_1787239887698.webp?w=480&auto=format%2Ccompress&fit=max)
_1787239887698.webp?w=480&auto=format%2Ccompress&fit=max)
North Korea:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಕ್ಷಿಣ ಕೊರಿಯಾ ಜೊತೆಗಿನ ಜಂಟಿ ಸೇನಾ ಅಭ್ಯಾಸವನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ಉತ್ತರ ಕೊರಿಯಾ ಈ ನಡೆಯನ್ನು ಬಹಿರಂಗವಾಗಿಯೇ ತಿರಸ್ಕರಿಸಿದೆ. ಇದರ ಬೆನ್ನಲ್ಲೇ, ಗುರುವಾರ ಉತ್ತರ ಕೊರಿಯಾ ತನ್ನ ತೀರದಿಂದ ಸಮುದ್ರದ ಕಡೆಗೆ ಸುಮಾರು 10 ಅಲ್ಪಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಅಮೆರಿಕ ಮತ್ತು ದಕ್ಷಿಣ ಕೊರಿಯಾಗೆ ಪ್ರಬಲ ಎಚ್ಚರಿಕೆ ನೀಡಿದೆ.
ದಕ್ಷಿಣ ಕೊರಿಯಾದ ಮಿಲಿಟರಿ ಮಾಹಿತಿಯ ಪ್ರಕಾರ, ರಾಜಧಾನಿ ಪ್ಯೊಂಗ್‌ಯಾಂಗ್ ಪ್ರದೇಶದಿಂದ ಸಂಜೆ 5 ಗಂಟೆಯ ಸುಮಾರಿಗೆ ಈ ಕ್ಷಿಪಣಿಗಳನ್ನು ಹಾರಿಸಲಾಗಿದ್ದು, ಇವು ತಲಾ ಸುಮಾರು 300 ಕಿಲೋಮೀಟರ್ ದೂರ ಸಾಗಿ ಸಮುದ್ರಕ್ಕೆ ಬಿದ್ದಿವೆ. ಈ ಘಟನೆಯ ನಂತರ ದಕ್ಷಿಣ ಕೊರಿಯಾ ತನ್ನ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಅಮೆರಿಕ ಮತ್ತು ಜಪಾನ್ ದೇಶಗಳೊಂದಿಗೆ ಕ್ಷಿಪಣಿ ಉಡಾವಣೆಯ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಇತ್ತ ಜಪಾನ್ ಪ್ರಧಾನಿ ಕಾರ್ಯಾಲಯವೂ ಸಹ ಈ ಕ್ಷಿಪಣಿ ಹಾರಾಟವನ್ನು ಪತ್ತೆಹಚ್ಚಿರುವುದಾಗಿ ಖಚಿತಪಡಿಸಿದೆ.
ಸಮರಾಭ್ಯಾಸ ಕಡಿತಗೊಳಿಸಿದ್ದ ಟ್ರಂಪ್!
ಉಲ್ಚಿ ಫ್ರೀಡಂ ಶೀಲ್ಡ್ ಜಂಟಿ ಸೇನಾ ಅಭ್ಯಾಸ ಆರಂಭವಾಗುವ ಕೆಲವೇ ಸಮಯದ ಮೊದಲು, ಅದರ ಪ್ರಮಾಣವನ್ನು ಕಡಿಮೆ ಮಾಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆಂಟಗನ್‌ಗೆ ಸೂಚಿಸಿದ್ದರು. ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಜೊತೆಗಿನ ಉತ್ತಮ ಬಾಂಧವ್ಯ ಹಾಗೂ ಇರಾನ್ ವಿಚಾರದಲ್ಲಿ ದಕ್ಷಿಣ ಕೊರಿಯಾ ಬೆಂಬಲ ನೀಡದಿರುವುದನ್ನು ಅವರು ಇದಕ್ಕೆ ಕಾರಣವಾಗಿ ನೀಡಿದ್ದರು. ಇದರಿಂದಾಗಿ 11 ದಿನಗಳ ಸಮರಾಭ್ಯಾಸದ ಅವಧಿಯನ್ನು ಅರ್ಧಕ್ಕೆ ಇಳಿಸಿ, ಕೆಲವು ತರಬೇತಿಗಳನ್ನು ರದ್ದುಗೊಳಿಸಲಾಯಿತು.
ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್ ಅವರು ಅಮೆರಿಕದ ಈ ನಡೆಯನ್ನು ತಳ್ಳಿಹಾಕಿದ್ದಾರೆ. ಸೇನಾ ಅಭ್ಯಾಸದ ಅವಧಿ ಹಾಗೂ ಗಾತ್ರವನ್ನು ಕಡಿಮೆ ಮಾಡಿದ ತಕ್ಷಣವೇ ಅಮೆರಿಕದ ಆಕ್ರಮಣಕಾರಿ ಸ್ವಭಾವ ಬದಲಾಗುವುದಿಲ್ಲ. ಅಮೆರಿಕ ತನ್ನ ಈ ಸಣ್ಣ ನಡೆಯನ್ನು ಒಳ್ಳೆಯ ಉದ್ದೇಶವೆಂದು ಬಿಂಬಿಸಲು ಯತ್ನಿಸಿದರೆ ನಾವದಕ್ಕೆ ಸ್ಪಂದಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ತಮ್ಮ ಸಹೋದರ ಕಿಮ್ ಮತ್ತು ಟ್ರಂಪ್ ನಡುವಿನ ವೈಯಕ್ತಿಕ ಬಾಂಧವ್ಯ ಇನ್ನೂ ಉತ್ತಮವಾಗಿದೆ ಎಂದು ಕಿಮ್ ಯೋ ಜಾಂಗ್ ತಿಳಿಸಿದ್ದಾರೆ.
ಭವಿಷ್ಯದ ರಾಜತಾಂತ್ರಿಕ ಸವಾಲುಗಳು
ಅಮೆರಿಕ ಮತ್ತು ದಕ್ಷಿಣ ಕೊರಿಯಾ ತಮ್ಮ ಸೇನಾ ಅಭ್ಯಾಸವನ್ನು ಸ್ವಯಂ ರಕ್ಷಣೆಗೆ ಎಂದು ಹೇಳಿದರೆ, ಉತ್ತರ ಕೊರಿಯಾ ಇದನ್ನು ತನ್ನ ಮೇಲಿನ ದಾಳಿಯ ಪೂರ್ವಾಭ್ಯಾಸವೆಂದೇ ಭಾವಿಸುತ್ತದೆ. 2019 ರ ಶೃಂಗಸಭೆ ಮುರಿದುಬಿದ್ದ ನಂತರ ಕಿಮ್ ಜಾಂಗ್ ಉನ್ ಅಮೆರಿಕವನ್ನು ಬದಿಗೊತ್ತಿ ರಷ್ಯಾದೊಂದಿಗೆ ಬಾಂಧವ್ಯ ಹೆಚ್ಚಿಸಿಕೊಂಡಿದ್ದಾರೆ. ಪ್ರಸ್ತುತ ಕಿಮ್ ತಮ್ಮ ಪರಮಾಣು ಯೋಜನೆಯನ್ನು ಮಾತುಕತೆಗೆ ತರಲು ಸಿದ್ಧರಿಲ್ಲ. ಆದ್ದರಿಂದ ಅಮೆರಿಕದಿಂದ ದೊಡ್ಡ ಮಟ್ಟದ ರಿಯಾಯಿತಿ ಸಿಗದ ಹೊರತು, ಕೇವಲ ಸೇನಾ ಅಭ್ಯಾಸ ಕಡಿತಗೊಳಿಸುವ ಸಣ್ಣ ನಿರ್ಧಾರಗಳಿಗೆ ಉತ್ತರ ಕೊರಿಯಾ ಮಣಿಯುವುದಿಲ್ಲ ಎಂಬುದನ್ನು ಈ ಕ್ಷಿಪಣಿ ಉಡಾವಣೆಗಳು ಸ್ಪಷ್ಟಪಡಿಸಿವೆ(ಏಜೆನ್ಸೀಸ್).