ಶಬರಿಮಲೆ ದೇವಾಲಯ ಸೇರಿ ಪೂಜಾ ಸ್ಥಳಗಳಿಗೆ ಮಹಿಳೆಯರ ಪ್ರವೇಶ; 9 ಸದಸ್ಯರ ಸಂವಿಧಾನ ಪೀಠ ರಚಿಸಿದ ಸುಪ್ರೀಂಕೋರ್ಟ್ | Supreme Court

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Published on
ನವದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನ ಸೇರಿದಂತೆ ದೇಶದ ಹಲವು ಪೂಜಾ ಸ್ಥಳಗಳಿಗೆ ಮಹಿಳೆಯರ ಪ್ರವೇಶದ ವಿಷಯದ ಅಂತಿಮ ವಿಚಾರಣೆಗಾಗಿ ಶೀಘ್ರದಲ್ಲೇ 9 ಸದಸ್ಯರ ಸಂವಿಧಾನ ಪೀಠ ರಚಿಸಲಾಗುವುದು ಎಂದು ಸೋಮವಾರ(ಫೆ. 16) ಸುಪ್ರೀಂಕೋರ್ಟ್(Supreme Court) ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಸಿಜೆಐ ಸೂರ್ಯಕಾಂತ್, ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ತೀರ್ಪನ್ನು ಸುಪ್ರೀಂ ಕೋರ್ಟ್ ಮರು ಪರಿಶೀಲಿಸಲಿದೆ. ತೀರ್ಪಿನ ಪರವಾಗಿ ಮತ್ತು ಕೆಲವು ವಿರುದ್ಧವಾಗಿ ಅರ್ಜಿಗಳು ಸಲ್ಲಿಕೆಯಾಗಿವೆ. ಇವೆಲ್ಲವನ್ನೂ ಆಲಿಸಲು 9 ಸದಸ್ಯರ ಸಂವಿಧಾನ ಪೀಠವನ್ನು ರಚಿಸಲಾಗುವುದು ಎಂದಿದ್ದಾರೆ.
ಏಪ್ರಿಲ್ 7 ರಂದು ವಾದಗಳು ಪ್ರಾರಂಭವಾಗಿ 22 ರಂದು ಕೊನೆಗೊಳ್ಳಲಿವೆ. ಮಾರ್ಚ್ 14 ರೊಳಗೆ ಲಿಖಿತ ವಾದಗಳನ್ನು ಸಲ್ಲಿಸಬೇಕಾಗುತ್ತದೆ. ತೀರ್ಪನ್ನು ಪರಿಶೀಲಿಸಲು ಕೋರುವ ಪಕ್ಷಗಳಿಗೆ ವಕೀಲ ಕೃಷ್ಣ ಕುಮಾರ್ ಸಿಂಗ್ ನೋಡಲ್ ವಕೀಲರಾಗಿ ಕಾರ್ಯನಿರ್ವಹಿಸುತ್ತಾರೆ. ಮತ್ತು ಅದನ್ನು ವಿರೋಧಿಸುವವರಿಗೆ ವಕೀಲ ಶಾಶ್ವತಿ ಪರಿ ನೋಡಲ್ ವಕೀಲರಾಗಿ ಕಾರ್ಯನಿರ್ವಹಿಸುತ್ತಾರೆ. ಹಿರಿಯ ವಕೀಲ ಕೆ. ಪರಮೇಶ್ವರ್ ಮತ್ತು ವಕೀಲ ಶಿವಂ ಸಿಂಗ್ ನ್ಯಾಯಾಲಯದ ಸ್ನೇಹಿತರಂತೆ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ವಿವಿಧ ಆಚರಣೆಗಳ ಹಿಂದಿನ ಧಾರ್ಮಿಕ ಸ್ವಾತಂತ್ರ್ಯದ ವಿಷಯವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ ಎನ್ನಲಾಗಿದೆ. 2018ರಲ್ಲಿ ಐದು ನ್ಯಾಯಾಧೀಶರ ಸಂವಿಧಾನ ಪೀಠವು 4:1 ಬಹುಮತದೊಂದಿಗೆ ಶಬರಿಮಲೆಯಲ್ಲಿ 10-50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿ ಐತಿಹಾಸಿಕ ತೀರ್ಪು ನೀಡಿತು. 
2019ರಲ್ಲಿ ಮತ್ತೊಂದು ಐದು ನ್ಯಾಯಾಧೀಶರ ಪೀಠವು ಪೂಜಾ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯದ ವಿಷಯವನ್ನು ದೊಡ್ಡ ಪೀಠ ವಿಚಾರಣೆ ನಡೆಸಬೇಕು ಎಂದು ಉಲ್ಲೇಖಿಸಿತು. ಅದರಲ್ಲಿ ಮಸೀದಿಗಳು ಮತ್ತು ದರ್ಗಾಗಳಿಗೆ ಮಹಿಳೆಯರ ಪ್ರವೇಶ ಮತ್ತು ಪಾರ್ಸಿ ಮಹಿಳೆಯರ ಸಮಸ್ಯೆಗಳು ಸೇರಿವೆ. 2020ರಲ್ಲಿ ಮತ್ತೊಂದು ಪೀಠ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಆದಾಗ್ಯೂ ಕೊರೊನಾ ಸಮಸ್ಯೆ, ಮತ್ತಿತರ ಕಾರಣಗಳಿಂದ ಪೀಠ ರಚನೆಯಾಗಿರಲಿಲ್ಲ. ಈಗ 9 ಸದಸ್ಯರ ಸಂವಿಧಾನ ಪೀಠ ರಚನೆಯಾಗಲಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net