ್ಬಿಸಿದ್ದರು. ಆದರೆ ನಂತರದ ತನಿಖೆಯಲ್ಲಿ ಇದು ಕೆಲಸದ ಸ್ಥಳದ ವೈಯಕ್ತಿಕ ದ್ವೇಷಕ್ಕಾಗಿ ಮಾಡಲಾದ ಸಂಚು ಎಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದಲ್ಲಿ ಹಲವಾರು ಜನರನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಂಗ್ಲಾದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಕೂಡ ಘಟನೆಯನ್ನು ಖಂಡಿಸಿದ್ದರು. ಅಲ್ಲದೆ, ಮೃತರ ಕುಟುಂಬಕ್ಕೆ ನೆರವು ನೀಡುತ್ತಿದ್ದೇವೆ ತಿಳಿಸಿದ್ದರು.
ಹಿಂಸಾಚಾರವನ್ನು ಖಂಡಿಸಿದ ಭಾರತ
ಈ ಬಗ್ಗೆ ಮಾತನಾಡಿರುವ MEA ವಕ್ತಾರ ರಣಧೀರ್ ಜೈಸ್ವಾಲ್, ನೆರೆಯ ದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾತ್ಮಕ ದಾಳಿಯ ಮಾದರಿಯನ್ನು ತೋರಿಸಿದೆ. ಅಲ್ಲದೆ, ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಢಾಕಾದಲ್ಲಿರುವ ಮಧ್ಯಂತರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೈಮೆನ್ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಮತ್ತು ರಾಜ್‌ಬರಿಯಲ್ಲಿ ಅಮೃತ್ ಮಂಡಲ್ ಎಂಬ ಇಬ್ಬರು ಹಿಂದೂಗಳನ್ನು ಭೀಕರವಾಗಿ ಥಳಿಸಿ ಹತ್ಯೆ ಮಾಡಿದ ಘಟನೆಗಳ ನಂತರ ಭಾರತ ಈ ಪ್ರತಿಕ್ರಿಯೆ ನೀಡಿದೆ. ಈ ಘಟನೆಗಳು ಅಂತರಾಷ್ಟ್ರೀಯವಾಗಿ ಆಕ್ರೋಶಕ್ಕೆ ಕಾರಣವಾಗಿವೆ.
ನೆರೆಯ ದೇಶದಲ್ಲಿ ಹೆಚ್ಚುತ್ತಿರುಗವ ಹಿಂಸಾಚಾರದ ಪ್ರಮಾಣ
ಬಾಂಗ್ಲಾದಲ್ಲಿರುವ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ, ಅಲ್ಪಸಂಖ್ಯಾತರ ವಿರುದ್ಧದ ಹತ್ಯೆಗಳು, ಬೆಂಕಿ ಹಚ್ಚುವಿಕೆ ಮತ್ತು ಭೂಕಬಳಿಕೆ ಸೇರಿದಂತೆ 2,900 ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳು ದಾಖಲಾಗಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮುಂದುವರೆದು ಮಾತನಾಡಿರುವ MEA ವಕ್ತಾರ ಜೈಸ್ವಾಲ್​, ಬಾಂಗ್ಲಾದಲ್ಲಿ ಸಂಭವಿಸುತ್ತಿರುವ ಈ ಘಟನೆಗಳು ಕೇವಲ ಮಾಧ್ಯಮ ಉತ್ಪ್ರೇಕ್ಷೆ ಅಥವಾ ಕಟ್ಟುನಿಟ್ಟಾಗಿ ರಾಜಕೀಯ ಹಿಂಸಾಚಾರ ಎಂಬ ಹೇಳಿಕೆಗಳನ್ನು ಜೈಸ್ವಾಲ್ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಅಲ್ಲದೆ, ಈ ದಾಳಿಗಳನ್ನು ಉಗ್ರರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಬೆಂಬಲ

ಈ ನಡುವೆ 17 ವರ್ಷಗಳ ಗಡಿಪಾರಾದ ನಂತರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಮರಳಿದ್ದಾರೆ. ಈ ಅಶಾಂತಿಯ ನಡುವೆಯೂ ಬಾಂಗ್ಲಾದ ರಾಜಕೀಯ ಚಿತ್ರಣ ಬದಲಾಗುತ್ತಿದೆ.
ಬಾಂಗ್ಲಾದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಭಾರತ ಬೆಂಬಲಿಸುತ್ತದೆ. ಅಲ್ಲದೆ, ಈ ಬೆಳವಣಿಗೆಯನ್ನು ವಿರೋಧ ಪಕ್ಷದ ನಾಯಕರ ಮರಳುವಿಕೆ ಆ ಸಂದರ್ಭದಲ್ಲಿ ನೋಡಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
2026 ಫೆಬ್ರವರಿ12 ರಂದು ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಿಗದಿಯಾಗಿವೆ.ಅಲ್ಲದೆ, ಪ್ರಾದೇಶಿಕ ಭದ್ರತೆ, ಪ್ರಜಾಪ್ರಭುತ್ವ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶ ಅತ್ಯಗತ್ಯ ಎಂಬ ತನ್ನ ನಿಲುವನ್ನು ಭಾರತ ಪುನರುಚ್ಚರಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net