ಇಂಡೋ-ಪಾಕ್ ದ್ವಿಪಕ್ಷೀಯ ವಿಚಾರದಲ್ಲಿ ಮೂರನೇ ವ್ಯಕ್ತಿಗೆ ಜಾಗವಿಲ್ಲ...ಚೀನಾದ ಮಧ್ಯಸ್ಥಿಕೆ ನಾಟಕಕ್ಕೆ ಬ್ರೇಕ್​ ಹಾಕಿದ ಭಾರತ | India-Pak Truce Claim

 India-Pak Truce Claimm | ಪ್ರಧಾನಿ ನರೇಂದ್ರ ಮೋದಿ ( ಸಾಂದರ್ಭಿಕ ಚಿತ್ರ )
India-Pak Truce Claimm | ಪ್ರಧಾನಿ ನರೇಂದ್ರ ಮೋದಿ ( ಸಾಂದರ್ಭಿಕ ಚಿತ್ರ )
Published on
ದೆಹಲಿ: ಈ ವರ್ಷದ ಮೇ ನಲ್ಲಿ ನಡೆದ ಭಾರತ ಮತ್ತು ಪಾಕ್​ ಮಿಲಿಟರಿ ಸಂಘರ್ಷದ ( India-Pak Truce Claim) ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ ಎಂಬ ಚೀನಾದ ಹೇಳಿಕೆಯನ್ನು ಭಾರತ ತಳ್ಳಿಹಾಕಿದ್ದು, ಕದನ ವಿರಾಮ ನಿರ್ಧಾರದಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ಪುನರುಚ್ಚರಿಸಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಮೇ 10 ರಂದು ನಡೆದ ಕದನ ವಿರಾಮದ ನಿರ್ಧಾರವನ್ನು, ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ನೇರ ಮಾತುಕತೆಯ ನಂತರವೇ ತೆಗೆದುಕೊಳ್ಳಲಾಗಿದೆ ಎಂದು ಭಾರತ ನಿರಂತರವಾಗಿ ಹೇಳಿಕೊಳ್ಳುತ್ತಲೇ ಬಂದಿದೆ.
ನಾವು ಈಗಾಗಲೇ ಈ ರೀತಿಯ ಹೇಳಿಕೆಗಳನ್ನು ನಿರಾಕರಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯಗಳಲ್ಲಿ, ಮೂರನೇ ವ್ಯಕ್ತಿಗೆ ಯಾವುದೇ ಪಾತ್ರವಿಲ್ಲ. ಭಾರತ-ಪಾಕಿಸ್ತಾನ ಕದನ ವಿರಾಮವನ್ನು ಎರಡೂ ದೇಶಗಳ ಡಿಜಿಎಂಒಗಳು ನೇರವಾಗಿ ಒಪ್ಪಿಕೊಂಡಿದ್ದಾರೆ ಎಂಬ ನಮ್ಮ ನಿಲುವನ್ನು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

ಏನಿದು ಹೊಸ ವಿವಾದ..?

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಡೊನಾಲ್ಡ್ ಟ್ರಂಪ್​​ರನ್ನು ಟೀಕಿಸಿ, ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಸೇರಿದಂತೆ ಹಲವಾರು ಜಾಗತಿಕ ಸಂಘರ್ಷಗಳಿಗೆ ಬೀಜಿಂಗ್ ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿಕೊಂಡ ನಂತರ ಈ ಹೊಸ ವಿವಾದ ಬುಗಿಲೆದ್ದಿದೆ.

ಚೀನಾ ಹೇಳಿದ್ದೇನು..?

ಚೀನಾದ ವಿದೇಶಾಂಗ ಸಂಬಂಧಗಳ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದ ವಾಂಗ್ ಯಿ, ಎರಡನೇ ಮಹಾಯುದ್ಧದ ಬಳಿಕ ಈ ವರ್ಷ ಹೆಚ್ಚಾಗಿ ಸ್ಥಳೀಯ ಯುದ್ಧಗಳು ಮತ್ತು ಗಡಿಯಾಚೆಗಿನ ಘರ್ಷಣೆಗಳು ಭುಗಿಲೆದ್ದವು. ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಹರಡುತ್ತಲೇ ಇತ್ತು, ಶಾಶ್ವತ ಶಾಂತಿಯನ್ನು ನಿರ್ಮಿಸುವ ಸಲುವಾಗಿ ಚೀನಾ ವಸ್ತುನಿಷ್ಠ ಮತ್ತು ತಟಸ್ಥ ನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಚೀನಾದ ಈ ವಿಧಾನವನ್ನು ಅನುಸರಿಸಿ, ನಾವು ಉತ್ತರ ಮ್ಯಾನ್ಮಾರ್, ಇರಾನಿನ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆ, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವರು ಹೇಳಿಕೊಂಡಿದ್ದಾರೆ.

ಕ್ರೆಡಿಟ್ ವಾರ್‌ ಸರತಿ ಸಾಲಿನಲ್ಲೀಗ ಚೀನಾ...

ಈ ವರ್ಷದ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷವನ್ನು ನಿಲ್ಲಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನೇಕ ಬಾರಿ ಹೇಳಿಕೊಂಡಿದ್ದು, ಇದನ್ನು ಭಾರತ ತಿರಸ್ಕರಿಸುತ್ತಲೇ ಬಂದಿದೆ. ಸದ್ಯ ಇದು ಚೀನಾದ ಮೊದಲ ಹೇಳಿಕೆಯಾಗಿದ್ದು, ಈ ರೀತಿಯ ಹೇಳಿಕೆಗಳಿಗೆ ಲಗಾಮು ಹಾಕದೆ ಹೋದರೆ, ಬೇರೆ ದೇಶಗಳು ಕೂಡ ಚೀನಾ ಮತ್ತು ಅಮೇರಿಕಾವನ್ನು ಅನುಸರಿಸುವುದರಲ್ಲಿ ಅನುಮಾನವಿಲ್ಲ.
ಚೀನಾದ ಈ ಹೇಳಿಕೆಯು ಬೂಟಾಟಿಕೆಯಾಗಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಚೀನಾ, ಪಾಕ್​ನೊಂದಿಗೆ ದೃಢವಾಗಿ ನಿಂತಿತ್ತು ಎನ್ನುವುದನ್ನು ಗಮನಿಸಬೇಕು. ಭಾರತ ಪಾಕಿಸ್ತಾನದೊಳಗಿನ 11 ಸೇನಾ ನೆಲೆಗಳ ಮೇಲೆ ದಾಳಿ ಮಾಡಿದಾಗ ಚೀನಾದ ವಾಯು ರಕ್ಷಣಾ ವ್ಯವಸ್ಥೆಗಳು ಸಹ ಕುಸಿದವು ಎಂಬುದು ಬೇರೆ ವಿಷಯ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನ ಅಮಾಯಕರು ಪ್ರಾಣ ಕಳೆದುಕೊಂಡರು. ಇದಾದ ಬಳಿಕ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಿಲಿಟರಿ ಸಂಘರ್ಷ ಏರ್ಪಟ್ಟು, ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net