ಪಾಕ್ ಸೇನಾ ಮುಖ್ಯಸ್ಥನ ಡಬಲ್ ಗೇಮ್; ಇರಾನ್ ಎದುರು ಸೈನಿಕ, ಅಮೆರಿಕ ಎದುರು ರಾಜತಾಂತ್ರಿಕ! ಅಸಿಮ್ ಮುನೀರ್ ವೇಷ ಬದಲಾವಣೆಯ ರಹಸ್ಯವೇನು? Asim Munir

ಪಾಕ್ ಸೇನಾ ಮುಖ್ಯಸ್ಥನ ಡಬಲ್ ಗೇಮ್; ಇರಾನ್ ಎದುರು ಸೈನಿಕ, ಅಮೆರಿಕ ಎದುರು ರಾಜತಾಂತ್ರಿಕ! ಅಸಿಮ್ ಮುನೀರ್ ವೇಷ ಬದಲಾವಣೆಯ ರಹಸ್ಯವೇನು?
ಪಾಕ್ ಸೇನಾ ಮುಖ್ಯಸ್ಥನ ಡಬಲ್ ಗೇಮ್; ಇರಾನ್ ಎದುರು ಸೈನಿಕ, ಅಮೆರಿಕ ಎದುರು ರಾಜತಾಂತ್ರಿಕ! ಅಸಿಮ್ ಮುನೀರ್ ವೇಷ ಬದಲಾವಣೆಯ ರಹಸ್ಯವೇನು?
Published on
ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಇಸ್ಲಾಮಾಬಾದ್ ಮಾತುಕತೆ ಕೇವಲ ಜಾಗತಿಕ ರಾಜಕಾರಣಕ್ಕೆ ಮಾತ್ರವಲ್ಲ, ಪಾಕಿಸ್ತಾನದ ಆಂತರಿಕ ಅಧಿಕಾರ ಪ್ರದರ್ಶನಕ್ಕೂ ಸಾಕ್ಷಿಯಾಯಿತು. ಇಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗಿಂತ ಹೆಚ್ಚಾಗಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್(Asim Munir) ಸುದ್ದಿಯ ಕೇಂದ್ರಬಿಂದುವಾದರು. ವಿಶೇಷವಾಗಿ, ಇರಾನ್ ಮತ್ತು ಅಮೆರಿಕದ ನಿಯೋಗಗಳನ್ನು ಬರಮಾಡಿಕೊಳ್ಳುವಾಗ ಮುನೀರ್ ಧರಿಸಿದ್ದ ಉಡುಪುಗಳು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಮತ್ತು ವಿಶ್ಲೇಷಣೆಗೆ ಕಾರಣವಾಗಿವೆ.
ಇಸ್ಲಾಮಾಬಾದ್‌ನ ನೂರ್ ಖಾನ್ ವಾಯುನೆಲೆಯಲ್ಲಿ ನಡೆದ ಈ ಹೈ-ಪ್ರೊಫೈಲ್ ಸ್ವಾಗತ ಸಮಾರಂಭವು ಪಾಕಿಸ್ತಾನದ ಅಸಲಿ ಬಾಸ್ ಯಾರು ಎಂಬುದನ್ನು ಜಗತ್ತಿಗೆ ಸಾರುವಂತಿದೆ.

ಇರಾನ್ ಎದುರು ಕಾಂಬ್ಯಾಟ್ ಗೇರ್: ಗುರಿ ಏನು..?

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ನೇತೃತ್ವದ 71 ಸದಸ್ಯರ ನಿಯೋಗವನ್ನು ಸ್ವಾಗತಿಸುವಾಗ ಅಸಿಮ್ ಮುನೀರ್ ಸೇನೆಯ ಅಧಿಕೃತ ಕಾಂಬ್ಯಾಟ್ ಯುನಿಫಾರ್ಮ್ ಧರಿಸಿದ್ದಾರೆ.
ತಜ್ಞರ ವಿಶ್ಲೇಷಣೆ: ರಕ್ಷಣಾ ತಜ್ಞ ಸಂದೀಪ್ ಉನ್ನಿತಾನ್ ಅವರ ಪ್ರಕಾರ, ಇದು ಇರಾನ್‌ಗೆ ನೀಡಿದ ನೇರ ಎಚ್ಚರಿಕೆಯ ಸಂದೇಶವಾಗಿದೆ. 2024ರಲ್ಲಿ ಇರಾನ್ ಮತ್ತು ಪಾಕಿಸ್ತಾನ ಪರಸ್ಪರ ಕ್ಷಿಪಣಿ ದಾಳಿ ನಡೆಸಿದ್ದವು. ಗಡಿ ಬಿಕ್ಕಟ್ಟು ಇನ್ನೂ ಜೀವಂತವಾಗಿದೆ. ನಾನು ನಿಮ್ಮನ್ನು ಓರ್ವ ಸೇನಾ ನಾಯಕನಾಗಿ ಎದುರಿಸುತ್ತಿದ್ದೇನೆ ಎಂಬ ಶಕ್ತಿ ಪ್ರದರ್ಶನವನ್ನು ಮುನೀರ್ ಈ ಮೂಲಕ ಮಾಡಿದ್ದಾರೆ. ಇರಾನ್ ಎದುರು ತಾನು ಕೇವಲ ರಾಜತಾಂತ್ರಿಕನಲ್ಲ, ಯುದ್ಧಕ್ಕೆ ಸಿದ್ಧವಿರುವ ಸೈನಿಕ ಎಂಬುದನ್ನು ಬಿಂಬಿಸಿದ್ದಾರೆ.

ಜೆಡಿ ವ್ಯಾನ್ಸ್ ಎದುರು ಕೋಟ್-ಸೂಟ್': ರಾಜತಾಂತ್ರಿಕ ಮುಖವಾಡ!

ಆದರೆ, ಕೆಲವೇ ಗಂಟೆಗಳ ನಂತರ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಳಿದಾಗ ಅಸಿಮ್ ಮುನೀರ್ ಅವರ ನೋಟ ಸಂಪೂರ್ಣ ಬದಲಾಗಿತ್ತು. ಸೈನಿಕನ ಉಡುಪು ಕಳಚಿ, ಅತ್ಯಾಧುನಿಕ ಬ್ಲ್ಯಾಕ್ ಸೂಟ್ ಧರಿಸಿ ಮಿಂಚಿದ್ಧಾರೆ.

ಇದರ ಹಿಂದಿನ ಉದ್ದೇಶ

ಅಮೆರಿಕದ ಎದುರು ಮುನೀರ್ ತನ್ನನ್ನು ಓರ್ವ ಸ್ಟೇಟ್ಸ್‌ಮನ್ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಮುನೀರ್ ಅವರನ್ನು ನನ್ನ ಫೇವರಿಟ್ ಫೀಲ್ಡ್ ಮಾರ್ಷಲ್ ಎಂದು ಕರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಅಮೆರಿಕದ ಎದುರು ತಾವು ಕೇವಲ ಸಲ್ಯೂಟ್ ಹೊಡೆಯುವ ಜನರಲ್ ಅಲ್ಲ, ಬದಲಿಗೆ ದೇಶದ ನೀತಿಗಳನ್ನು ನಿರ್ಧರಿಸುವ ರಾಜತಾಂತ್ರಿಕ ನಾಯಕ ಎಂದು ತೋರಿಸಿಕೊಳ್ಳುವುದು ಉದ್ದೇಶವಾಗಿತ್ತು. ಇದು ಅವರ ರಾಜಕೀಯ ಮಹತ್ವಾಕಾಂಕ್ಷೆಯನ್ನು ಎತ್ತಿ ತೋರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರೋಟೋಕಾಲ್ ಉಲ್ಲಂಘನೆ: ಪ್ರಧಾನಿ ಎಲ್ಲಿ..?

ಸಾಮಾನ್ಯವಾಗಿ ವಿದೇಶಿ ಉಪಾಧ್ಯಕ್ಷರು ಅಥವಾ ಮಂತ್ರಿಗಳು ಬಂದಾಗ ಪ್ರೋಟೋಕಾಲ್ ಪ್ರಕಾರ ದೇಶದ ಅಧ್ಯಕ್ಷರು, ಪ್ರಧಾನಿ ಅಥವಾ ವಿದೇಶಾಂಗ ಸಚಿವರು ಬರಮಾಡಿಕೊಳ್ಳಬೇಕು. ಆದರೆ ಇಲ್ಲಿ ಎಲ್ಲವನ್ನೂ ಮೀರಿ ಅಸಿಮ್ ಮುನೀರ್ ಅವರೇ ರೆಡ್ ಕಾರ್ಪೆಟ್ ಮೇಲೆ ಜೆಡಿ ವ್ಯಾನ್ಸ್ ಜೊತೆ ಹೆಜ್ಜೆ ಹಾಕಿದ್ದಾರೆ.

ಹಳೆಯ ನೆನಪು

ಇದು ಪಾಕಿಸ್ತಾನದ ಹಳೆಯ ಸರ್ವಾಧಿಕಾರಿಗಳಾದ ಜನರಲ್ ಜಿಯಾ-ಉಲ್-ಹಕ್ ಅಥವಾ ಪರ್ವೇಜ್ ಮುಷರಫ್ ಅವರ ಕಾಲವನ್ನು ನೆನಪಿಸುತ್ತಿದೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದ್ದರೂ, ಅಸಲಿ ಅಧಿಕಾರ ಇರುವುದು ಸೇನಾ ಪ್ರಧಾನ ಕಚೇರಿಯಲ್ಲಿ ಎಂಬುದನ್ನು ಮುನೀರ್ ಜಗತ್ತಿಗೆ ಸಾರಿದ್ದಾರೆ.

ಅಮೆರಿಕದ ಚಾಣಾಕ್ಷ ನಡೆ

ಅತ್ತ ಅಮೆರಿಕ ಕೂಡ ಪಾಕಿಸ್ತಾನದ ಈ ದ್ವಂದ್ವ ಆಡಳಿತವನ್ನು ಚೆನ್ನಾಗಿ ಬಲ್ಲದು. ಜೆಡಿ ವ್ಯಾನ್ಸ್ ಅವರು ಅಸಿಮ್ ಮುನೀರ್ ಜೊತೆ ನಗುತ್ತಾ ಮಾತನಾಡುತ್ತಲೇ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾನ್ ದಾರ್ ಅವರ ಬೆನ್ನು ತಟ್ಟುವ ಮೂಲಕ ನಾಗರಿಕ ಸರ್ಕಾರಕ್ಕೂ ನಾವು ಮನ್ನಣೆ ನೀಡುತ್ತೇವೆ ಎಂಬ ಸೂಕ್ಷ್ಮ ಸಂದೇಶ ರವಾನಿಸಿದ್ದಾರೆ.
ಅಸಿಮ್ ಮುನೀರ್ ಈ ಇಸ್ಲಾಮಾಬಾದ್ ಮಾತುಕತೆಯನ್ನು ತನ್ನ ವೈಯಕ್ತಿಕ ಪ್ರಚಾರಕ್ಕಾಗಿ ಮತ್ತು ಪಾಕಿಸ್ತಾನದ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಇರಾನ್ ಮತ್ತು ಅಮೆರಿಕದ ನಡುವಿನ ಸಂಧಾನದ ನಡುವೆ, ಮುನೀರ್ ತಾನೇ ಈ ಪ್ರದೇಶದ ಅತಿ ಮುಖ್ಯ ವ್ಯಕ್ತಿ ಎಂಬುದನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net