ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಶಂಖನಾದ..ನಮೋ ಆಗಮನದೊಂದಿಗೆ ಬದಲಾಗುತ್ತಾ ರಾಜ್ಯದ ರಾಜಕೀಯ ಚಿತ್ರಣ..? | TamilNadu Election

TamilNadu Election | ಪ್ರಧಾನಿ ನರೇಂದ್ರ ಮೋದಿ
TamilNadu Election | ಪ್ರಧಾನಿ ನರೇಂದ್ರ ಮೋದಿ
Published on
ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಎನ್​ಡಿಎ ಮೈತ್ರಿಕೂಟ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಭಾನುವಾರ ತಿಳಿಸಿದ್ದಾರೆ.
ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರನ್​, ಜನವರಿ 23 ರಂದು ಪ್ರಧಾನಿ ಮೋದಿ ಮಧುರಾಂತಕಂನಲ್ಲಿ ಎನ್​ಡಿಎ ಪರ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಪ್ರಸ್ತುತ ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವ ಜನವಿರೋಧಿ ಡಿಎಂಕೆ ಸರ್ಕಾರವನ್ನು ಮನೆಗೆ ಕಳುಹಿಸುವ ಸಭೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎಂದರು.
ಎಐಡಿಎಂಕೆ ಉಚ್ಛಾಟಿತ ನಾಯಕ ಓ ಪನ್ನೀರಸೆಲ್ವಂ, ಟಿಟಿವಿ ದಿನಕರನ್ ನೇತೃತ್ವದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಮತ್ತು ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಎನ್‌ಡಿಎಗೆ ಸೇರ್ಪಡೆಗೊಳ್ಳುವ ಸಾಧ್ಯತೆಯ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರನ್​, ಜನವರಿ 23 ರಂದು ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದ್ದು, ಎಲ್ಲಾ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಎಐಎಡಿಎಂಕೆ ಮಹಿಳೆಯರಿಗೆ ನೀಡುವ ಮಾಸಿಕ ಆರ್ಥಿಕ ನೆರವಿನ ಫೋಟೋಕಾಪಿ ಮಾಡಿದೆ ಎಂದು ಡಿಎಂಕೆ ಆರೋಪಕ್ಕೆ ತಿರುಗೇಟು ನೀಡಿದ ನಾಗೇಂದ್ರನ್​, ಪ್ರಣಾಳಿಕೆಯನ್ನು ನಕಲು ಎಂದು ಕರೆಯಲಾಗುವುದಿಲ್ಲ, ಕಳೆದ ಚುನಾವಣೆಯಲ್ಲಿ 1,500 ರೂ.ಗಳ ಭರವಸೆ ನೀಡಿತ್ತು. ಈಗ ಅವರು ಅದನ್ನು 500 ರೂ.ಗಳಷ್ಟು ಹೆಚ್ಚಿಸಿ 2,000 ರೂ.ಗಳನ್ನು ಘೋಷಿಸಿದ್ದಾರೆ ಎಂದರು.
ಹೊಸೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ ಎಂಬ ವರದಿಗಳನ್ನು ತಿರಸ್ಕರಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಎಲ್ಲಿಯೂ ಅನುಮತಿ ನಿರಾಕರಿಸಲಾಗಿಲ್ಲ. ಕೆಲವು ಸ್ಪಷ್ಟೀಕರಣಗಳನ್ನು ಮಾತ್ರ ಕೇಳಿದ್ದು, ಅದಕ್ಕೆ ನಿರಾಕರಣೆ ಎಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದು ಹೇಳಿದರು. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳ ಜೊತೆಗೆ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net