'ಆಪರೇಷನ್ ಟೈಗರ್' ಈಗ ಶುರುವಾಗಿದ್ದಲ್ಲ!...ಉದ್ಧವ್ ಸೇನೆಗೆ ಶಿಂಧೆ ಕೊಟ್ಟ ಆ ಬಿಗ್ ಶಾಕ್‌ನ ಇಂಚಿಂಚು ಮಾಹಿತಿ ಇಲ್ಲಿದೆ | Operation Tiger

Operation Tiger | 'ಆಪರೇಷನ್ ಟೈಗರ್' ಈಗ ಶುರುವಾಗಿದ್ದಲ್ಲ!
Operation Tiger | 'ಆಪರೇಷನ್ ಟೈಗರ್' ಈಗ ಶುರುವಾಗಿದ್ದಲ್ಲ!
Published on
Operation Tiger: ಮಹಾರಾಷ್ಟ್ರ ರಾಜಕಾರಣದ ಬಿಸಿಬಿಸಿ ಚರ್ಚೆ ಎಂದರೆ ಅದುವೇ ಆಪರೇಷನ್ ಟೈಗರ್. ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ಸರಣಿ ಆಘಾತ ನೀಡಿ, ಅವರ ಸಂಸದರನ್ನು ಮತ್ತು ಪ್ರಮುಖ ನಾಯಕರನ್ನು ತನ್ನತ್ತ ಸೆಳೆಯಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಡೆಸುತ್ತಿರುವ ಈ ಗುಪ್ತ ರಾಜಕೀಯ ಕಾರ್ಯಾಚರಣೆಗೆ ರಾಜಕೀಯ ವಲಯದಲ್ಲಿ ಈ ಹೆಸರು ಇಡಲಾಗಿದೆ.
ಇತ್ತೀಚೆಗೆ ದೆಹಲಿ ಮಟ್ಟದಲ್ಲಿ ಉದ್ಧವ್ ಬಣದ 9 ಲೋಕಸಭಾ ಸಂಸದರ ಪೈಕಿ 6 ಪ್ರಮುಖ ಸಂಸದರು ಏಕನಾಥ್ ಶಿಂಧೆ ಪಾಳಯಕ್ಕೆ ಜಿಗಿಯಲು ಸಿದ್ಧತೆ ನಡೆಸಿದ್ದು ಇಡೀ ದೇಶದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ, ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ದಿಢೀರ್ ಎಂದು ನಡೆದ ಬೆಳವಣಿಗೆಯಲ್ಲ. ಶಿಂಧೆ ಕಳೆದ ಹಲವು ತಿಂಗಳುಗಳಿಂದ ಮಾಧ್ಯಮಗಳ ಕಣ್ಣಿಗೆ ಬೀಳದಂತೆ ತೆರೆಮರೆಯಲ್ಲಿ ಸಣ್ಣ ಸಣ್ಣ ನಾಯಕರನ್ನು ಸೆಳೆಯುವ ಮೂಲಕ ಈ ಆಪರೇಷನ್ ಟೈಗರ್​ಗೆ ಮುನ್ನುಡಿ ಬರೆದಿದ್ದರು. ದೆಹಲಿಯಲ್ಲಿ ನಡೆದ ಸಂಸದರ ಪಕ್ಷಾಂತರ ಕೇವಲ ಒಂದು ಪ್ರಮುಖ ಹಂತವಷ್ಟೇ, ಇದು ಇಷ್ಟಕ್ಕೇ ನಿಲ್ಲುವುದಿಲ್ಲ ಎನ್ನಲಾಗುತ್ತಿದೆ.

ಉದ್ಧವ್ ಪಾಳಯಕ್ಕೆ ಬಿಗ್ ಶಾಕ್ ನೀಡಿದ ಆ 6 ಸಂಸದರು ಯಾರು..?

2022ರ ಮಹಾ ಬಂಡಾಯದ ನಂತರ ಉದ್ಧವ್ ಠಾಕ್ರೆ ಅವರಿಗೆ ಸಿಕ್ಕ ಅತ್ಯಂತ ದೊಡ್ಡ ಪೆಟ್ಟು ಇದಾಗಿದೆ. ಶಿಂಧೆ ಪಾಳಯ ಸೇರಿದ ಆ 6 ಸಂಸದರ ವಿವರ ಹೀಗಿದೆ.
ಓಮ್ರಾಜೆ ನಿಂಬಾಳ್ಕರ್ (ಧಾರಾಶಿವ್)
ಸಂಜಯ್ ದಿನಾ ಪಾಟೀಲ್ (ಮುಂಬೈ ಈಶಾನ್ಯ)
ಸಂಜಯ್ ಜಾಧವ್ (ಪರಭಣಿ)
ಸಂಜಯ್ ದೇಶ್‌ಮುಖ್ (ಯವತ್ಮಾಲ್-ವಾಶಿಂ)
ನಾಗೇಶ್ ಪಾಟೀಲ್ ಅಷ್ಟಿಕರ್ (ಹಿಂಗೋಲಿ)
ಭಾವೂಸಾಹೇಬ್ ವಕ್ಚೌರೆ (ಶಿರಡಿ)

ಆಪರೇಷನ್ ಟೈಗರ್ ರಿಪೋರ್ಟ್ ಕಾರ್ಡ್

ಕಳೆದ ಕೆಲವು ತಿಂಗಳುಗಳಲ್ಲಿ ಶಿಂಧೆ ಸಾರಥ್ಯದ ಶಿವಸೇನೆ ಸೇರಿದ ಪ್ರಮುಖ ನಾಯಕರು.

  • 2026 ಜೂನ್ 7: ವಿಧಾನ ಪರಿಷತ್ ಚುನಾವಣೆಯ ನಾಮಪತ್ರ ಹಿಂಪಡೆದ ಕಾರಣಕ್ಕೆ ಕಾಂಗ್ರೆಸ್‌ನಿಂದ ಉಚ್ಚಾಟಿತಗೊಂಡಿದ್ದ ಯವತ್ಮಾಲ್‌ನ ಪ್ರಭಾವಿ ನಾಯಕ ಸಾಹೇಬರಾವ್ ಕಾಂಬ್ಳೆ ಶಿಂಧೆ ಬಣ ಸೇರಿದರು.
  • 2026 ಜೂನ್ 4: ಡೊಂಬಿವ್ಲಿಯ ಮಾಜಿ ಕಾರ್ಪೊರೇಟರ್‌ಗಳಾದ ಶೈಲೇಶ್ ಧಾತ್ರಕ್, ಮನಿಷಾ ಧಾತ್ರಕ್, ಶ್ರೀಕರ್ ಚೌಧರಿ ಮತ್ತು ಪ್ರಮೀಳಾ ಚೌಧರಿ (ಎಲ್ಲರೂ ಈ ಹಿಂದೆ ಬಿಜೆಪಿಯಲ್ಲಿದ್ದವರು) ಶಿವಸೇನೆಗೆ ಲಗ್ಗೆ ಇಟ್ಟರು.
  • 2026 ಮೇ 30: ಗೊಂಡಿಯಾ ಜಿಲ್ಲೆಯ ಶಿವಸೇನೆ (ಯುಬಿಟಿ) ಮುಖಂಡ ಮನೋಹರ್ ಚಂದ್ರಿಕಾಪುರೆ ಶಿಂಧೆ ಪಾಳಯ ಸೇರ್ಪಡೆಯಾದರು.
  • 2026 ಮೇ 28: ಲಾತೂರ್ ಜಿಲ್ಲೆಯ ಅಹ್ಮದ್‌ಪುರದ ಮಾಜಿ ಶಾಸಕ ವಿನಾಯಕ್ ಪಾಟೀಲ್ ಅವರು ಎನ್‌ಸಿಪಿ (ಶರದ್ ಪವಾರ್) ತೊರೆದು ಬರೋಬ್ಬರಿ 25,000 ಕಾರ್ಯಕರ್ತರೊಂದಿಗೆ ಶಿಂಧೆ ಸಮ್ಮುಖದಲ್ಲಿ ಪಕ್ಷ ಸೇರಿದರು.
  • 2026 ಮೇ 14: ಎನ್‌ಸಿಪಿ (ಅಜಿತ್ ಪವಾರ್) ಬಣದ ವಕ್ತಾರರಾಗಿದ್ದ ಆನಂದ್ ಪರಾಂಜಪೆ, ಶಿಂಧೆ ನೇತೃತ್ವದ ಶಿವಸೇನೆ ಸೇರಿದರು. (ಇವರು ರಾಜಕೀಯ ಆರಂಭಿಸಿದ್ದೇ ಶಿವಸೇನೆಯಲ್ಲಿ, ನಂತರ ಪವಾರ್ ಬಣ ಸೇರಿದ್ದರು).
  • 2026 ಏಪ್ರಿಲ್ 30: ಪ್ರಹಾರ್ ಜನಶಕ್ತಿ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಬಚ್ಚು ಕಡು ಶಿವಸೇನೆಗೆ ಬೆಂಬಲ ನೀಡಿದರು.
  • 2026 ಏಪ್ರಿಲ್ 23: ಧುಲೈನ ಮೊದಲ ಶಿವಸೇನೆ ಮೇಯರ್ ಹಾಗೂ ಠಾಕ್ರೆ ಬಣದ ನಿಷ್ಠಾವಂತ ನಾಯಕ ಭಗವಾನ್ ಕರಂಕಲ್ ಶಿಂಧೆ ಬಣ ಸೇರಿದರು.
  • 2026 ಏಪ್ರಿಲ್ 12: ಪಂಢರಪುರದ ಮುನ್ಸಿಪಲ್ ಅಧ್ಯಕ್ಷೆ ಪ್ರಣಿಕಾ ಭಾಲ್ಕೆ ಶಿಂಧೆ ಸಮ್ಮುಖದಲ್ಲಿ ಪಕ್ಷ ಸೇರಿದರು.
  • 2026 ಮಾರ್ಚ್ 6: ಜಲಗಾಂವ್‌ನ ಮಾಜಿ ಸಂಸದ ಹಾಗೂ ಠಾಕ್ರೆ ಬಣದ ಪ್ರಮುಖ ನಾಯಕ ಉನ್ಮೇಶ್ ಪಾಟೀಲ್ ಶಿವಸೇನೆಗೆ ಸೇರ್ಪಡೆಯಾದರು.ಫೆಬ್ರವರಿ 16, 2026: ನಾಂದೇಡ್‌ನ ಮಾಜಿ ಶಾಸಕ ಶಂಕರ್ ಧೊಂಡ್ಗೆ (ಈ ಹಿಂದೆ ತೆಲಂಗಾಣದ ಮಾಜಿ ಸಿಎಂ ಕೆಸಿಆರ್ ಅವರ ಬಿಆರ್‌ಎಸ್ ಪಕ್ಷದಲ್ಲಿದ್ದವರು) ಶಿಂಧೆ ಬಣ ಸೇರಿದರು.
  • 2026 ಜನವರಿ 18: ಬೀಡ್ ಜಿಲ್ಲೆಯ ಕೇಜ್ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಎನ್‌ಸಿಪಿ (ಶರದ್ ಪವಾರ್) ರಾಜ್ಯ ಉಪಾಧ್ಯಕ್ಷೆಯಾಗಿದ್ದ ಸಂಗೀತಾ ಥೋಂಬ್ರೆ ಮುಂಬೈನಲ್ಲಿ ಶಿಂಧೆ ಸಮ್ಮುಖದಲ್ಲಿ ಶಿವಸೇನೆ ಸೇರಿದರು.
  • 2026 ಜನವರಿ 11: ಶಿವಡಿಯ ಹಿರಿಯ ನಾಯಕ ದಗಡು ಸಾಕ್ಪಾಲ್ ಉದ್ಧವ್ ಬಣ ತೊರೆದು ಶಿಂಧೆ ನಾಯಕತ್ವ ಒಪ್ಪಿಕೊಂಡರು.
  • 2025 ಡಿಸೆಂಬರ್ 24: ಛತ್ರಪತಿ ಸಂಭಾಜಿನಗರದ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಜಿಲ್ಲಾಧ್ಯಕ್ಷ ಸುಮಿತ್ ಖಾಂಬೇಕರ್ ಶಿಂಧೆ ಸಮ್ಮುಖದಲ್ಲಿ ಶಿವಸೇನೆ ಸೇರಿದರು.
  • 2025 ಡಿಸೆಂಬರ್ 16: ನವಿ ಮುಂಬೈ ಮಹಾನಗರ ಪಾಲಿಕೆಯ ಉದ್ಧವ್ ಬಣದ ಕೀ ಲೀಡರ್ ಹಾಗೂ ಮಾಜಿ ಕಾರ್ಪೊರೇಟರ್ ಮನೋಹರ್ ಮಾಧ್ವಿ ಅಧಿಕೃತವಾಗಿ ಶಿಂಧೆ ಶಿವಸೇನೆ ಸೇರಿದರು.
  • 2025 ನವೆಂಬರ್ 11: ಉದ್ಗೀರ್‌ನ ಮಾಜಿ ಶಾಸಕ ಸುಧಾಕರ್ ಭಾಲೇರಾವ್ (2009 ಮತ್ತು 2014 ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದವರು, 2024 ರ ಅಸೆಂಬ್ಲಿ ಚುನಾವಣೆಯಲ್ಲಿ ಎನ್‌ಸಿಪಿ ಶರದ್ ಪವಾರ್ ಬಣದಲ್ಲಿದ್ದವರು) ಶಿಂಧೆ ಬಣ ಸೇರಿದರು.
  • 2025 ಮಾರ್ಚ್ 10: ಪುಣೆಯ ಕಸ್ಬಾ ಪೇಟೆಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ರವೀಂದ್ರ ಧಾಂಗೇಕರ್ ಕಾಂಗ್ರೆಸ್ ತೊರೆದು ಶಿಂಧೆ ಪಾಳಯ ಸೇರಿದರು.
ಕೇವಲ ಉದ್ಧವ್ ಠಾಕ್ರೆ ಬಣ ಮಾತ್ರವಲ್ಲದೆ ಕಾಂಗ್ರೆಸ್, ಎನ್‌ಸಿಪಿಯ ಎರಡೂ ಬಣಗಳು, ಎಂಎನ್‌ಎಸ್ ಮತ್ತು ಬಿಆರ್‌ಎಸ್‌ನಂತಹ ವಿವಿಧ ಪಕ್ಷಗಳ ಪ್ರಭಾವಿ ನಾಯಕರನ್ನು ಏಕನಾಥ್ ಶಿಂಧೆ ತಮ್ಮತ್ತ ಸೆಳೆಯುತ್ತಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಮುಂಬರುವ ರಾಜಕೀಯ ಮಹಾಸಮರಕ್ಕೆ ಶಿಂಧೆ ತಮ್ಮದೇ ಆದ ಭದ್ರಕೋಟೆಯನ್ನು ನಿರ್ಮಿಸಿಕೊಳ್ಳುತ್ತಿರುವುದು ಆಪರೇಷನ್ ಟೈಗರ್ ಮೂಲಕ ಸ್ಪಷ್ಟವಾಗುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net