ಇರಾನ್ ಅಧ್ಯಕ್ಷರೊಂದಿಗೆ ಕೈ ಕೈ ಹಿಡಿದು ಪ್ರಧಾನಿ ಮೋದಿ ವಾಕ್: ಶೃಂಗಸಭೆಯಲ್ಲಿ ಜಾಗತಿಕ ಗಮನ ಸೆಳೆದ ಅಪರೂಪದ ಕ್ಷಣ! | PM Modi Diplomacy

PM Modi Diplomacy | ಇರಾನ್ ಅಧ್ಯಕ್ಷರೊಂದಿಗೆ ಕೈ ಕೈ ಹಿಡಿದು ಪ್ರಧಾನಿ ಮೋದಿ ವಾಕ್
PM Modi Diplomacy | ಇರಾನ್ ಅಧ್ಯಕ್ಷರೊಂದಿಗೆ ಕೈ ಕೈ ಹಿಡಿದು ಪ್ರಧಾನಿ ಮೋದಿ ವಾಕ್
Published on
PM Modi Diplomacy: ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ ಎಂಬ ಮಾತಿದೆ. ಶುಕ್ರವಾರ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂನ ಪ್ರಮುಖ ಫೋಟೋವೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಝೆಶ್ಕಿಯನ್ ಅವರ ಕೈ ಹಿಡಿದುಕೊಂಡು ನಡೆದು ಬರುತ್ತಿರುವುದು ಕಂಡುಬಂದಿದೆ.
ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷರ ಕೈ ಹಿಡಿದು ಫೋರಂನ ಸಭಾಂಗಣಕ್ಕೆ ಕರೆತಂದರು. ಈ ವೇಳೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಅವರ ಜೊತೆಯಲ್ಲಿಯೇ ನಡೆದುಬಂದರು.
ಜಾಗತಿಕ ರಾಜಕೀಯದಲ್ಲಿ ಭಾರತಕ್ಕಿರುವ ವಿಶಿಷ್ಟ ಸ್ಥಾನಮಾನವನ್ನು ಈ ಫೋಟೋ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಒಂದೆಡೆ ರಷ್ಯಾ ಮತ್ತು ಇರಾನ್ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುತ್ತಲೇ, ಇನ್ನೊಂದೆಡೆ ಜಗತ್ತಿನ ಎಲ್ಲಾ ರಾಷ್ಟ್ರಗಳೊಂದಿಗೂ ಸಂವಾದ ಹಾಗೂ ಸಹಕಾರಕ್ಕೆ ಭಾರತ ತನ್ನ ಬಾಗಿಲನ್ನು ತೆರೆದಿಟ್ಟಿದೆ. ಇದರ ಜೊತೆಗೆ, ಬ್ರಿಕ್ಸ್ ಒಕ್ಕೂಟದ ನಾಯಕರು ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಜಾಗತಿಕ ಅಭಿವೃದ್ಧಿಯ ಕುರಿತು ಚರ್ಚಿಸಲು ಒಂದಾಗಿದ್ದಾಗ, ಅವರ ನಡುವಿದ್ದ ಒಗ್ಗಟ್ಟು ಮತ್ತು ಆಪ್ತತೆಯನ್ನು ಈ ಫೋಟೋ ಎತ್ತಿಹಿಡಿದಿದೆ.

ಭಾರತದ ಮುತ್ಸದ್ಧಿತನದ ರಾಜತಾಂತ್ರಿಕತೆ!

ಇಬ್ಬರೂ ನಾಯಕರು ಕೈ ಕೈ ಹಿಡಿದು ನಗುತ್ತಾ ಸಾಗಿದ ಈ ಚಿತ್ರದ ಆತ್ಮೀಯತೆಯು ಭಾರತ ಮತ್ತು ಇರಾನ್ ನಡುವಿನ ಸಂಬಂಧಗಳ ಆಳವನ್ನು ಬಿಂಬಿಸಿತು. ಪೆಝೆಶ್ಕಿಯನ್ ಅಧ್ಯಕ್ಷರಾದ ನಂತರ ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿದ್ದು, ಅಮೆರಿಕಾ ಮತ್ತು ಭಾರತ ಆಯಕಟ್ಟಿನ ಪಾಲುದಾರರಾಗಿದ್ದರೂ ಸಹ, ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಸುದೀರ್ಘವಾಗಿ ನಡೆಯುತ್ತಿರುವ ಯುದ್ಧದ ನಡುವೆಯೇ ಈ ಭೇಟಿ ನಡೆದಿದೆ.
ಉಕ್ರೇನ್ ಹಾಗೂ ಇರಾನ್ ಯುದ್ಧಗಳಂತಹ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಹೊಂದಿರುವ ಮುತ್ಸದ್ಧಿತನದ ರಾಜತಾಂತ್ರಿಕ ನಿಲುವಿಗೆ ಈ ಫೋಟೋ ಸಾಕ್ಷಿಯಾಗಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ತನ್ನ ಮೈತ್ರಿಯನ್ನು ಸರಿದೂಗಿಸಿಕೊಂಡೇ, ಇತ್ತ ರಷ್ಯಾ ಮತ್ತು ಇರಾನ್ ದೇಶಗಳೊಂದಿಗೂ ಭಾರತ ತನ್ನ ಉತ್ತಮ ಬಾಂಧವ್ಯವನ್ನು ಮುಂದುವರಿಸಿಕೊಂಡು ಬಂದಿದೆ. ಇದಾದ ನಂತರ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಕೇವಲ ಎರಡು ವಾರಗಳಲ್ಲಿ ಎರಡನೇ ಬಾರಿಗೆ ಭೇಟಿಯಾದ ಇಬ್ಬರೂ ನಾಯಕರು, ಭಾರತ-ಇರಾನ್ ಸಂಬಂಧ ಹಾಗೂ ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ಕುರಿತು ಪ್ರಮುಖವಾಗಿ ಚರ್ಚಿಸಿದರು.
ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಶಾಶ್ವತ ಪರಿಹಾರಕ್ಕಾಗಿ, ಭಾರತವು ಸಂವಾದ ಮತ್ತು ರಾಜತಾಂತ್ರಿಕತೆಯೇ ಮುಂದಿರುವ ದಾರಿ ಎಂದು ದೃಢವಾಗಿ ಪ್ರತಿಪಾದಿಸಿದೆ. ಇಂಧನ ಭದ್ರತೆಯು ಪ್ರಮುಖ ಕಳಕಳಿಯಾಗಿದೆ ಎಂದು ಹೇಳಿರುವ ಭಾರತ, ಸರಕು ಪೂರೈಸುವ ಹಡಗುಗಳಿಗೆ ಸುರಕ್ಷಿತ ಸಂಚಾರದ ಮಾರ್ಗ ಒದಗಿಸುವಂತೆ ಕರೆ ನೀಡಿದೆ. ಸಭೆಯ ಬೆನ್ನಲ್ಲೇ, ಪ್ರಧಾನಿ ಮೋದಿ ಅವರು ಪೆಝೆಶ್ಕಿಯನ್ ಅವರ ಭಾರತ ಭೇಟಿಯನ್ನು ಅವರ ಮೊದಲ ಭೇಟಿಯಾಗಿರುವುದರಿಂದ ಇದು ಇನ್ನಷ್ಟು ವಿಶೇಷವಾಗಿದೆ ಎಂದು ಬಣ್ಣಿಸಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ನಾವು ಭಾರತ-ಇರಾನ್ ಸ್ನೇಹದ ಕುರಿತು ಮಾತನಾಡಿದ್ದೇವೆ. ನಾವು ದೀರ್ಘಕಾಲೀನ ಮತ್ತು ಪರಸ್ಪರ ಲಾಭದಾಯಕ ತಂತ್ರದೊಂದಿಗೆ ಮುಂದೆ ಸಾಗಬೇಕು ಎಂದು ಭಾವಿಸುತ್ತೇವೆ. ಈ ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಲಾಗಿದೆ. ಶಾಶ್ವತ ಶಾಂತಿಯ ಅನ್ವೇಷಣೆಯ ಕಡೆಗೆ ಭಾರತವು ತನ್ನ ಬದ್ಧತೆಯಲ್ಲಿ ದೃಢವಾಗಿದೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net