Himanta Sarma | ಅಸ್ಸಾಂನ ಮುಸ್ಲಿಂ ಜನಸಂಖ್ಯೆ ಶೇ.50 ದಾಟಿದರೆ ಉಳಿದ ಸಮುದಾಯಗಳು ಅಳಿದುಹೋಗುತ್ತವೆ :ಸಿಎಂ ಹಿಮಂತ ಶರ್ಮಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Published on
ದಿಸ್ಪುರ್: ಅಸ್ಸಾಂನಲ್ಲಿ ದಶಕಗಳಿಂದ ನಡೆಯುತ್ತಿರುವ ಅನಿಯಂತ್ರಿತ ವಲಸೆಯಿಂದಾಗಿ ಸ್ಥಳೀಯ ಜನಸಂಖ್ಯೆ ತಮ್ಮ ಅಸ್ತಿತ್ವದ ಬಗ್ಗೆಯೇ ಯೋಚಿಸುವಂತಾಗಿದ್ದು, ರಾಜ್ಯದಲ್ಲಿನ ಮುಸ್ಲಿಂ ಜನಸಂಖ್ಯೆ ಶೇ.50 ದಾಟಿದರೆ ಉಳಿದ ಸಮುದಾಯಗಳು ಅಳಿಸಿಹೋಗುತ್ತವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.
ಅಜೆಂಡಾ ಆಜ್‌ತಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಶರ್ಮಾ, ಅಂಕಿಅಂಶಗಳ ಅಂದಾಜಿನ ಪ್ರಕಾರ, 1961 ರಿಂದ 4-5 ಪ್ರತಿಶತದಷ್ಟು ಸ್ಥಿರವಾದ ದಶಕದ ಬೆಳವಣಿಗೆಯ ದರದಿಂದಾಗಿ, 2021 ರಲ್ಲಿ ಸುಮಾರು 38 ಪ್ರತಿಶತದಷ್ಟು ಅಸ್ಸಾಂನ ಮುಸ್ಲಿಂ ಜನಸಂಖ್ಯೆಯು 2027 ರ ವೇಳೆಗೆ 40 ಪ್ರತಿಶತವನ್ನು ತಲುಪಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜನಸಂಖ್ಯಾ ಅಂಕಿಅಂಶಗಳನ್ನು ಉಲ್ಲೇಖಿಸಿದ ಶರ್ಮಾ, 1951 ರಲ್ಲಿ 80 ಲಕ್ಷದಷ್ಟಿದ್ದ ಜನಸಂಖ್ಯೆ ಇಂದು 3.1 ಕೋಟಿಗೆ ಏರಿಕೆಯಾಗಿದೆ, ಇದರಲ್ಲಿ ಸ್ಥಳೀಯರು ಸುಮಾರು 70 ಲಕ್ಷ, ಉಳಿದ 2.4 ಕೋಟಿ ಜನರು ವಲಸಿಗರು, ಈ ಒತ್ತಡವು ಅಸ್ಸಾಂನ ಭೂಮಿ, ಸಂಪನ್ಮೂಲಗಳು, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದರು. 1979–85ರ ಅಸ್ಸಾಂ ಚಳವಳಿ ಮತ್ತು ನಂತರದ 1985ರ ಅಸ್ಸಾಂ ಒಪ್ಪಂದವು ಬಾಂಗ್ಲಾದೇಶದಿಂದ ಅಕ್ರಮ ವಲಸೆಯ ಬಗ್ಗೆ ಕಳವಳಗಳಿಂದ ನಡೆಸಲ್ಪಟ್ಟಿದೆ, 40 ವರ್ಷಗಳ ಸುಧೀರ್ಘ ಪಯಣದ ಬಳಿಕವೂ ನಾವು ಇನ್ನೂ ಅದರ ಅನುಷ್ಠಾನಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಶರ್ಮಾ ಅಸಹಾಯಕತೆ ವ್ಯಕ್ತಪಡಿಸಿದರು.

ಲಕ್ಷ ಕೊಟ್ಟರು ಮುಸ್ಲಿಮರು ನೀಡಲ್ಲ...

ಮುಸ್ಲಿಮರು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ತಮಗೆ ಮತ ಹಾಕುವುದಿಲ್ಲ ಎಂದಿರುವ ಹಿಮಂತ್​ ಶರ್ಮಾ, ಒಂದು ಘಟನೆಯನ್ನೂ ಸಹ ಉಲ್ಲೇಖಿಸಿದ್ದು, ಈ ಹಿಂದೆ ಒಬ್ಬ ಮುಸ್ಲಿಂ ವ್ಯಕ್ತಿ, ಅಗತ್ಯವಿದ್ದರೆ ಮೂತ್ರಪಿಂಡವನ್ನು ದಾನ ಮಾಡುತ್ತೇನೆ ಆದರೆ ನಿಮಗೆ ಮತ ನೀಡುವುದಿಲ್ಲ ಎಂದಿದ್ದನ್ನು ನೆನಪಿಸಿಕೊಂಡರು. ಮತದಾನ ಎನ್ನುವುದು ಯೋಜನೆಗಳಿಗಾಗಿ ಅಲ್ಲ, ಬದಲು ಸಿದ್ಧಾಂತಕ್ಕಾಗಿ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.
ಒಂದು ಲಕ್ಷ ರೂಪಾಯಿ ನೀಡಿದರೂ ಮುಸ್ಲಿಂ ಮತದಾರರು ತಮ್ಮನ್ನು ಬೆಂಬಲಿಸುವುದಿಲ್ಲ ಎಂದಿರುವ ಶರ್ಮಾ, ಅಸ್ಸಾಂನಲ್ಲಿ ನಮ್ಮ ಮಿಯಾ ಮುಸ್ಲಿಂ ಜನರ ದೊಡ್ಡ ಪಾಲು ನನಗೆ ಮತ ಹಾಕುವುದಿಲ್ಲ ಎಂದರು. ಅಕ್ರಮ ವಲಸೆಯ ಬಗ್ಗೆ ತಮ್ಮ ನಿಲುವನ್ನು ಪುನರುಚ್ಚರಿಸಿದ ಹಿಮಂತ್​ ಶರ್ಮಾ, ಅಕ್ರಮ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳುವುದು ತಮ್ಮ ಸಾಂವಿಧಾನಿಕ ಜವಾಬ್ದಾರಿ ಎಂದು ಹೇಳಿದರು. ಕೆಲವು ಮಿಯಾ ಮುಸ್ಲಿಮರು ಸುಮಾರು 10 ಲಕ್ಷ ಎಕರೆ ಅರಣ್ಯ ಭೂಮಿಯನ್ನು ಅತಿಕ್ರಮಿಸಿದ್ದಾರೆ, ಅಂತಹವರ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಗಳು ಸಮುದಾಯದ ರಾಜಕೀಯ ವಿರೋಧವನ್ನು ಹೆಚ್ಚಿಸಿವೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net