ಪಾಕಿಸ್ತಾನ ಸರ್ವನಾಶ ಆಗೋಕೆ ಭಾರತ ಕಾರಣ ಅಲ್ಲ!...ಪಾಕ್‌ನ ಅಸಲಿ ವಿಲನ್ ಹೆಸರು ಬಹಿರಂಗಪಡಿಸಿದ ಸಿಂಗಾಪುರ ಮಾಜಿ ರಾಯಭಾರಿ! | Bilahari Kausikan
Bilahari Kausikan | ಪಾಕಿಸ್ತಾನ ಸರ್ವನಾಶ ಆಗೋಕೆ ಭಾರತ ಕಾರಣ ಅಲ್ಲ!...ಪಾಕ್‌ನ ಅಸಲಿ ವಿಲನ್ ಹೆಸರು ಬಹಿರಂಗಪಡಿಸಿದ ಸಿಂಗಾಪುರ ಮಾಜಿ ರಾಯಭಾರಿ ಬಿಲಹರಿ ಕೌಶಿಕನ್
Published on:
Copied
Follow Us
Bilahari Kausikan: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ತನ್ನ ಇಮೇಜ್ ಅನ್ನು ಸುಧಾರಿಸಿಕೊಂಡಿರಬಹುದು. ಆದರೆ, ದೇಶದ ಒಳಗಿನ ಭೀಕರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಅದರಿಂದ ಸಾಧ್ಯವಾಗಿಲ್ಲ ಎಂದು ಸಿಂಗಾಪುರದ ಮಾಜಿ ರಾಯಭಾರಿ ಬಿಲಹರಿ ಕೌಶಿಕನ್ ಕಟುವಾಗಿ ಟೀಕಿಸಿದ್ದಾರೆ.
ಜಾಗತಿಕ ಸಮ್ಮೇಳನವೊಂದರಲ್ಲಿ ಮಾತನಾಡಿದ ಬಿಲಹರಿ ಕೌಶಿಕನ್, ಪಾಕಿಸ್ತಾನವು ಸದ್ಯ ಸಂಪೂರ್ಣವಾಗಿ ನಾಶದ ಅಂಚಿನಲ್ಲಿದ್ದು, ಅದರ ಇಂದಿನ ದುಸ್ಥಿತಿಗೆ ಭಾರತ ಅಥವಾ ಅಫ್ಘಾನಿಸ್ತಾನ ಕಾರಣವಲ್ಲ, ಬದಲಿಗೆ ಅಲ್ಲಿನ ಭ್ರಷ್ಟ ರಾಜಕಾರಣಿಗಳು ಮತ್ತು ಸೇನೆಯೇ ಮೂಲ ಕಾರಣ ಎಂದು ಹೇಳಿದ್ದಾರೆ.
ರಾಜತಾಂತ್ರಿಕ ಜಾಣ್ಮೆ ದೇಶದ ಜನರ ಹಸಿವು ನೀಗಿಸುವುದಿಲ್ಲ!
ಕಳೆದ ತಿಂಗಳು ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಂತರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿತ್ತು. ಇದರಿಂದಾಗಿ ಅಮೆರಿಕದ ದೃಷ್ಟಿಯಲ್ಲಿ ಪಾಕಿಸ್ತಾನಕ್ಕೆ ಸ್ವಲ್ಪ ರಾಜತಾಂತ್ರಿಕ ಮನ್ನಣೆ ಸಿಕ್ಕಿರುವುದು ನಿಜ ಎಂದು ಒಪ್ಪಿಕೊಂಡ ಕೌಶಿಕನ್, ಅದರ ಬೆನ್ನಲ್ಲೇ ಪಾಕ್ ಪರಿಸ್ಥಿತಿಯನ್ನು ಅಣಕಿಸಿದರು. ಪಾಕಿಸ್ತಾನ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದೆ. ಆದರೆ ನೆನಪಿಡಿ, ಈ ರಾಜತಾಂತ್ರಿಕ ಯಶಸ್ಸು ಪಾಕಿಸ್ತಾನದ ಜನರ ಹಸಿವನ್ನು ನೀಗಿಸುವುದಿಲ್ಲ ಎಂದು ಅಲ್ಲಿನ ಆರ್ಥಿಕ ಬಿಕ್ಕಟ್ಟಿನ ಕುರಿತು ವ್ಯಂಗ್ಯವಾಡಿದ್ದಾರೆ.
ಪಾಕಿಸ್ತಾನ ಸದ್ಯ ಸಾಲ ತೀರಿಸಲು ವಿಶ್ವಬ್ಯಾಂಕ್ ಮತ್ತು ಐಎಂಎಫ್ (IMF) ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಬೇಲ್‌ಔಟ್ ಪ್ಯಾಕೇಜ್‌ಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ದಿ ಡಾನ್ ಪತ್ರಿಕೆಯ ವರದಿಯ ಪ್ರಕಾರ, ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಆಹಾರದ ಕೊರತೆ ಎದುರಿಸುತ್ತಿರುವ ಮೊದಲ 10 ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಇದೆ ಎಂದು ಕೌಶಿಕನ್ ತಿಳಿಸಿದ್ದಾರೆ.
ಅಮೆರಿಕಾ ತನ್ನ ನಿರ್ಬಂಧಗಳನ್ನು ತೆಗೆಯುವುದಿಲ್ಲ!
ಪಾಕಿಸ್ತಾನದ ಈ ರಾಜತಾಂತ್ರಿಕ ಯಶಸ್ಸಿನಿಂದಾಗಿ ಅಮೆರಿಕದೊಂದಿಗಿನ ಅದರ ಸಂಬಂಧ ದೀರ್ಘಾವಧಿಯಲ್ಲಿ ಸಂಪೂರ್ಣವಾಗಿ ಬದಲಾಗುವುದರ ಬಗ್ಗೆ ಮಾತನಾಡಿರುವ ಕೌಶಿಕನ್, ಅಮೆರಿಕವು ಪಾಕ್ ಮೇಲಿನ ತನ್ನ ಎಲ್ಲಾ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ. ಸಮ್ಮೇಳನದ ವೇಳೆ ಪಾಕಿಸ್ತಾನಿ ಪತ್ರಕರ್ತರೊಬ್ಬರು, ನಮ್ಮ ದೇಶದ ಎಲ್ಲಾ ಸಮಸ್ಯೆಗಳಿಗೆ ಭಾರತ ಮತ್ತು ಅಫ್ಘಾನಿಸ್ತಾನದೊಂದಿಗಿನ ಗಡಿ ವಿವಾದವೇ ಕಾರಣ ಎಂದು ಎಂದಿನಂತೆ ವಿಕ್ಟಿಮ್ ಕಾರ್ಡ್ ಪ್ರದರ್ಶಿಸಲು ಯತ್ನಿಸಿದರು. ಆದರೆ ಹಿರಿಯ ರಾಜತಾಂತ್ರಿಕ ಕೌಶಿಕನ್ ಇದನ್ನು ತಕ್ಷಣವೇ ಅಲ್ಲಗಳೆದರು.
ಎಲ್ಲದಕ್ಕೂ ಗಡಿಯನ್ನೇ ಬೊಟ್ಟು ಮಾಡಿ ತೋರಿಸುವುದು ಕೇವಲ ಒಂದು ನೆಪವಷ್ಟೇ. ಆರಂಭದಿಂದಲೂ ಪಾಕಿಸ್ತಾನವನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಲಾಗಿದೆ. ಇದಕ್ಕೆ ಬೇರೆ ಯಾವುದೇ ಹೊರಗಿನ ಕಾರಣಗಳಿಲ್ಲ. ನಿಮ್ಮ ದೇಶದ ರಾಜಕಾರಣಿಗಳು ಸಂಪೂರ್ಣವಾಗಿ ವೇಸ್ಟ್ ಆಫ್ ಟೈಮ್, ಯಾವುದೇ ಪಕ್ಷ ಇರಲಿ ಅವರೆಲ್ಲರೂ ಅಷ್ಟೇ. ಇನ್ನು ಅಲ್ಲಿನ ಮಿಲಿಟರಿ (ಸೇನೆ) ಇದೇ ಸಮಸ್ಯೆಯ ಅತಿ ದೊಡ್ಡ ಭಾಗವಾಗಿದೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ(ಏಜೆನ್ಸೀಸ್).